ಬೆಂಗಳೂರು :ಅನಗತ್ಯ ಗಲಾಟೆ ಮಂಗಳೂರಲ್ಲಿ ಆಯಿತು. ಮಂಗಳೂರಲ್ಲಿ ನೂರಾರು ಜನರ ಜೀವ ಉಳಿಸಲು ಒಂದಿಬ್ಬರ ಸಾವಾಗಿದೆ. ಅದರಲ್ಲಿ ತಪ್ಪೇನಿದೆ ಎಂದು ಬಿಜೆಪಿ ಎಂಎಲ್‌ಸಿ ಪ್ರಾಣೇಶ್ ಹೇಳಿದ್ದಕ್ಕೆ ಪ್ರತಿಪಕ್ಷಗಳು ಸದನದಲ್ಲಿ ಆಕ್ರೋಶ ಹೊರ ಹಾಕಿದವು. ಸದನದ ಬಾವಿಗಿಳಿದು ಜೆಡಿಎಸ್-ಕಾಂಗ್ರೆಸ್ ಸದಸ್ಯರು ಪ್ರತಿಭಟನೆಗೆ ಮುಂದಾದ ಹಿನ್ನೆಲೆ, ಸದನವನ್ನು ಸಭಾಪತಿಗಳು ಹತ್ತು ನಿಮಿಷ ಮುಂದೂಡಿದರು.
ದೇಶದ್ರೋಹದ ಮೇಲಿನ ಚರ್ಚೆ, ಸಚಿವರ ಪುತ್ರ ಅಪಘಾತ ಮಾಡಿದ್ದಾನೆ ಎನ್ನುವ ಮಾತಿನ ಮೂಲಕ ವಿಧಾನ ಪರಿಷತ್ ಕಲಾಪ ಕೆಲ ಕಾಲ ಗದ್ದಲದ ಗೂಡಾಗಿ ಪರಿಣಮಿಸಿತು. ಕಾಂಗ್ರೆಸ್‌ನ ನಾರಾಯಣಸ್ವಾಮಿ ದೇಶದ್ರೋಹ ವಿಚಾರದ ಚರ್ಚಿಸುವ ಸಂದರ್ಭ ವಿವಿಧ ಭಾಗಗಳ ವಿಷಯ ಪ್ರಸ್ತಾಪಿಸುತ್ತಾ, ಹ್ಯಾರಿಸ್ ಪುತ್ರನ ವಿಚಾರ ಬಂತು. ಏಕಾಏಕಿ ಹೊಸಪೇಟೆ ಸಮೀಪ ನಡೆದ ಅಪಘಾತದ ವಿಷಯ ಪ್ರಸ್ತಾಪಿಸಿ, ಸಚಿವರೊಬ್ಬರ ಪುತ್ರ ನಡೆಸಿದ ಅಪಘಾತದಲ್ಲಿ ಇಬ್ಬರು ಸತ್ತಿದ್ದಾರೆ. ಅದರ ತನಿಖೆ ಆಗಿಲ್ಲ ಎಂದರು. ಆಗ ಆಡಳಿತ ಪಕ್ಷದ ಸದಸ್ಯರು ಆಕ್ರೋಶ ಹೊರಹಾಕಿ, ನೀವು ಸ್ಥಳದಲ್ಲಿದ್ದಿರಾ? ತನಿಖೆ ನಡೆಯುತ್ತಿದೆ, ಸತ್ಯಾಸತ್ಯತೆ ಹೊರ ಬೀಳಲಿದೆ. ಇದು ಪೊಲೀಸ್ ಇಲಾಖೆ ದುರ್ಬಳಕೆ ಅಲ್ಲ ಎಂದರು.
ಇದರಿಂದ ಸದನದಲ್ಲಿ ಕೆಲ ಕಾಲ ಗೊಂದಲ ನಿರ್ಮಾಣವಾಯಿತು. ಪಾಯಿಂಟ್ ಆಫ್ ಆರ್ಡರ್ ಮೇಲೆ ಉತ್ತರ ಕೊಡಬೇಕೆಂದು ಬಿಜೆಪಿ ಸದಸ್ಯರು ಹೇಳಿದಾಗ ಸಭಾಪತಿಗಳು ಸಿಟ್ಟಾಗಿ ಯಾವ ವಿಚಾರಕ್ಕೆ ಎಂದು ಕೇಳಿದರು. ನಾರಾಯಣಸ್ವಾಮಿ ಮಾತು ಮುಂದುವರಿಸಿ, ಸದನ ಸಮಿತಿ ನಿರ್ಮಾಣ ಮಾಡಬೇಕು ಇಲ್ಲವೇ ನ್ಯಾಯಾಂಗ ತನಿಖೆ ವಹಿಸಿ ರಾಜ್ಯದ ಕಾನೂನು ಸೂವ್ಯವಸ್ಥೆ ದುರ್ಬಲಗೊಂಡಿರುವುದರ ತನಿಖೆ ನಡೆಸಬೇಕು. ದೌರ್ಜನ್ಯ ನಿಲ್ಲಬೇಕು ಎಂದು ಹೇಳಿದರು.
ನಂತರ ಮಾತನಾಡಿದ ಬಿಜೆಪಿ ಸದಸ್ಯ ಪ್ರಾಣೇಶ್, ನಿಯಮ 69ರ ಅಡಿ ಚರ್ಚಿಸುವ ಮೂಲಕ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್, ರಾಜ್ಯ ಪೊಲೀಸ್ ಇಲಾಖೆ ದುರ್ಬಲಗೊಳಿಸುವ ಹೇಳಿಕೆ ನೀಡಿದ್ದಾರೆ ಎಂದು ಅನ್ನಿಸುತ್ತದೆ. ಬೇಸರ ಆಗಿದ್ದರೆ ಕ್ಷಮಿಸಿ. ನಮ್ಮ ಮಾತು ಮನರಂಜನೆಯ ಭಾಗವಾಗುತ್ತದೆಯೇನೋ ಅನ್ನಿಸುತ್ತಿದೆ. ಇರುವ ಆರು ಕೋಟಿ ಜನರನ್ನು ನಾವು 75 ಮಂದಿ ಪ್ರತಿನಿಧಿಸುತ್ತಿದ್ದೇವೆ. ಆದರೆ, ಸದನ ಕಲಾಪ ನಿರೀಕ್ಷಿತ ನಿಟ್ಟಿನಲ್ಲಿ ಸಾಗುತ್ತಿಲ್ಲ. ಅನಗತ್ಯ ಚರ್ಚೆಗೆ ಸದನ ಬಳಕೆ ಆಗಬಾರದು. ಹೋರಾಟಕ್ಕೆ ಪ್ರತಿಯೊಬ್ಬರಿಗೂ ಅವಕಾಶ ಇದೆ. ಆದರೆ, ಇದರ ಇತಿಮಿತಿ ಮೀರಿ ಹೋದಾಗ ತಡೆಯುವುದು ಅನಿವಾರ್ಯ.
ಮಂಗಳೂರಿನಲ್ಲಿ ಪೊಲೀಸರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಾರೆ. ನಾವೂ ಪ್ರಾಮಾಣಿಕರಾಗಿ ಇರಬೇಕು. ತಪ್ಪು ಎಲ್ಲಾ ಕಡೆ ಆಗುತ್ತಿದೆ, ತನಿಖೆ ನಡೆಯುತ್ತಿದೆ. ನಿಷ್ಪಕ್ಷಪಾತ ವಿಚಾರಣೆ ಆಗುತ್ತಿದೆ. ನಮ್ಮ ವಿರುದ್ಧ ಜನ ಇದ್ದಾರೆ. ವ್ಯತಿರಿಕ್ತವಾಗಿ ಇದ್ದಿದ್ದರೆ ಈ ಫಲಿತಾಂಶವೇ ಬರುತ್ತಿರಲಿಲ್ಲ ಎಂದರು. ಬಿಜೆಪಿ ಸರ್ಕಾರ ಅಕ್ರಮವಾಗಿ ರಚನೆಯಾಗಿದೆ. ಇದು ಜನರ ಮ್ಯಾಂಡೇಟ್ ಅಲ್ಲ. ವಾಮ ಮಾರ್ಗದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮೂರು ಸಾರಿಯೂ ಅಕ್ರಮವಾಗಿಯೇ ಅಧಿಕಾರಕ್ಕೆ ಬಂದಿದ್ದು ಎಂದು ಪ್ರತಿಪಕ್ಷ ವಾದಿಸಿದಾಗ ಸಚಿವರಾದ ಎಸ್ ಟಿ ಸೋಮಶೇಖರ್, ಬಿ ಸಿ ಪಾಟೀಲ್, ರಮೇಶ್ ಜಾರಕಿಹೊಳಿ ಮುಗಿಬಿದ್ದು ಆಕ್ರೋಶ ವ್ಯಕ್ತಪಡಿಸಿದರು.