ಬೆಂಗಳೂರು: ಪ್ರತಿಪಕ್ಷ ನಾಯಕ ಯಾರಾಗಬೇಕು ಎಂದು ಪಕ್ಷದ ರಾಷ್ಟ್ರೀಯ ನಾಯಕರು ಬಂದು ನಿರ್ಧಾರ ಮಾಡಲಿದ್ದಾರೆ. ಕಟೀಲ್ ಅವರ ಅಧಿಕಾರ ಅವಧಿಯೂ ಮುಗಿದಿದ್ದು ಹೊಸಬರ ನೇಮಕವಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನೆಡೆಯಾಗಿದೆ. ಇದು ನಿರಾಶಾದಾಯಕ ಫಲಿತಾಂಶ ಎಂದು ಈಗಾಗಲೇ ಹೇಳಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಇಂತಹ ಘಟನೆ ಕೆಲವೊಮ್ಮೆ ನಡೆಯುತ್ತದೆ. ನಾವು ಸೋಲನ್ನ ಸವಾಲಾಗಿ ತೆಗೆದುಕೊಂಡಿದ್ದೇವೆ. ಮುಂದಿನ ದಿನದಲ್ಲಿ ಲೋಕಸಭಾ ಚುನಾವಣೆಗೆ ಹೋರಾಟ ನಡೆಸುತ್ತೇವೆ. ಚುನಾವಣಾ ದೃಷ್ಟಿಯಿಂದ ಹೈಕಮಾಂಡ್ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿರಲಿಲ್ಲ. ಅವರನ್ನೇ ಮುಂದುವರೆಸಿತ್ತು. ಈಗ ಹೊಸಬರ ಆಯ್ಕೆ ನಡೆಯಲಿದೆ. ಪ್ರತಿಪಕ್ಷ ನಾಯಕರ ಆಯ್ಕೆ ಕುರಿತು ಶಾಸಕಾಂಗ ಪಕ್ಷದ ಸಭೆ ಕರೆದು ತೀರ್ಮಾನ ಮಾಡುತ್ತೇವೆ. ಅದಕ್ಕೂ ಮುನ್ನ ನಮ್ಮ ರಾಷ್ಟ್ರೀಯ ನಾಯಕರಲ್ಲೊಬ್ಬರು ಬಂದು ತೀರ್ಮಾನ ಮಾಡುತ್ತಾರೆ' ಎಂದರು.
ಕರೆಂಟ್ ಬಿಲ್ ಕಟ್ಟಲ ಅಂತ ಜನ ಹೇಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಶಿ 'ಇದು ಟೂ ಅರ್ಲಿ. ಅವರು ಜನರಿಗೆ ಕೊಟ್ಟಿರುವ ಭರವಸೆ ನ್ಯಾಯಯುತವಾಗಿ ಈಡೇರಿಸಲಿ. ಅವರು ಅಧಿಕಾರಕ್ಕೆ ಬರಲಿ. ಮುಂದೆ ಏನು ಮಾಡ್ತಾರೆ ನೋಡೋಣ ಎಂದರು. ಈಗ ಡಬಲ್ ಇಂಜಿನ್ ಇಲ್ಲ ಏನು ಮಾಡ್ತೀರಾ? ಎಂಬ ಪ್ರಶ್ನೆಗೆ 'ಭಾರತ ಸರ್ಕಾರದ ಯೋಜನೆ ಮೇಲೆ ನಡೆಯಲಿದೆ. ಮೋದಿ ನೇತೃತ್ವದ ಸರ್ಕಾರವನ್ನ ದೇಶದ ಜನ ಸ್ವೀಕರಿಸಿದ್ದಾರೆ. ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ಮಧ್ಯಪ್ರದೇಶ, ಛತ್ತೀಸ್ಗಢ, ರಾಜಸ್ಥಾನದಲ್ಲಿ ಬಿಜೆಪಿ ಸೋತಿತ್ತು. ರಾಜಸ್ತಾನ ಬಿಟ್ಟು ಎಲ್ಲೆಡೆ ಗೆಲುವನ್ನ ಸಾಧಿಸಿದೆವು. ಜನ ಬುದ್ದಿವಂತರಿದ್ದಾರೆ. ಯಾವ ಕಾಲದಲ್ಲಿ ಯಾರಿಗೆ ಮತ ನೀಡಬೇಕು ಅಂತ ಗೊತ್ತಿದೆ. ಈಗ ಕಾಂಗ್ರೆಸ್ ಸರ್ಕಾರ ಬಂದಿದೆ. ಅವರ ಆಡಳಿತ ಹೇಗಿರಲಿದೆ ನೋಡೋಣ' ಎಂದರು.