ಬೆಂಗಳೂರು: 2024ರ ಗಣರಾಜ್ಯೋತ್ಸವದ ಅಂಗವಾಗಿ ನಗರದ ಲಾಲ್ಬಾಗ್ನಲ್ಲಿ ಹಮ್ಮಿಕೊಳ್ಳುವ ಫಲಪುಷ್ಪ ಪ್ರದರ್ಶನಕ್ಕೆ ಪ್ರಸಕ್ತ ವರ್ಷ ವಿಶ್ವಗುರು ಬಸವಣ್ಣನ ಜೀವನ, ಸಂದೇಶಗಳನ್ನು ನೀಡುವ ಕುರಿತ ವಿಷಯವಸ್ತು ಆಯ್ಕೆ ಮಾಡಿಕೊಂಡಿರುವ ರಾಜ್ಯ ತೋಟಗಾರಿಕೆ ಇಲಾಖೆ, ಪ್ರದರ್ಶನಕ್ಕೆ ಭರದ ಸಿದ್ದತೆ ನಡೆಸುತ್ತಿದೆ. ಬಸವಣ್ಣನವರನ್ನು ಪುಷ್ಪಗಳಿಂದಲೇ ಜನರಿಗೆ ತೋರಿಸುವ ಮೂಲಕ ಅವರ ಕುರಿತ ಸಂದೇಶವನ್ನು ತಿಳಿಸಲು ಮುಂದಾಗಿರುವ ಇಲಾಖೆ ಜನವರಿ 18ರಿಂದ 28ರವರೆಗೆ ಅಂದರೆ 11 ದಿನಗಳ ಕಾಲ ವಚನ ಸಾಹಿತ್ಯದ ಪರಿಕಲ್ಪನೆಯಡಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳುತ್ತಿದೆ.
12ನೇ ಶತಮಾನದ ತತ್ವಜ್ಞಾನಿ, ಸಮಾಜ ಸುಧಾರಕ ಬಸವಣ್ಣ ಲಿಂಗ ತಾರತಮ್ಯದೊಂದಿಗೆ ಮೂಢನಂಬಿಕೆಗಳನ್ನು ನಿರಾಕರಿಸಿದ್ದರು. ಮಹಿಳೆಯರಿಗೆ ಸಮಾನತೆ ಸಿಗಬೇಕೆಂದು ಪ್ರತಿಪಾದಿಸಿದ್ದರು. ಅವರ ಚಿಂತನೆ, ಕಾಯಕ ವೈಖರಿಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿವೆ. ಹೀಗಾಗಿ, ಈ ಬಾರಿ 'ಬಸವಣ್ಣ ಮತ್ತು ವಚನ ಸಾಹಿತ್ಯ' ಕುರಿತಂತೆ ಪುಷ್ಪ ಮಾದರಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ತೋಟಗಾರಿಕೆ ಅಧಿಕಾರಿಗಳು ಮಾಹಿತಿ ನೀಡಿದರು.
ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಗಂಗಾಂಬಿಕೆ, ನೀಲಾಂಬಿಕೆ ಮತ್ತಿತರ ವಚನಕಾರರ ಪ್ರತಿಮೆಗಳು, ಅವರ ವಚನಗಳು ಮತ್ತು ವಚನಕಾರರ ಅಂಕಿತನಾಮಗಳು ಹೀಗೆ ಸಮಗ್ರ ವಚನ ಸಾಹಿತ್ಯವೇ ಫಲಪುಷ್ಪ ಪ್ರದರ್ಶನದಲ್ಲಿರಲಿದೆ. ಇದೊಂದು ಜ್ಞಾನದ ಕಣಜವಾಗಲಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದರೆ, ನೋಡುಗರಿಗೆ ಜ್ಞಾನದ ಅರಿವಿನ ತಾಣವಾಗಲಿದೆ ಎಂದು ಅಧಿಕಾರಿಗಳು ವಿವರಿಸಿದರು. ಚಳಿಗಾಲದಲ್ಲಿ ಸಾಕಷ್ಟು ಅಪರೂಪದ ಹಾಗೂ ಆಕರ್ಷಕ ಹೂವುಗಳ ಲಭ್ಯವಾಗುವುದರಿಂದ ರಾಜ್ಯದ ವಿವಿಧ ಗಿರಿಧಾಮಗಳಿಂದ ಹೂಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಮೂಲಕ ವಚನ ಪ್ರಬುದ್ಧತೆಯನ್ನು ಸಾರಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ವಿವರಿಸಿದರು.