ಬೆಂಗಳೂರು : ರಾಜರಾಜೇಶ್ವರಿ ನಗರ ಉಪಚುನಾವಣೆಗೆ ಸಕಲ ಸಿದ್ಧತೆ ನಡೆದಿದ್ದು, ಈ ಬಗ್ಗೆ ಬಿಬಿಎಂಪಿ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದರು.
ಆರ್. ಆರ್ ನಗರ ಉಪಚುನಾವಣೆ ನವೆಂಬರ್ 3 ರಂದು ನಡೆಯಲಿದೆ. ಇದುವರೆಗೆ 22 ಅಭ್ಯರ್ಥಿಗಳಿಂದ 27 ನಾಮಪತ್ರ ಸಲ್ಲಿಕೆಯಾಗಿವೆ. ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ನವೆಂಬರ್ 3 ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆ ಮತದಾನ ನಡೆಯಲಿದೆ. ಒಟ್ಟು 678 ಮತಗಟ್ಟೆಗಳಿದ್ದು, ಚುನಾವಣಾ ಕಾರ್ಯಕ್ಕಾಗಿ 2043 ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಒಟ್ಟು 79 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದ್ದು, ಅತೀ ಕಡಿಮೆ ಹಾಗೂ ಅತೀ ಹೆಚ್ಚು ಮತದಾನ ಆಗಿರುವ ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳಾಗಿವೆ. ಕ್ಷೇತ್ರದಲ್ಲಿ ಒಟ್ಟು 4,62,209 ಮತದಾರರಿದ್ದಾರೆ. ಹಲಗೆವಡೇರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಮತ ಎಣಿಕೆ ನಡೆಯಲಿದ್ದು, ಕೇಂದ್ರದಿಂದ ಈಗಾಗಲೇ ಇಬ್ಬರು ಅಧಿಕಾರಿಗಳು ವೀಕ್ಷಕರಾಗಿ ನಗರಕ್ಕೆ ಬಂದಿದ್ದಾರೆ. ಶೇ. 100 ರಷ್ಟು ಗುರುತಿನ ಚೀಟಿಗಳನ್ನು ನೀಡಲಾಗಿದೆ ಎಂದರು.
ಮತದಾರರ ಗುರುತಿನ ಚೀಟಿಗಳನ್ನು ಬೇರೆಯವರು ಕೇಳುತ್ತಿದ್ದಾರೆ ಎಂದು ದೂರುಗಳು ಬರುತ್ತಿವೆ. ಯಾರೂ ಕೂಡ ಗುರುತಿನ ಚೀಟಿ , ಮೊಬೈಲ್ ನಂಬರ್ ನೀಡದೆ ಎಚ್ಚರವಹಿಸಬೇಕು. ಈ ಬಗ್ಗೆ ಹೆಚ್ಚಿನ ನಿಗಾ ಇಡುವಂತೆ ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಗಿದೆ. ಬೇರೆಯವರ ಗುರುತಿನ ಚೀಟಿ ಪಡೆಯುವಂತಿಲ್ಲ. ದೂರವಾಣಿ ಮೂಲಕವೂ ಕೇಳುವಂತಿಲ್ಲ. ಒಂದು ವೇಳೆ ಈ ರೀತಿ ಮಾಡಿದ್ದು ಕಂಡು ಬಂದರೆ, ಅಂಥವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಇದೇ ವೇಳೆ ಎಚ್ಚರಿಸಿದರು.