ಬೆಂಗಳೂರು :ನಗರದ ಹೊರವಲಯದಲ್ಲಿ 8 ಪಥದ ಪೆರಿಫೆರೆಲ್ ರಸ್ತೆ ನಿರ್ಮಾಣ ಯೋಜನೆ ಹಿನ್ನೆಲೆ ಪರಿಸರ ಪರಿಣಾಮ ಅಧ್ಯಯನಕ್ಕಾಗಿ ಹೊಸದಾಗಿ ಸಾರ್ವಜನಿಕ ಅಹವಾಲು ಸ್ವೀಕರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹೈಕೋರ್ಟ್ಗೆ ತಿಳಿಸಿದೆ.
ಯೋಜನೆ ಸಂಬಂಧ ಆನ್‌ಲೈನ್ ಮೂಲಕ ಅಹವಾಲು ಸಲ್ಲಿಕೆಗೆ ಅವಕಾಶ ಕಲ್ಪಿಸಿರುವ ಬಿಡಿಎ ಮತ್ತು ಕೆಎಸ್‌ಪಿಸಿಬಿ ಕ್ರಮ ಆಕ್ಷೇಪಿಸಿ ಅನುಕ್ಷಾ ಗುಪ್ತಾ ಸೇರಿ ಮೂವರು ಕಾನೂನು ಪದವಿ ವಿದ್ಯಾರ್ಥಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಕೆಎಸ್‌ಪಿಸಿಬಿ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಯೋಜನೆ ಕುರಿತು ಹೊಸದಾಗಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಗುವುದು. ಅದಕ್ಕಾಗಿ ದಿನಾಂಕ ನಿಗದಿಪಡಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ :ತುಮಕೂರು ರಸ್ತೆ-ಹೊಸೂರು ರಸ್ತೆ ನಡುವೆ ನಗರದಲ್ಲಿ ಎಂಟು ಪಥದ ಫೆರಿಫೆರೆಲ್ ರಸ್ತೆ ನಿರ್ಮಾಣ ಯೋಜನೆ ಕೈಗೊಳ್ಳಲು ಬಿಡಿಎ ಮುಂದಾಗಿದೆ. ಆದರೆ, ಪರಿಸರ ಪರಿಣಾಮ ಅಧ್ಯಯನಕ್ಕೆ ಆನ್‌ಲೈನ್ ಆ್ಯಪ್ ಮೂಲಕ ಸಾರ್ವಜನಿಕ ಅಹವಾಲು ಆಲಿಸಲು ನಿರ್ಧರಿಸಿದೆ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ದುರ್ಬಲ ವರ್ಗದವರಿಗೆ ಸಾಧ್ಯವಾಗುವುದಿಲ್ಲ.
ಕೇವಲ ತಾಂತ್ರಿಕವಾಗಿ ಮುಂದುವರಿದವರು ಮಾತ್ರ ಭಾಗವಹಿಸಬಹುದು. ಎಲ್ಲರಿಗೂ ಯೋಜನೆ ಕುರಿತು ತಮ್ಮ ಅಭಿಪ್ರಾಯ ಹೇಳಲು ಅವಕಾಶವಾಗುವುದಿಲ್ಲ. ಇದು ಜನರ ಹಕ್ಕುಗಳನ್ನು ಉಲ್ಲಂಘಿಸಿದಂತೆ. ಆದ್ದರಿಂದ ಆನ್‌ಲೈನ್ ಮೂಲಕ ಸಾರ್ವಜನಿಕ ಅಹವಾಲು ಸ್ವೀಕಾರ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕೋರಿದ್ದಾರೆ.
ಅರ್ಜಿಯನ್ನು 2020ರ ಸೆ.23ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಈಗಾಗಲೇ ಆನ್‌ಲೈನ್ ಮೂಲಕ ಸಾರ್ವಜನಿಕ ಅಹವಾಲು ಸ್ವೀಕಾರ ಪ್ರಕ್ರಿಯೆ ಆರಂಭಿಸಿದೆ. ಈ ಹಂತದಲ್ಲಿ ತಡೆ ನೀಡಲಾಗದು ಎಂದು ತಿಳಿಸಿತ್ತು. ನಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ಬಿಡಿಎ ಮತ್ತು ಕೆಎಸ್‌ಪಿಸಿಬಿಗೆ ನೋಟಿಸ್ ಜಾರಿಗೊಳಿಸಿತ್ತು.
ಇದನ್ನೂ ಓದಿ:ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ರದ್ದು ವಿಚಾರ : ಪಿಪಿಗಳು ವಿವೇಚನೆ ಬಳಸಬೇಕು