ಬೆಂಗಳೂರು :ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಲು ಹರಸಾಹಸ ಮಾಡುತ್ತಿರುವ ಜೆಡಿಎಸ್ ಪಕ್ಷದ ಪರವಾಗಿ ಚುನಾವಣಾ ನಿಪುಣ ಪ್ರಶಾಂತ್ ಕಿಶೋರ್ ರಣಾಂಗಣಕ್ಕಿಳಿಯಲಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮ ಚುನಾವಣಾ ರಣನೀತಿಯನ್ನು ರೂಪಿಸಲು ಪ್ರಮುಖ ಸರ್ವೇ ಕಂಪನಿಗಳು ಕೆಲಸ ಮಾಡುತ್ತಿದ್ದು, ಇದರ ಬೆನ್ನಲ್ಲೇ ಜೆಡಿಎಸ್ನ ನಡೆಗಳನ್ನು ನಿರ್ಧರಿಸುವ ಕೆಲಸಕ್ಕೆ ಪ್ರಶಾಂತ್ ಕಿಶೋರ್ ಬರಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಬಹುಮತದಿಂದ ಅಧಿಕಾರ ಸ್ಥಾಪನೆಯ ಗುರಿ : ಮುಂದಿನ ಚುನಾವಣೆಯಲ್ಲಿ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವ ಗುರಿಯೊಂದಿಗೆ ರಣಾಂಗಣಕ್ಕಿಳಿಯಬೇಕು ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಯಸಿದ್ದಾರೆ. 2014 ರ ಲೋಕಸಭಾ ಚುನಾವಣೆಯ ನಂತರ ದೇಶದ ನಂಬರ್ ಒನ್ ಚುನಾವಣಾ ನಿಪುಣ ನಿಪುಣರೆಂದೇ ಖ್ಯಾತರಾದ ಪ್ರಶಾಂತ್ ಕಿಶೋರ್ ಅವರು ನಂತರದ ದಿನಗಳಲ್ಲಿ ಗುಜರಾತ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳ ಪರವಾಗಿ ಚುನಾವಣಾ ರಣನೀತಿಯನ್ನು ರೂಪಿಸಿದ್ದರು. ಹಾಗಾಗಿ, ಬಹುತೇಕ ರಾಜ್ಯಗಳಲ್ಲಿ ಪ್ರಶಾಂತ್ ಕಿಶೋರ್ ರಣನೀತಿಯಂತೆ ಕೆಲಸ ಮಾಡಿದ ಪಕ್ಷಗಳು ಗೆಲುವು ಸಾಧಿಸಿ ಅಧಿಕಾರ ಹಿಡಿದಿವೆ.
ಪ್ರಶಾಂತ್ ಕಿಶೋರ್ ತಂತ್ರಗಾರಿಕೆ : ಇತ್ತೀಚೆಗೆ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿ.ಎಂ.ಕೆ ಪಕ್ಷದ ಪರವಾಗಿ ಪ್ರಶಾಂತ್ ಕಿಶೋರ್ ರೂಪಿಸಿದ ಚುನಾವಣಾ ತಂತ್ರಗಾರಿಕೆ ಯಶಸ್ವಿಯಾಗಿದೆಯಲ್ಲದೆ, ಸ್ಟಾಲಿನ್ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ. ಪ್ರಶಾಂತ್ ಕಿಶೋರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ಬಯಸಿತ್ತಾದರೂ, ತಮಗೆ ಎಐಸಿಸಿ ಉಪಾಧ್ಯಕ್ಷ ಸ್ಥಾನವೇ ಬೇಕು ಎಂದು ಅವರು ಪಟ್ಟು ಹಿಡಿದ ಪರಿಣಾಮವಾಗಿ ಮೌನವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಶಾಂತ್ ಕಿಶೋರ್ ಇದೀಗ ತಮ್ಮದೇ ಹೊಸ ಶಕ್ತಿಯನ್ನು ಸ್ಥಾಪಿಸಿದ್ದು, ಅದೇ ಕಾಲಕ್ಕೆ ಕರ್ನಾಟಕದಲ್ಲಿ ಜೆಡಿಎಸ್ ಪರವಾಗಿ ರಣತಂತ್ರ ರೂಪಿಸಲು ಬಂದ ಆಹ್ವಾನವನ್ನು ಒಪ್ಪಿದ್ದಾರೆ ಎಂದು ಹೇಳಲಾಗ್ತಿದೆ.
ಎಲೆಕ್ಷನ್ ಸ್ಪೆಷಲಿಸ್ಟ್ ತಂಡ ನೇಮಿಸಿಕೊಮಡ ಮೂರು ಪಕ್ಷಗಳು : ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಈಗಾಗಲೇ ಚುನಾವಣಾ ತಂತ್ರಗಾರಿಕೆಯನ್ನು ರೂಪಿಸಲು ಎಲೆಕ್ಷನ್ ಸ್ಪೆಷಲಿಸ್ಟ್ ತಂಡಗಳನ್ನು ನೇಮಿಸಿಕೊಂಡಿದ್ದು, ಇದೀಗ ಆ ಸಾಲಿಗೆ ಜೆಡಿಎಸ್ ಕೂಡಾ ಸೇರ್ಪಡೆಯಾಗಲಿದೆ. ಆಡಳಿತಾರೂಢ ಬಿಜೆಪಿ ಪರವಾಗಿ ಈಗಾಗಲೇ ಜಾರ್ವಿಸ್, ಲೀಡ್ ಟೆಕ್ ಮತ್ತು ನಮೋ ಫಾರ್ಮೇಷನ್ ಎಂಬ ತಂಡಗಳು ಸರ್ವೇ ಕಾರ್ಯ ನಡೆಸುತ್ತಿದ್ದು, ಪ್ರತಿದಿನದ ಬೆಳವಣಿಗೆಗಳ ಜೊತೆ ಮುಂದಿನ ಚುನಾವಣೆಯಲ್ಲಿ ಪಕ್ಷ ಗೆಲ್ಲಲು ಅನುಸರಿಸಬೇಕಾದ ಮಾರ್ಗಗಳ ಕುರಿತು ಕಾಲಕಾಲಕ್ಕೆ ವರದಿ ನೀಡುತ್ತಿವೆ.