ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರ ಬಗ್ಗೆ ಹೇಳಿಕೆ ನೀಡುವ ಮೂಲಕ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನವೆಸಗಿದ ಆರೋಪ ಕುರಿತು ಕಡೆಗೂ ವಿಧಾನ ಪರಿಷತ್ನಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಲಾಯಿತು. ಇಂದು ದಿನದ ಕಲಾಪ ಬಲಿಯಾದ ನಂತರ ಸಭಾಪತಿಗಳು ವಿವೇಚನಾಧಿಕಾರ ಬಳಸಿ ಚರ್ಚೆಗೆ ಅವಕಾಶ ನೀಡಿದರು.
ವಿಧಾನ ಪರಿಷತ್ ಕಲಾಪದ ಮೂರನೇ ದಿನದ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಜೆಡಿಎಸ್ ಸದಸ್ಯರು ಸದನದ ಬಾವಿಯಲ್ಲಿ ಧರಣಿ ಮುಂದುವರೆಸಿ ದೊರೆಸ್ವಾಮಿ ಅವರ ಬಗ್ಗೆ ಅಗೌರವ ತರುವ ಹೇಳಿಕೆ ನೀಡಿರುವ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು. ಸಭಾಪತಿಗಳ ವಿವೇಚನಾಧಿಕಾರ ಬಳಸುವ ಸಭಾ ನಡವಳಿಕೆ 342ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕೋರಿ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಪ್ರಸ್ತಾಪ ಸಲ್ಲಿಸಿದರು. ಸರ್ಕಾರದ ಉತ್ತರ ಬೇಕಿದ್ದರೆ ಯಾವುದಾದರೂ ನಿಯಮದ ಅಡಿಯಲ್ಲಿ ಪ್ರಸ್ತಾಪ ಸಲ್ಲಿಸಿ ಎನ್ನುವ ಸಭಾನಾಯಕರ ಹೇಳಿಕೆಯಂತೆಯೇ ಪ್ರಸ್ತಾಪ ಸಲ್ಲಿಸಿದ್ದು ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.
ಪ್ರತಿಪಕ್ಷದ ಪ್ರಸ್ತಾಪ ಕುರಿತು ಮಾತನಾಡಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, 342ರ ನಿಯಮ ನಿರ್ದಿಷ್ಟವಾಗಿ ವಿಧೇಯಕ ಮಾಡದೇ ಇರುವ ಎಲ್ಲ ವಿಷಯಗಳ ಕುರಿತು ಆಗಿಂದಾಗ್ಗೆ ನಿರ್ಧರಿಸುವ ಅಧಿಕಾರ ಸಭಾಪತಿಗಳಿಗೆ ಇದೆ ಅದರಂತೆ ತಮ್ಮ ಪರಮಾಧಿಕಾರ ಚಲಾಯಿಸಲಿದ್ದಾರೆ ಅದಕ್ಕೆ ನಾವು ಬದ್ದರಿದ್ದೇವೆ. ಆದರೆ, ಈಗ ಚರ್ಚೆಗೆ ಅವಕಾಶ ಬೇಡ ನಾಳೆ ಅವಕಾಶ ಕೊಡಿ, ಇಂದು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಗೆ ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.