ಬೆಂಗಳೂರು:ವಿವಾದಿತ ಮತಾಂತರ ನಿಷೇಧ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲೇ ಮಂಡಿಸಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ. ಈಗಾಗಲೇ ಬಿಜೆಪಿ ಶಾಸಕರು, ಸಚಿವರು ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅಗತ್ಯತೆಯ ಬಗ್ಗೆ ಪ್ರಬಲವಾಗಿ ವಾದಿಸುತ್ತಿದ್ದಾರೆ.
ಬೆಳಗಾವಿ ಅಧಿವೇಶನದಲ್ಲೇ ಮತಾಂತರ ನಿಷೇಧ ಮಸೂದೆ ತರುವುದು ಅನುಮಾನ ಎನ್ನಲಾಗಿತ್ತು. ಆದರೆ, ಮೂಲಗಳ ಪ್ರಕಾರ ಬೆಳಗಾವಿ ಅಧಿವೇಶನದಲ್ಲೇ ವಿಧೇಯಕ ಮಂಡನೆಗೆ ಸರ್ಕಾರ ತಯಾರಿ ನಡೆಸುತ್ತಿದೆ.
ಮತಾಂತರ ನಿಷೇಧ ವಿಧೇಯಕ ಮಂಡನೆಗೆ ಸಿದ್ಧತೆ:
ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ ಮಂಡನೆಗೆ ಸರ್ಕಾರ ಎಲ್ಲಾ ತಯಾರಿಗಳನ್ನು ನಡೆಸುತ್ತಿದೆ. ಈಗಾಗಲೇ ಕರಡು ವಿಧೇಯಕ ಸಿದ್ಧವಾಗಿದ್ದು, ಕರಡು ವಿಧೇಯಕವನ್ನು ಎರಡು ಬಾರಿ ಸ್ಕ್ರುಟಿನಿಗೂ ಕಳುಹಿಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿ ಅಧಿವೇಶನದಲ್ಲೇ ವಿವಾದಿತ ಮತಾಂತರ ನಿಷೇಧ ವಿಧೇಯಕ ಮಂಡನೆಗೆ ತಯಾರಿಗಳನ್ನು ನಡೆಸಲಾಗಿದೆ. ಈ ಮುಂಚೆ ಕೊನೆ ಕ್ಷಣದಲ್ಲಿ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಹಾಗೂ ಕರ್ನಾಟಕ ಧಾರ್ಮಿಕ ಕಟ್ಟಡ (ಸಂರಕ್ಷಣೆ) ವಿಧೇಯಕ 2021ನ್ನು ಮಂಡಿಸಲಾಗಿತ್ತು. ಅದೇ ರೀತಿ ಸರ್ಕಾರ ಬೆಳಗಾವಿ ಅಧಿವೇಶನಲ್ಲೇ ಮತಾಂತರ ನಿಷೇಧ ವಿಧೇಯಕ ಮಂಡಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಉತ್ತರ ಪ್ರದೇಶ, ಉತ್ತರಾಖಂಡ, ಗುಜರಾತ್, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ ಸೇರಿ 8 ವಿವಿಧ ರಾಜ್ಯಗಳಲ್ಲಿನ ಮತಾಂತರ ನಿಷೇಧ ಕಾಯ್ದೆಯನ್ನು ತರಿಸಿ ಶಾಸನ ರಚನೆ ಇಲಾಖೆ ಪರಿಶೀಲನೆ ನಡೆಸಿದೆ. ಕಾನೂನು ಇಲಾಖೆಯೂ ಇತರೆ ರಾಜ್ಯಗಳ ಕಾಯ್ದೆಯಲ್ಲಿನ ಕಾನೂನಾತ್ಮಕ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.