ಕರ್ನಾಟಕ

karnataka

ETV Bharat / state

ಲೋಕಸಭೆ ಟಿಕೆಟ್ ಕೊಟ್ಟರೆ ಸಂತೋಷ, ಸಿಗದಿದ್ದರೂ ಬಿಜೆಪಿ ಬಿಡಲ್ಲ : ಪ್ರಮೋದ್ ಮಧ್ವರಾಜ್ - ಲೋಕಸಭೆ ಟಿಕೆಟ್

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಸಾಮಾಜಿಕ‌ ನ್ಯಾಯದಡಿ ನನಗೆ ಟಿಕೆಟ್ ಕೊಡಿ ಅಂತ ಕೇಳಿರುವೆ. ಕೊಡದಿದ್ದರೂ ಬೇಸರವಿಲ್ಲ, ಕೊನೆ ಉಸಿರು ಇರುವವರೆಗೆ ಬಿಜೆಪಿಯಲ್ಲೇ ಇರುತ್ತೇನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

Former minister Pramod Madhwaraj
ಮಾಜಿ ಸಚಿವ ಪ್ರಮೋದ್ ಮಧ್ವರಾಜ್

By ETV Bharat Karnataka Team

Published : Dec 19, 2023, 10:03 PM IST

ಬೆಂಗಳೂರು:ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಸಾಮಾಜಿಕ‌ ನ್ಯಾಯದಡಿ ನನಗೆ ಟಿಕೆಟ್ ಕೊಡಿ ಅಂತ ಕೇಳಿದ್ದೇನೆ, ಕೊಟ್ಟರೆ ಸಂತೋಷ, ಕೊಡದಿದ್ದರೂ ಬೇಸರವಿಲ್ಲ. ಆದರೆ ಯಾವ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ, ಕೊನೆ ಉಸಿರು ಇರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸ್ಪಷ್ಟಪಡಿಸಿದ್ದಾರೆ.

ಪಕ್ಷ ಬಯಸಿದರೆ ಲೋಕಸಭೆಗೆ ಸ್ಪರ್ಧೆ:ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವ‌ನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರ ಕುರಿತು ಆರು ತಿಂಗಳ ಹಿಂದೆಯೇ ಘೋಷಣೆ ಮಾಡಿದ್ದೇನೆ, ಪಕ್ಷ ಬಯಸಿದ್ದರೆ ನಾನು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಆಗುತ್ತೇನೆ ಎಂದಿದ್ದೇನೆ. ಅದನ್ನು ಈಗಲೂ ಮತ್ತೆ ಪುನರುಚ್ಚಾರ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ನಾನು ರಾಜಕಾರಣದಲ್ಲಿ ಇರುವುದು ಜನರ ಸೇವೆ ಮಾಡುವುದಕ್ಕಾಗಿ, ನನಗೆ ರಾಜಕಾರಣ ಆಸ್ತಿ ಪಾಸ್ತಿ ಮಾಡೋಕೆ, ದುಡ್ಡು, ಲಂಚ ಹೊಡೆಯೋಕಲ್ಲ, ನನ್ನ ಕೊನೆಯ ಉಸಿರು ಇರುವ ತನಕ ಬಿಜೆಪಿಯಲ್ಲಿ ಇರುತ್ತೇನೆ. ಪಕ್ಷ ಯಾವ ರೀತಿ ಅವಕಾಶ ಕೊಡುತ್ತದೆಯೋ ಅದೇ ರೀತಿ ಕೆಲಸ ಮಾಡುತ್ತೇನೆ. ಇಲ್ಲ ಅಂದರೆ ನೀನು ಹೀಗೆ ಇರಬೇಕು ಅಂದರೆ ಹೀಗೆ ಪಕ್ಷದಲ್ಲಿ ಇರುತ್ತೇನೆ. ನನಗೆ ಬಿಜೆಪಿಯಲ್ಲಿ ಯಾವುದೇ ಬೇಸರ ಇಲ್ಲ ಎಂದು ಹೇಳಿದರು.

ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಬೇಡ: ಟಿಪ್ಪು ಜಯಂತಿ ಆಚರಣೆ ವೇಳೆ ನಾನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆನು. ಆದರೂ ಮೂರು ವರ್ಷಗಳ ಕಾಲ ನಾನು ಜಯಂತಿಯಲ್ಲಿ ಭಾಗವಹಿಸಿರಲಿಲ್ಲ, ಟಿಪ್ಪು ಒಬ್ಬ ಆ ಕಾಲದಲ್ಲಿ ಮತಾಂಧ ರಾಜನಾಗಿದ್ದವನು. ಅವನು ಯುದ್ದ ಮಾಡುವಾಗ ಹಿಂಸಾಚಾರದಲ್ಲಿ ತೊಡಗಿದ್ದನು. ಹೀಗಾಗಿ ಹಿಂಸಾಚಾರ ಮಾಡಿದವರ ಹೆಸರು ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡೋದು ಸೂಕ್ತವಲ್ಲ, ಯಾರು ಎಲ್ಲರ ಶಾಂತಿ ಬಯಸಿದ್ದಾರೋ ಅಂತಹವರ ಹೆಸರು ಇಡಲಿ ಎಂದು ಸಲಹೆ ನೀಡಿದರು.

ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ:ಮುಖ್ಯಮಂತ್ರಿ ಸಿದ್ದರಾಮಯ್ಯ ಮೊನ್ನೆ ಬೆಳಗಾವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅವಕಾಶ ಕೊಡಿಸಿ ಎಂದು ಬೊಬ್ಬೆ ಹಾಕ್ತಾ ಇದ್ದರು. ಈಗ ಭೇಟಿ ಮಾಡಿದ್ದಾರೆ. ಅವರು ಭೇಟಿ ಮಾಡಿ ಹೊರಬರುವುದರೊಳಗೆ ಕಾಂಗ್ರೆಸ್ ನಾಯಕ ವಿ ಎಸ್ ಉಗ್ರಪ್ಪ ಪತ್ರಿಕಾಗೋಷ್ಠಿ ಮಾಡಿ ಟೀಕಿಸಿದ್ದಾರೆ. ಇವರ ಉದ್ದೇಶ ಏನು? ಕೇಂದ್ರದಿಂದ ಅನುದಾನ ತರುವುದೋ ಅಥವಾ ರಾಜಕೀಯ ಮಾಡುವುದು ಮುಖ್ಯವೋ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ವಾಗ್ದಾಳಿ‌‌‌ ನಡೆಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಬೆಳಗಾವಿ ಅಧಿವೇಶನದ ವೇಳೆ ಸದನದಲ್ಲಿ ಕೊಡಿಸ್ರಿ ಅಪಾಯಿಟ್ಮೆಂಟ್ ಅಂತಿದ್ದರು. ಈಗ ಅನುಮತಿ ಪಡೆದು ರಾಜ್ಯದ ಮನವಿಕೊಟ್ಟು ಬಂದಿದ್ದಾರೆ. ನಾನು ಅದರ ಬಗ್ಗೆ ದೂರಲ್ಲ. ಆದರೆ, ಕಾಂಗ್ರೆಸ್ ವಕ್ತಾರ ಉಗ್ರಪ್ಪ ಅವರು ಮನವಿ ಕೊಟ್ಟು ಬಂದು ಅರ್ಧ ಗಂಟೆ ಆಗಿಲ್ಲ, ಸುದ್ದಿಗೋಷ್ಠಿ ನಡೆಸಿ ದೂರುತ್ತಿದ್ದಾರೆ.

ನಿಮ್ಮ‌ ಉದ್ದೇಶ ಕೇಂದ್ರದಿಂದ ಪರಿಹಾರ ತರಬೇಕು ಅಂತಲೋ, ರಾಜಕಾರಣ ಮಾಡಬೇಕು ಅಂತಲೋ? ಸರ್ಕಾರ ಬಂದು ಆರು ತಿಂಗಳಲ್ಲಿ ಯಾವುದಾದರೂ ಹೊಸ ಯೋಜನೆ ತಂದಿದ್ದಾರಾ? ಯಾವ ಶಾಸಕ ತಮ್ಮ‌ ಕ್ಷೇತ್ರದಲ್ಲಿ ಗೌರವಯುತವಾಗಿ ಓಡಾಡಿದ್ದಾರಾ? ಕ್ಷೇತ್ರದ ಅಭಿವೃದ್ಧಿಗೆ ಒಂದು ಬಿಡಿಗಾಸು ಅನುದಾನ ಕೊಟ್ಟಿಲ್ಲ. ಇವರ ಉದ್ದೇಶ ರಾಜಕಾರಣ ಮಾಡೋದು ಎಂದು ಗರಂ ಆದರು.

ಇದನ್ನೂಓದಿ:ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ನಟಿ ಕಂಗನಾ ಸ್ಪರ್ಧಿಸುವುದು ಖಚಿತ: ತಂದೆಯಿಂದ ಮಹತ್ವದ ಮಾಹಿತಿ

ABOUT THE AUTHOR

...view details