ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿರುವುದು ಸರಿಯಲ್ಲ. ಅಂತಹ ಸಂಸ್ಕೃತಿ ಒಳ್ಳೆಯದಲ್ಲ. ಆದರೆ, ಇಂತಹ ಘಟನೆ ನಡೆಯಲು ಕಾರಣವೇನು ಎಂದು ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಡಿಕೇರಿಯಲ್ಲಿ ಸಿದ್ದರಾಮಯ್ಯ ಕಾರಿಗೆ ಬಿಜೆಪಿ ಕಾರ್ಯಕರ್ತರಿಂದ ಮೊಟ್ಟೆ ಎಸೆತ ವಿಚಾರ ನನ್ನ ಗಮನಕ್ಕೆ ಬಂದಿದೆ. ಇವತ್ತು ಮೊಟ್ಟೆ ಬಿಸಾಡಲು ಕಾರಣ ಏನು ಅಂತಾ ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಬೇಕು. ಟಿಪ್ಪು ಜಯಂತಿ ಮಾಡಿ ಅಂತಾ ಯಾರು ಕೇಳಿಕೊಂಡರು?, ಟಿಪ್ಪು ಬಗ್ಗೆ ಕೊಡಗಿನಲ್ಲಿ ಯಾವ ಅಭಿಪ್ರಾಯ ಇದೆ ಎಂದು ಸಿದ್ದರಾಮಯ್ಯಗೆ ಗೊತ್ತಿಲ್ವಾ?, ಕೊಡಗಿನಲ್ಲಿ ಇವತ್ತು ಆಕ್ರೋಶ, ನೋವು ಇದೆ, ಕೊಡಗಿನ ಜನ ನಾಯಿಗೆ ಟಿಪ್ಪು ಅಂತಾ ಹೆಸರಿಡುವಷ್ಟು ಆಕ್ರೋಶ ಇದೆ ಎಂದು ಹೇಳಿದರು.
ಮುಸ್ಲಿಮರಲ್ಲಿ ಅಲ್ಲಾಹುವನ್ನು ಹೊರತುಪಡಿಸಿ ಉಳಿದ ಯಾರೂ ಪೂಜೆಗೆ ಭಾಜನರಲ್ಲ. ಅಂದು ಕೋಮು ಅಜೆಂಡಾ ಇಟ್ಟುಕೊಂಡು ಟಿಪ್ಪು ಜಯಂತಿ ಮಾಡಿದರು. ಟಿಪ್ಪು ಜಯಂತಿ ವೇಳೆ ಕುಟ್ಟಪ್ಪ ಕಾಲು ಜಾರಿ ಸತ್ತ ಎಂದಿದ್ದು ಕೊಡಗಿನವರಿಗೆ ನೋವಾಗಿದೆ. ಇತ್ತೀಚೆಗೆ ಕೊಡವರು ಜಾನುವಾರು ತಿನ್ನುವವರು ಅಂತಾ ಸಿದ್ದರಾಮಯ್ಯ ಹೇಳಿದ್ದರು. ಕೊಡಗಿನವರ ಬಗ್ಗೆ ಸುಳ್ಳು ಆರೋಪ ಮಾಡಿರುವಾಗ ಸಹಜವಾಗಿ ಆಕ್ರೋಶದ ಧ್ವನಿ ಹೊರ ಬರುತ್ತದೆ ಎಂದರು.