ಬೆಂಗಳೂರು:ಹೆಣ್ಣಿನ ಮದುವೆ ವಯಸ್ಸಿನ ಮಿತಿಯನ್ನು 18 ರಿಂದ 21ಕ್ಕೆ ಹೆಚ್ಚಿಸುವ ಕೇಂದ್ರ ಸರ್ಕಾರದ ನಿಲುವನ್ನು ಮಹಿಳಾಪರ ಹೋರಾಟಗಾರ್ತಿ ಹಾಗೂ ಹೈಕೋರ್ಟ್ನ ಹಿರಿಯ ನ್ಯಾಯವಾದಿ ಪ್ರಮೀಳಾ ನೇಸರ್ಗಿ ಸ್ವಾಗತಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 74ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಮಾತನಾಡಿ, ‘ನಮ್ಮ ಪುತ್ರಿಯರ ಮದುವೆಯ ಕನಿಷ್ಠ ವಯಸ್ಸು ನಿರ್ಧರಿಸುವ ಬಗ್ಗೆ ಚರ್ಚಿಸಲು ಸಮಿತಿ ರಚಿಸಿದ್ದೇವೆ. ಸಮಿತಿ ನೀಡುವ ವರದಿ ಆಧರಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದರು. ಈ ವಿಚಾರವಾಗಿ ದೇಶದೆಲ್ಲೆಡೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಮಾತನಾಡಿರುವ ಹಿರಿಯ ನ್ಯಾಯವಾದಿ ಪ್ರಮೀಳಾ ನೇಸರ್ಗಿ ಪ್ರಧಾನಿಯವರ ಚಿಂತನೆ ಅಭಿನಂದನಾರ್ಹ ಎಂದಿದ್ದಾರೆ.
ಮಹಿಳಾಪರ ಹೋರಾಟಗಾರ್ತಿ ಪ್ರಮೀಳಾ ನೇಸರ್ಗಿ ಸಂವಿಧಾನದಲ್ಲಿ ಗಂಡು-ಹೆಣ್ಣು ಸಮಾನರು, ಲಿಂಗ ತಾರತಮ್ಯ ಮಾಡಬಾರದು ಎಂದಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಗೆ ಸಮಾನತೆ ನೀಡಬೇಕು ಎನ್ನುತ್ತಾರೆ. ಹಾಗಿದ್ದ ಮೇಲೆ ಹೆಣ್ಣಿನ ಮದುವೆ ವಯಸ್ಸಿನಲ್ಲಿ ತಾರತಮ್ಯವೇಕೆ ಎಂದು ಪ್ರಶ್ನಿಸಿರುವ ನೇಸರ್ಗಿ, ವಯೋಮಿತಿ ಹೆಚ್ಚಿಸಲು ಯಾವುದೇ ಕಾನೂನಾತ್ಮಕ ತೊಡಕು ಇಲ್ಲ ಎಂದಿದ್ದಾರೆ. ಹೆಣ್ಣಾಗಲಿ ಗಂಡಾಗಲೀ ಮದುವೆ ಮುನ್ನ ಅವರ ಸ್ವಂತ ಬಲದ ಮೇಲೆ ಬದುಕು ಕಟ್ಟಿಕೊಳ್ಳುವಷ್ಟು ಶಕ್ತರಿರಬೇಕು. ಕನಿಷ್ಠ ಒಂದು ಡಿಗ್ರಿ ಪಡೆಯೋಕೆ ವಯಸ್ಸು 18 ದಾಟಿ 21 ಆಗುತ್ತದೆ. ಈ ವಯಸ್ಸು ದಾಟಿದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ, ಬೌದ್ಧಿಕವಾಗಿ ಸಾಕಷ್ಟು ಪ್ರಬುದ್ಧರಾಗಿರುತ್ತಾರೆ. ಇಂತಹ ವಯಸ್ಸಿನಲ್ಲಿ ಮದುವೆ ಮಾಡಿದರೆ ಬದುಕು ಉತ್ತಮವಾಗಿರುತ್ತದೆ ಎಂದಿದ್ದಾರೆ.
ಹಿಂದೆಲ್ಲಾ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆ ಪ್ರಬಲವಾಗಿತ್ತು. ಗಂಡು ಕುಟುಂಬಕ್ಕೆ ದುಡಿಯಬೇಕಿತ್ತು. ಪ್ರಸ್ತುತ ಸಂದರ್ಭದಲ್ಲಿ ಮಹಿಳೆಯೂ ಕುಟುಂಬಕ್ಕಾಗಿ ಹೊರಗೆ ಹೋಗಿ ದುಡಿಯುತ್ತಿದ್ದಾಳೆ. ಹಿಂದೆಲ್ಲಾ ಹೆಣ್ಣು ಮಕ್ಕಳು ಭಾರ ಎಂಬ ಮನಸ್ಥಿತಿಯಲ್ಲಿ ಋತುಮತಿಯಾಗುತ್ತಲೇ ಮದುವೆ ಮಾಡಿ ಕಳುಹಿಸುತ್ತಿದ್ದರು. ಆದರೀಗ ಕಾಲ ಬದಲಾಗಿದ್ದು ಹೆಣ್ಣು ಮಕ್ಕಳು ಗಂಡು ಮಕ್ಕಳಿಗೆ ಸರಿಸಮನಾಗಿ ಕಲಿಯುತ್ತಿದ್ದಾರೆ ಮತ್ತು ದುಡಿಯುತ್ತಿದ್ದಾರೆ. ಇತ್ತೀಚೆಗೆ ಪಿತ್ರಾರ್ಜಿತ ಆಸ್ತಿಯಲ್ಲಿಯೂ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡಾಗ ಪ್ರಧಾನಿ ಮಾತು ಹೆಚ್ಚು ಸೂಕ್ತವಾಗಿದೆ ಎಂದು ಪ್ರಮೀಳಾ ನೇಸರ್ಗಿ ಅಭಿಪ್ರಾಯಪಟ್ಟಿದ್ದಾರೆ.
ಕಾಲ ಬದಲಾಗಿದೆ:ಕಳೆದೆರಡು ದಶಕಗಳಲ್ಲಿ ಆಗಿರುವ ಸಾಮಾಜಿಕ ಸ್ಥಿತ್ಯಂತರಗಳನ್ನು ಗಮನಿಸಿದಾಗ ಪೋಷಕರು ಹೆಣ್ಣು ಮಕ್ಕಳನ್ನೂ ಗಂಡು ಮಕ್ಕಳಿಗೆ ಸಮಾನವಾಗಿ ಕಾಣುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಪರಿಣಾಮ ಪ್ರಸ್ತುತ ಗಂಡು ಮಕ್ಕಳಿಗಷ್ಟೇ ಸೀಮಿತವಾಗಿದ್ದ ಉನ್ನತ ಶಿಕ್ಷಣ ಇದೀಗ ಹೆಣ್ಣುಮಕ್ಕಳಿಗೂ ಸಿಗುತ್ತಿದೆ. ಬುಡಕಟ್ಟು ಮತ್ತು ಗ್ರಾಮೀಣ ಭಾಗದಲ್ಲಿ ಕೆಲವೇ ಅಪವಾದಗಳನ್ನು ಹೊರತುಪಡಿಸಿದರೆ ಹೆಣ್ಣು ಮಕ್ಕಳ ಸ್ಥಾನಮಾನ ದೊಡ್ಡಮಟ್ಟದಲ್ಲಿ ಬದಲಾಗಿದೆ. ಇದರಿಂದಾಗಿ ಯಾವುದೇ ಕಾನೂನಿನ ಒತ್ತಡವಿಲ್ಲದೆಯೂ ಹೆಣ್ಣು ಮಕ್ಕಳ ಮದುವೆ ವಯಸ್ಸು ಸಹಜವಾಗಿ 21 ದಾಟುತ್ತಿದೆ. ಹೀಗಾಗಿ, ಸರ್ಕಾರ ಯುವತಿಯರ ಮದುವೆಯ ವಯಸ್ಸನ್ನು ಏರಿಕೆ ಮಾಡಿದಲ್ಲಿ ಯಾವುದೇ ಸಮಸ್ಯೆಯಾಗದು ಎಂಬುದು ಮಹಿಳಾ ಪರ ಹೋರಾಟಗಾರರ ಅಭಿಪ್ರಾಯ.
ವಯೋಮಿತಿ ಏರಿಕೆಗೆ ಕಾನೂನು ತೊಡಕು?:ಸ್ವಾತಂತ್ರ್ಯ ಪೂರ್ವ ಭಾರತದಲ್ಲಿದ್ದ ಬಾಲ್ಯ ವಿವಾಹ ಪದ್ದತಿ ತಡೆಯಲು ಬ್ರಿಟಿಷ್ ಆಡಳಿತ 1929ರಲ್ಲಿ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 15 ವರ್ಷಕ್ಕೆ ನಿಗದಿ ಮಾಡಿ ಕಾನೂನು ಜಾರಿಗೊಳಿಸಿತ್ತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ 1955 ರಲ್ಲಿ ಜಾರಿ ಮಾಡಿದ ಹಿಂದೂ ವಿವಾಹ ಕಾಯ್ದೆಯಲ್ಲಿ ಹೆಣ್ಣು ಮತ್ತು ಗಂಡಿನ ಮದುವೆ ವಯಸ್ಸನ್ನು ಅನುಕ್ರಮವಾಗಿ 18 ಮತ್ತು 21ಕ್ಕೆ ನಿಗದಿ ಮಾಡಲಾಗಿದೆ. ಹಾಗಿದ್ದೂ ಬಾಲ್ಯ ವಿವಾಹ ಪ್ರಕರಣಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಆಗದ ಹಿನ್ನೆಲೆಯಲ್ಲಿ 2006ರಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿ ಮಾಡಲಾಗಿದೆ.
ಸಂವಿಧಾನದ ವಿಧಿಗಳ ಪ್ರಕಾರ ಯಾವುದೇ ವಿಧದಲ್ಲೂ ಲಿಂಗ ತಾರತಮ್ಯ ಕಾನೂನು ಸಮ್ಮತವಲ್ಲ. ಹೀಗಾಗಿ ಕೇಂದ್ರ ಸರ್ಕಾರ ಸಮಿತಿ ನೀಡುವ ವರದಿ ಶಿಫಾರಸ್ಸಿನ ಮೇರೆಗೆ ವಯೋಮಿತಿ ಏರಿಕೆ ಮಾಡಿದಲ್ಲಿ ಕಾನೂನು ತೊಡಕು ಎದುರಾಗುವ ಸಾಧ್ಯತೆಗಳು ತೀರಾ ವಿರಳ. ಮಾಹಿತಿಗಳ ಪ್ರಕಾರ ಸಮಿತಿ ಕೂಡ ಮದುವೆಯ ವಯಸ್ಸನ್ನು ವೈಜ್ಞಾನಿಕ ಕಾರಣಗಳ ಮೇಲೆಯೇ ನಿರ್ಧರಿಸಲು ಮುಂದಾಗಿದೆ. ಮಾತೃತ್ವ, ಫಲವತ್ತತೆ, ತಾಯಂದಿರ ಮರಣ, ಮಗುವಿನ ಆರೋಗ್ಯ, ಶಿಶು ಮರಣ ಪ್ರಮಾಣ ಹಾಗೂ ಲಿಂಗಾನುಪಾತ ಮತ್ತಿತರ ಸಂಗತಿಗಳ ಮೇಲೆ ಮದುವೆಯ ವಯಸ್ಸು ಬೀರುವ ಪರಿಣಾಮಗಳನ್ನು ವೈಜ್ಞಾನಿಕ ಆಧಾರದಲ್ಲಿ ಪರಿಶೀಲಿಸುತ್ತಿದೆ.
ಕಾನೂನಾತ್ಮಕ ಪರಿಣಾಮಗಳು:ಬಾಲ್ಯ ವಿವಾಹ ಕಾಯ್ದೆಯ ಪ್ರಕಾರ 18 ವಯಸ್ಸು ತಲುಪುವವರೆಗೂ ಹೆಣ್ಣುಮಕ್ಕಳು ಪೋಷಕರ ಸುಪರ್ದಿಯಲ್ಲೇ ಇರುತ್ತಾರೆ. ಇವರ ಸಂಪೂರ್ಣ ಹೊಣೆಗಾರಿಕೆ ಕಾನೂನು ಬದ್ಧ ಪೋಷಕರದ್ದೇ ಆಗಿರುತ್ತದೆ. ಹೀಗಾಗಿಯೇ 18ಕ್ಕಿಂತ ಕಡಿಮೆ ವಯಸ್ಸಿನ ಯುವತಿಯೊಂದಿಗೆ ಮದುವೆಯಾದ, ಪ್ರೀತಿಸಿ ಮನೆ ಬಿಟ್ಟುಹೋದ, ದೈಹಿಕ ಸಂಪರ್ಕ ಮಾಡಿದ ಯುವಕರು ಸಾಕಷ್ಟು ಸಂಖ್ಯೆಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಅಪ್ರಾಪ್ತರೊಂದಿಗಿನ ಲೈಂಗಿಕ ಸಂಪರ್ಕ ಒಪ್ಪಿತವಾಗಿದ್ದರೂ ಅದು ಅಪರಾಧ ಎಂದು ಹೈಕೋರ್ಟ್ ಇತ್ತೀಚೆಗಿನ ಪ್ರಕರಣದಲ್ಲಿ ಸ್ಪಷ್ಟಪಡಿಸಿದೆ. ವಯೋಮಿತಿ ಏರಿಕೆಯಾದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ.
ಗ್ರಾಮೀಣ ಭಾಗದ ಬಡ ಕುಟುಂಬಗಳಲ್ಲಿ ಮತ್ತು ಬುಡಕಟ್ಟು ಸಮುದಾಯಗಳಲ್ಲಿ ಋತುಮತಿಯಾದ ಅಪ್ರಾಪ್ತ ಹೆಣ್ಣುಮಕ್ಕಳನ್ನು ಕೂಡಲೇ ಮದುವೆ ಮಾಡಿ ಕಳುಹಿಸುವ ಸಂಪ್ರದಾಯ ಇಂದಿಗೂ ಯಥಾವತ್ತಾಗಿ ಮುಂದುವರೆದಿದೆ. ಈ ಪದ್ದತಿಯನ್ನು ನಿಯಂತ್ರಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪೊಲೀಸರೊಂದಿಗೆ ಜಿಲ್ಲಾಡಳಿತಗಳು ನಿರಂತರ ಶ್ರಮಿಸುತ್ತಿವೆ. ಬಾಲ್ಯ ವಿವಾಹಕ್ಕೆ 2 ವರ್ಷ ಜೈಲು, 1 ಲಕ್ಷ ದಂಡ ವಿಧಿಸಬಹುದಾಗಿದೆ. ಹಾಗಿದ್ದೂ ಬಾಲ್ಯ ವಿವಾಹಗಳು ನಡೆಯುತ್ತಿದ್ದು, ಈ ಪ್ರಕರಣಗಳು ಮತ್ತಷ್ಟು ಹೆಚ್ಚಾಗಲಿವೆ. ಇದರಿಂದಾಗಿ ಪೋಷಕರು ಹಾಗೂ ಮಕ್ಕಳು ಕಾನೂನಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.