ಬೆಂಗಳೂರು:ಎಸ್ಸಿ - ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ವಾಲ್ಮಿಕಿ ಪ್ರಸನ್ನಾನಂದ ಸ್ವಾಮಿ ಧರಣಿ ಸತ್ಯಾಗ್ರಹ ಕೈ ಬಿಟ್ಟಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಬಳಿಕ ಸ್ವಾಮೀಜಿ ಪ್ರತಿಭಟನೆ ಕೈ ಬಿಡುವುದಾಗಿ ಘೋಷಣೆ ಮಾಡಿದರು.
ಸಿಎಂ ಬೊಮ್ಮಾಯಿ ಅವರು ಸರ್ವಪಕ್ಷ ಸಭೆ ಕರೆದು, ಇಂದು ಸಂಪುಟ ಸಭೆಯಲ್ಲಿ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸ್ವಾಮೀಜಿ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ಪ್ರಸನ್ನಾನಂದ ಸ್ವಾಮೀಜಿ 151 ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಟ್ಟಿದ್ದಾರೆ. ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದಕ್ಕೆ ಸಿಎಂಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸಚಿವರು, ಶಾಸಕರು, ಎಸ್ಸಿ, ಎಸ್ಟಿ ಮಠಾಧೀಶರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾಳೆ ಮಹರ್ಷಿ ವಾಲ್ಮೀಕಿ ಜಯಂತಿ ಇದೆ. ಧರಣಿ ಸತ್ಯಾಗ್ರಹ ಇಂದಿಗೆ ಅಂತ್ಯಗೊಳಿಸುತ್ತೇವೆ. ನಾಳೆಯ ಜಯಂತಿಯನ್ನು ವಿಜಯೋತ್ಸವವಾಗಿ ಆಚರಿಸುತ್ತೇವೆ ಎಂದರು.
ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ 240 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸ್ವಾಮೀಜಿ ಧರಣಿ ನಡೆಸುತ್ತಿದ್ದರು.
ಸಿಎಂ ಬೊಮ್ಮಾಯಿಗೆ ಸ್ವಾಮಿಗಳ ಅಭಿನಂದನೆ:ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಎಸ್ಸಿ ಎಸ್ಟಿ ಸಮುದಾಯದ ವಿವಿಧ ಮಠಾಧೀಶರು ಗೃಹ ಕಚೇರಿ ಕೃಷ್ಣಾದಲ್ಲಿ ಅಭಿನಂದನೆ ಸಲ್ಲಿಸಿದರು.
ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ: ಧರಣಿ ಕೈಬಿಟ್ಟ ಪ್ರಸನ್ನಾನಂದ ಸ್ವಾಮೀಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿಗೆ ಸಿಹಿ ತಿನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾದರ ಚೆನ್ನಯ್ಯ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಈ ಸಂದರ್ಭದಲ್ಲಿ ಸಚಿವರಾದ ಆರ್. ಅಶೋಕ್, ಗೋವಿಂದ ಕಾರಜೋಳ, ಬಿ ಶ್ರೀರಾಮುಲು, ಆನಂದ ಸಿಂಗ್, ಶಂಕರ ಪಾಟೀಲ್ ಮುನೇನಕೊಪ್ಪ, ಶಾಸಕರಾದ ರಾಜುಗೌಡ, ರೇಣುಕಾಚಾರ್ಯ ಮತ್ತಿತರರು ಹಾಜರಿದ್ದರು.
ಪಟಾಕಿ ಸಿಡಿಸಿ ಸಂಭ್ರಮ:ಇತ್ತ ಗೃಹ ಕಚೇರಿ ಕೃಷ್ಣಾದ ಮುಂದೆ ವಾಲ್ಮೀಕಿ ಸಮುದಾಯದವರು ಮೀಸಲಾತಿ ಹೆಚ್ಚಳ ಮಾಡಿದ ಹಿನ್ನೆಲೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಸಿಎಂ ಬೊಮ್ಮಾಯಿ ಮತ್ತು ಸ್ವಾಮೀಜಿ ಪರ ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ:ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಸಂಪುಟ ಸಭೆ ಅನುಮೋದನೆ: ತಕ್ಷಣ ಆದೇಶ ಹೊರಡಿಸಲು ನಿರ್ಧಾರ