ಬೆಂಗಳೂರು :ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಮಗ್ರ ರೋಗನಿರ್ಣಯ ಪೂರೈಕೆದಾರ ಮೆಡಾಲ್ ಪ್ರಕಾರ, ಕಿರಿಯ ವಯೋಮಾನದವರಲ್ಲಿ ಪ್ರಿಡಯಾಬಿಟಿಕ್ಸ್ ಶೇಕಡಾವಾರು ಪ್ರಮಾಣದಲ್ಲಿ ಅಪಾಯಕಾರಿ ಹೆಚ್ಚಳವನ್ನು ಕಂಡಿದೆ. ಮೆಡಾಲ್ ದಕ್ಷಿಣ ಭಾರತದಾದ್ಯಂತ 2017ರಿಂದ ಪರೀಕ್ಷೆಯನ್ನು ನಡೆಸಿದೆ. ಇದರ ಫಲಿತಾಂಶಗಳ ಕುರಿತ ಡೇಟಾ ವಿಶ್ಲೇಷಣೆಯ ಪ್ರಕಾರ, ಬೊಜ್ಜು ಮತ್ತು ಮಧುಮೇಹ ಹರಡುವಿಕೆ ಹೆಚ್ಚಾಗುತ್ತಿರುವ ಪ್ರವೃತ್ತಿಯನ್ನು ತೋರಿಸುತ್ತಿದೆ.
ಸ್ಥೂಲಕಾಯತೆ ಹೆಚ್ಚಳ :ಮೆಡಾಲ್‌ನ ದತ್ತಾಂಶ ಪ್ರಕಾರ, ಸುಮಾರು 9 ಲಕ್ಷ ಹೆಚ್ಬಿಎ1ಸಿ ಪರೀಕ್ಷೆಗಳ ಫಲಿತಾಂಶಗಳ ಮೇಲೆ ಸುಮಾರು 2 ಲಕ್ಷ ಬಿಎಂಐ ಮೌಲ್ಯಗಳಲ್ಲಿ ಸ್ಥೂಲಕಾಯತೆ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಡಿಸ್ಲಿಪಿಡೆಮಿಯಾ ಮುಂತಾದ ಸಾಂಕ್ರಾಮಿಕವಲ್ಲದ ರೋಗಗಳ ಹರಡುವಿಕೆ ಹೆಚ್ಚುತ್ತಿದೆ. ಇವು ಭಾರತದಲ್ಲಿ ಗಣನೀಯವಾಗಿ ಹೆಚ್ಚಾಗುತ್ತದೆ ಎಂದು ವರದಿ ತಿಳಿಸಿದೆ.
ಸ್ಥೂಲಕಾಯತೆಯ ಹೆಚ್ಚಳಕ್ಕೆ ಪ್ರಾಥಮಿಕ ಅಂಶವೆಂದರೆ ದೈಹಿಕ ಚಟುವಟಿಕೆಯ ಕೊರತೆ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ. ಸ್ಥೂಲಕಾಯತೆಯು ಕೊಬ್ಬಿನಾಮ್ಲಗಳ ಹೆಚ್ಚಳ ಮತ್ತು ಉರಿಯೂತವನ್ನು ಉಂಟು ಮಾಡುತ್ತದೆ. ಇದು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗುತ್ತದೆ. ಇದು ಟೈಪ್ 2 ಮಧುಮೇಹಕ್ಕೆ ಕಾರಣವಾಗಬಹುದು ಎಂದು ಹೇಳಿದೆ.
ಹೆಚ್ಬಿಎ1ಸಿ ಪರೀಕ್ಷೆಯು ಕೆಂಪು ರಕ್ತ ಕಣಗಳಿಗೆ ಎಷ್ಟು ಗ್ಲೂಕೋಸ್ ಬಂಧಿತವಾಗಿದೆ ಎಂಬುದನ್ನು ಅಳೆಯುತ್ತದೆ. ಈ ಪರೀಕ್ಷೆಯು ಕಳೆದ 3-4 ತಿಂಗಳುಗಳಿಂದ ರಕ್ತದಲ್ಲಿನ ಗ್ಲೂಕೋಸ್‌ನ ಸರಾಸರಿ ಮಟ್ಟವನ್ನು ತೋರಿಸುತ್ತದೆ. ಬಿಎಂಐ ಹೆಚ್ಚಿನ ಜನರಿಗೆ ದೇಹದ ಕೊಬ್ಬಿನ ಪ್ರಮಾಣಿತ ಸೂಚಕವಾಗಿದೆ. ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದಾದ ತೂಕದ ವರ್ಗಗಳನ್ನು ಪರೀಕ್ಷಿಸಲು ಇದನ್ನು ಬಳಸಲಾಗುತ್ತದೆ ಎಂದಿದೆ.
ಇದನ್ನೂ ಓದಿ:ಬೇಸಿಗೆಯಲ್ಲಿ ಆರೋಗ್ಯಕರವಾಗಿರಲು ಇಲ್ಲಿವೆ ತಜ್ಞರ ಸಲಹೆಗಳು...
ಈ ದೀರ್ಘಕಾಲದ ಪರಿಸ್ಥಿತಿಗಳು ಹೆಚ್ಚಾಗಿ ವಯಸ್ಸಾದ ಜನರಲ್ಲಿ ಗುರುತಿಸಲ್ಪಡುತ್ತವೆ ಎಂಬುದು ಸಾಮಾನ್ಯ ತಪ್ಪು ಗ್ರಹಿಕೆಯಾಗಿದೆ. ವರ್ಷದಿಂದ ವರ್ಷಕ್ಕೆ ಅಂಕಿ-ಅಂಶಗಳು ಕಿರಿಯ ವಯಸ್ಸಿನ ಗುಂಪುಗಳಲ್ಲಿ ಪ್ರಿಡಿಯಾಬಿಟಿಸ್‌ನ ಹೆಚ್ಚುತ್ತಿರುವ ಪ್ರವೃತ್ತಿಯನ್ನು ತೋರಿಸುತ್ತವೆ. 20-39 ವಯೋಮಾನದವರಲ್ಲಿ, 2017ರಲ್ಲಿ 21% ಪ್ರಿಡಿಯಾಬಿಟಿಕ್ ಆಗಿದ್ದು, ಅದು ಈಗ 2022ರಲ್ಲಿ 32%ಕ್ಕೆ ಏರಿಕೆ ಆಗಿದೆ. ಆರಂಭಿಕ ಹಂತದಲ್ಲಿ ರೋಗನಿರ್ಣಯ ಮಾಡಿದರೆ ಪ್ರಿಡಿಯಾಬಿಟಿಸ್ ಅನ್ನು ನಿಯಂತ್ರಿಸಬಹುದು ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. 40-69 ವರ್ಷ ವಯಸ್ಸಿನ ರೋಗಿಗಳಲ್ಲಿ ಮಧುಮೇಹ ಹರಡುವಿಕೆಯ ಸ್ಥಿರವಾದ ಹೆಚ್ಚಳವನ್ನು ವಿಶ್ಲೇಷಣೆಯು ಸ್ಪಷ್ಟವಾಗಿ ಉಲ್ಲೇಖಿಸಿದೆ.