ಕರ್ನಾಟಕ

karnataka

ETV Bharat / state

ಪ್ರಣವಾನಂದ ಸ್ವಾಮೀಜಿಗಳಿಗೂ ಈಡಿಗರ ಸಮುದಾಯಕ್ಕೂ ಯಾವುದೇ ಸಂಬಂಧವಿಲ್ಲ: ಆರ್ಯ ಈಡಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ

ಸ್ವಯಂ ಘೋಷಿತ ಸ್ವಾಮೀಜಿ ಎಂದು ಹೇಳಿಕೊಂಡು ತಿರುಗುತ್ತಿರುವ ಪ್ರಣವಾನಂದ ಸ್ವಾಮೀಜಿ ಕೇಂದ್ರ ಸಂಘ, ರಾಜ್ಯದ ಜಿಲ್ಲಾ ಸಂಘಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಾಯಿಗೆ ಬಂದಂತೆ ಆಧಾರ ರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಈಡಿಗ ಸಮುದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕೇರಳದ ಶಿವಗಿರಿಯಲ್ಲಿ ನಾರಾಯಣ ಗುರು ದೀಕ್ಷೆಪಡೆದಿದ್ದಂತಹ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಅವರನ್ನು ಸಮುದಾಯದ ಗುರುಗಳನ್ನಾಗಿ ಸ್ವೀಕರಿಸಲಾಗಿದೆ ಎಂದು ಆರ್ಯ ಈಡಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ ತಿಳಿಸಿದ್ದಾರೆ.

Arya Ediga Sangha president Thimmegowda spoke at the press conference.
ಆರ್ಯ ಈಡಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

By ETV Bharat Karnataka Team

Published : Sep 20, 2023, 7:03 PM IST

ಬೆಂಗಳೂರು:ಪ್ರಣವಾನಂದ ಸ್ವಾಮೀಜಿಗಳ ವಿರುದ್ಧ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ತಿರುಗಿ ಬಿದ್ದಿದ್ದು, ಅವರಿಗೂ ತಮ್ಮ ಸಮುದಾಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ.ಎಂ. ತಿಮ್ಮೇಗೌಡ ಸ್ಪಷ್ಟಪಡಿಸಿದರು.

ಬುಧವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ವಯಂ ಘೋಷಿತ ಸ್ವಾಮೀಜಿ ಎಂದು ಹೇಳಿಕೊಂಡು ತಿರುಗುತ್ತಿರುವ ಪ್ರಣವಾನಂದ ಸ್ವಾಮೀಜಿಗೂ ನಮ್ಮ ಸಮುದಾಯದ ಸಂಘಕ್ಕೆ ಯಾವುದೇ ಸಂಬಂಧವಿಲ್ಲ. ಅವರು ಸಮುದಾಯದಲ್ಲಿ ಒಡಕು ಮೂಡಿಸುತ್ತಿದ್ದು, ರಾಜಕೀಯ ಮುಖಂಡರಲ್ಲಿ ಭಿನ್ನಮತ ಮೂಡಿಸಿ ರಾಜಕೀಯ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.

ಕೇಂದ್ರ ಸಂಘ ಹಾಗೂ ರಾಜ್ಯದ ಜಿಲ್ಲಾ ಸಂಘಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಾಯಿಗೆ ಬಂದ ಹಾಗೇ ಆಧಾರ ರಹಿತವಾಗಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಸಮುದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಯಂ ಘೋಷಿತ ಸ್ವಾಮೀಜಿ ಪ್ರಣಾವಾನಂದ ಅವರ ವಿರುದ್ಧ ಕಾನೂನು ಕ್ರಮ ಜರಗಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಸ್ಥಾಪಿತಗೊಂಡು ಇಲ್ಲಿಗೆ 78 ವರ್ಷಗಳಾಗಿವೆ. ನಮ್ಮ ಸಮುದಾಯದಲ್ಲಿ ಈಡಿಗ, ಬಿಲ್ಲವ, ನಾಮದಾರಿ ಪಂಗಡಗಳು ಸೇರಿದಂತೆ 26 ಪಂಗಡಗಳಿವೆ. ಸಂಘ 1944ರಷ್ಟು ಹಿಂದೆಯೇ ಅಸ್ತಿತ್ವಕ್ಕೆ ಬಂದಿದ್ದರೂ 2008ರ ವರೆಗೆ ಧಾರ್ಮಿಕ ಪೀಠವನ್ನು ಅಸ್ತಿತ್ವಕ್ಕೆ ತಂದಿರಲಿಲ್ಲ. ಆ ದಿನಗಳಲ್ಲಿ ಈಡಿಗ ಸಮುದಾಯಕ್ಕೆ ಸ್ವಾಮೀಜಿಗಳು ಇರಲಿಲ್ಲ. ಈ ದೃಷ್ಟಿಯಿಂದ 2008ರಲ್ಲಿ ನಮ್ಮ ಸಮುದಾಯಕ್ಕೆ ಮೊದಲ ಗುರುಗಳನ್ನಾಗಿ ರೇಣುಕಾನಂದ ಸ್ವಾಮೀಜಿ ಅವರಿಗೆ ಮಾರ್ಚ್ 2008 ರಲ್ಲಿ ಪಟ್ಟಾಭಿಷೇಕವನ್ನು ಮಾಡಿ ಶ್ರೀ ನಾರಾಯಣಗುರು ಮಠಕ್ಕೆ ಪೀಠಾಧಿಪತಿಗಳನ್ನಾಗಿ ಸ್ವೀಕರಿಸಲಾಯಿತು.

ವಿಖ್ಯಾತಾನಂದ ಸ್ವಾಮೀಜಿ ಈಡಿಗ ಸಮುದಾಯದ ಗುರು:ರೇಣುಕಾನಂದ ಸ್ವಾಮೀಜಿಯವರು ತಮ್ಮ ಆಧ್ಯಾತ್ಮಿಕ ಸಾಧನೆಯನ್ನು ಮುಂದುವರಿಸುವ ನಿಮಿತ್ತವಾಗಿ 2014ರಲ್ಲಿ ಪೀಠ ತ್ಯಜಿಸಿದರು. ಸುಮಾರು ಏಳು ವರ್ಷಗಳ ಕಾಲ ತೆರವಾಗಿದ್ದ ಸ್ಥಾನಕ್ಕೆ ಒಬ್ಬ ಕುಲಗುರುಗಳನ್ನು ನೇಮಿಸುವ ಸಲುವಾಗಿ ಹಲವಾರು ಬಾರಿ ಸಭೆ ನಡೆಸಿ, ರಾಜ್ಯದ ಎಲ್ಲಾ ಜಿಲ್ಲೆಗಳ ಈಡಿಗ ಸಮುದಾಯದ ಸಮಸ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದೇವೆ. ನಮ್ಮ ಮುಖಂಡರಾದ ಬಿ.ಕೆ. ಹರಿಪ್ರಸಾದ್‌ ಅವರ ಸಲಹೆಯನ್ನು ಪರಿಗಣನೆಗೆ ತೆಗೆದುಕೊಂಡು, ಉಡುಪಿ ಜಿಲ್ಲೆಯ ಕಾರ್ಕಳದ ಬಳ್ಕೊಟ್ಟಿನಲ್ಲಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಾ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದ, ಕೇರಳದ ಶಿವಗಿರಿಯಲ್ಲಿ ನಾರಾಯಣ ಗುರು ಅವರಿಂದ ದೀಕ್ಷೆ ಪಡೆದಿದ್ದಂತಹ ವಿಖ್ಯಾತಾನಂದ ಸ್ವಾಮೀಜಿ ಅವರನ್ನು ಸಮುದಾಯದ ಗುರುಗಳನ್ನಾಗಿ ಸ್ವೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಟಿ. ಶಿವಕುಮಾರ್, ಜಾಲಪ್ಪ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಎಚ್.ಟಿ. ಮೋಹನ್‌ದಾಸ್, ಖಜಾಂಚಿ ಹರಿಚರಣ್ ಎಂ. ಪಿ., ಜಂಟಿ ಕಾರ್ಯದರ್ಶಿ, ಜಿ.ಒ. ಕೃಷ್ಣ ಉಪಸ್ಥಿತರಿದ್ದರು.

ಇದನ್ನೂಓದಿ:ಪ್ರಣವಾನಂದ ಸ್ವಾಮೀಜಿ ನಮ್ಮ ಸಮಾಜದವರೇ ಅಲ್ಲ, ತಮ್ಮ ಪಬ್ಲಿಸಿಟಿಗಾಗಿ ನನ್ನ ವಿರುದ್ಧ ದೂರು ನೀಡಿದ್ದಾರೆ: ಸಚಿವ ಮಧು ಬಂಗಾರಪ್ಪ

ABOUT THE AUTHOR

...view details