ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿರುದ್ಧ ನಾವು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ ಎಂದು ವಿಧಾನಪರಿಷತ್ ಸದಸ್ಯ ಪ್ರಕಾಶ ರಾಥೋಡ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಳಿನ್ ಕುಮಾರ್ ಕಟೀಲು ವಿವಾದಾತ್ಮಕ ಹೇಳಿಕೆ ನೀಡಿದ್ದು, ಅದರ ವಿರುದ್ಧ ದೂರು ಸಲ್ಲಿಸಿದ್ದೇವೆ. ಇವರು ರಾಷ್ಟ್ರೀಯ ವಿಪತ್ತು ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದೇವೆ. ಇಂದು ನಾನು ಬದುಕಿದ್ದರೆ ಪ್ರಧಾನಿ ನರೇಂದ್ರ ಮೋದಿ ಕೋವಿಡ್ ವಿಚಾರದಲ್ಲಿ ಕೈಗೊಂಡಿರುವ ನಿರ್ಧಾರವೇ ಕಾರಣ ಎಂದು ಕಟೀಲ್ ಹೇಳಿದ್ದಾರೆ. ಹಾಗಾದರೆ, ಸಾವಿರಾರು ಮಂದಿ ಇದೇ ರೋಗದಿಂದ ಸಾವನ್ನಪ್ಪಿದ್ದು ಅದಕ್ಕೆ ಪ್ರಧಾನಿ ಹೊಣೆಯಾಗಬೇಕಾಗುತ್ತದೆ ಎಂದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 54ರ ಪ್ರಕಾರ, ರೋಗದ ವಿರುದ್ಧ ಸಾರ್ವಜನಿಕರಲ್ಲಿ ತಪ್ಪು ಹೇಳಿಕೆ ನೀಡಿದ ನಳಿನ್ ಕುಮಾರ್ ಕಟೀಲ್ ಶಿಕ್ಷೆಗೆ ಅರ್ಹರಾಗಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಕ್ಷರನ್ನಾಗಿ ಕೇಂದ್ರದ ಆರೋಗ್ಯ ಸಚಿವರನ್ನು ನೇಮಿಸಲಾಗಿದೆ. ಭಾರತ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಒಳ್ಳೆಯ ಕೆಲಸವನ್ನು ಮಾಡಿದ್ದು, ಅದನ್ನ ಮೆಚ್ಚಿ ವಿಶ್ವ ಆರೋಗ್ಯ ಸಂಸ್ಥೆ ಈ ಮಹತ್ವದ ಹುದ್ದೆ ನೀಡಿದೆ ಎಂದು ಕಟೀಲ್ ಹೇಳಿದ್ದಾರೆ.
2019ರಲ್ಲಿ ಭಾರತಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕೆಂಬ ನಿರ್ಧಾರವಾಗಿತ್ತು. ಇದು ಭಾರತಕ್ಕೆ ರೋಟೇಶನ್ ರೂಪದಲ್ಲಿ ಸಿಗಲೇ ಬೇಕಿದ್ದ ಗೌರವವಾಗಿದೆ. ಅದನ್ನು ಕೂಡ ಬಿಜೆಪಿ ಪಕ್ಷ ತನ್ನ ಜನಪ್ರಿಯತೆಗೆ ಬಳಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರೇ ದೇಶಕ್ಕೆ ದೊಡ್ಡ ವಿಪತ್ತು ಎಂದು ಹರಿಹಾಯ್ದರು.