ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶಕ್ಕೆ ದೊಡ್ಡ ಮಹತ್ವವಿದೆ. ಅದೇ ಆದ್ಯತೆ ಕೂಡ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ತಿಳಿಸಿದರು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಜನ ಮನ್ನಣೆ ಕಾಂಗ್ರೆಸ್ಗೆ ಸಿಕ್ಕಿದೆ. ನಾವು ನಮ್ಮ ಭರವಸೆ ನೀಡಿದ್ದೆವು. ನಮಗಿಂತ ಅವರು ನೀಡಿದ ಭರವಸೆಗಳು ಹೆಚ್ವು ಜನರನ್ನು ಆಕರ್ಷಿಸಿದೆ. ಜನ ನಮಗೆ ಕೊಟ್ಟ ಜವಾಬ್ದಾರಿಯನ್ನು ನಾವು ಪಾಲಿಸಬೇಕು. ಕಾಂಗ್ರೆಸ್ ಮೇಲೆ ಭರವಸೆ ಇಟ್ಟು ಜನ ಬಹುಮತ ನೀಡಿದ್ದಾರೆ. ಜವಾಬ್ದಾರಿ ಅರಿತು ಕೆಲಸ ಮಾಡಿ ಎಂದು ಸರ್ಕಾರಕ್ಕೆ ಕಿವಿ ಮಾತು ಹೇಳಿದರು.
ಪರಿವರ್ತನೆ ನಿಮಗೆ ನೀಡಿದ್ದಾರೆ. ಇದೇ ಶಾಶ್ವತ ಎಂದು ಭಾವಿಸಬಾರದು. ಬದಲಾವಣೆ ಈಗ ಆಗಿದೆ. ಅದನ್ನು ನಾವು ಒಪ್ಪಿದ್ದೇವೆ, ನೀವೂ ಒಪ್ಪಬೇಕು. ನಮ್ಮ ಪ್ರತಿಪಕ್ಷ ನಾಯಕರಿಲ್ಲ ಎಂದು ಹೇಳುವ ಕಾಂಗ್ರೆಸ್ ಪಕ್ಷದಲ್ಲಿ ಹಿಂದೆ ಪ್ರತಿಪಕ್ಷ ನಾಯಕರಾಗಿದ್ದವರು ಇಂದು ಕಾಣುವುದೇ ಅಪರೂಪವಾಗಿದೆ ಎಂದು ಪರೋಕ್ಷವಾಗಿ ಹರಿಪ್ರಸಾದ್ ಅವರು ಸದನದಲ್ಲಿ ಕಾಣಿಸುತ್ತಿಲ್ಲ ಎಂದು ಹೇಳಿದರು. ಆಗ ಸದನದಲ್ಲಿ ಗದ್ದಲ ಉಂಟಾಗಿ ಆಡಳಿತ - ಪ್ರತಿಪಕ್ಷ ಸದಸ್ಯರು ನಡುವೆ ವಾಕ್ಸಮರ ನಡೆಯಿತು. ಈ ವೇಳೆ, ಸಭಾಪತಿ ಬಸವರಾಜ ಹೊರಟ್ಟಿ ಅವರು ಎದ್ದು ನಿಂತು ಸದನವನ್ನು ನಿಯಂತ್ರಣಕ್ಕೆ ತಂದರು.
ಮತ್ತೆ ಮಾತು ಮುಂದುವರೆಸಿದ ಪ್ರತಾಪ್ ಸಿಂಹ ನಾಯಕ್, ಸಮಾಧಾನ ಅಂದರೆ ಈ ಬಾರಿ ಇವಿಎಂ ಸರಿಯಿದೆ, ಚುನಾವಣಾ ಆಯೋಗ ಸರಿ ಇದೆ. ಪ್ರಜಾಪ್ರಭುತ್ವ ಜೀವಂತವಾಗಿದೆ ಎಂಬುದು ಈ ಚುನಾವಣೆ ಸಾಬೀತುಪಡಿಸಿದೆ ಎಂದು ಕಾಂಗ್ರೆಸ್ ಪಕ್ಷದ ಬಗ್ಗೆ ವ್ಯಂಗ್ಯವಾಡಿದರು. ಸಂವಿಧಾನದ ಚೌಕಟ್ಟಿನಲ್ಲಿ ಮಾತನಾಡುವ ಸಂಯಮ ಬೆಳೆಸಿಕೊಳ್ಳಬೇಕು. ನಾವು ಪ್ರತಿಪಕ್ಷ, ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು. ಅದನ್ನು ತಡೆಯಬಾರದು. ನಾವು ಆಡಳಿತ ಮಾಡಲಿಕ್ಕೇ ಇರುವುದು ಎಂಬ ಭಾವನೆ ಕಾಂಗ್ರೆಸ್ನವರದ್ದು ಎಂದು ಟೀಕಿಸಿದರು.