ಬೆಂಗಳೂರು:ನಾಗವಾರ ವಾರ್ಡ್ ಸಂಖ್ಯೆ-23 ವ್ಯಾಪ್ತಿಯಲ್ಲಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2021ರ ಅಂಗವಾಗಿ ವೀರಣ್ಣ ಪಾಳ್ಯ ಮೇಲುಸೇತುವೆ ಕೆಳಭಾಗದಲ್ಲಿ ಶನಿವಾರ ರಂಗೋಲಿ ಹಬ್ಬವನ್ನು ಆಚರಿಸಲಾಯ್ತು.
ಈ ಒಂದು ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ವಿಶೇಷ ಆಯುಕ್ತರು ಡಿ.ರಂದೀಪ್ ಭಾಗಿಯಾಗಿದ್ದರು. ಪೌರಕಾರ್ಮಿಕರು, ನಾಗರಿಕರು, ಲಿಂಕ್ ವರ್ಕರ್ಸ್ಗಳು ಹಾಗೂ ಸ್ವಯಂಸೇವಕರು ಸೇರಿ ಸುಮಾರು 100 ಮಂದಿ “ರಂಗೋಲಿ ಹಬ್ಬ”ದಲ್ಲಿ ಪಾಲ್ಗೊಂಡು, ವಿವಿಧ ರಂಗೋಲಿಗಳನ್ನು ಬಿಡಿಸಿದ್ದಾರೆ. ರಂಗೋಲಿ ಹಬ್ಬದಲ್ಲಿ ಪಾಲ್ಗೊಂಡವರಿಗೆ ಪ್ರಶಸ್ತಿ ಪತ್ರ ಕೂಡ ವಿತರಿಸಲಾಯಿತು.
ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2021 ಇನ್ನು 2 ತಿಂಗಳು ನಡೆಯಲಿದ್ದು, ಬಿಬಿಎಂಪಿಯು ಉತ್ತಮ ರ‍್ಯಾಂಕ್ ಪಡೆಯಲು ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಅದರಂತೆ ನಿನ್ನೆ ರಂಗೋಲಿ ಹಬ್ಬವನ್ನು ಆಯೋಜಿಸಲಾಗಿತ್ತು. ಇದೇ ರೀತಿ ನಗರದಲ್ಲಿ ಸ್ವಚ್ಛತೆ ಕಾಪಾಡಿ ಸ್ವಚ್ಛ ನಗರವನ್ನಾಗಿ ಮಾಡಲು ನಾಗರಿಕರ ಸಹಕಾರ ಬಹಳ ಮುಖ್ಯವಾಗಿದ್ದು, ಸ್ವಚ್ಛತೆ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲಾಗುತ್ತದೆ. ಈ ನಿಟ್ಟಿನಲ್ಲಿ ಸೈಕ್ಲಥಾನ್, ಬೀದಿ ನಾಟಕ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು.
ಓದಿ: ಒಂದು ವರ್ಷ ಕಾಲ ನಿರಂತರವಾಗಿ ಪಂಡಿತ ಭೀಮಸೇನ ಜೋಷಿ ಜನ್ಮಶತಾಬ್ಧಿ ಆಚರಣೆ
ನಾಗರಿಕರು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಭಾಗಿಯಾಗಿ ನಗರಕ್ಕೆ ಉತ್ತಮ ರ‍್ಯಾಂಕ್ ಪಡೆಯಲು ಸಹಕರಿಸಬೇಕು ಎಂದು ರಂದೀಪ್ ತಿಳಿಸಿದರು.