ಬೆಂಗಳೂರು :ಹಾಸನದ ಸಂಸದ ಪ್ರಜ್ವಲ್ ರೇವಣ್ಣನನ್ನು ಕುಮಾರಸ್ವಾಮಿ ನೋಡಿ ಕಲಿಯಬೇಕೆಂಬ ಮಂಡ್ಯ ಸಂಸದೆ ಸುಮಲತಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು, ದೇವೇಗೌಡರ ಕುಟುಂಬವನ್ನು ಒಡೆಯುವ ಕುತಂತ್ರ ನಡೆಯುತ್ತಿದೆ. ಅದು ಸಾಧ್ಯವಿಲ್ಲ ಎಂದು ಸಂಸದೆ ಸುಮಲತಾ ವಿರುದ್ಧ ಹರಿಹಾಯ್ದಿದ್ದಾರೆ.
ಇಂದು ಜೆಡಿಎಸ್ ಕಚೇರಿಯಲ್ಲಿ ಸಭೆಗೂ ಮುನ್ನ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಹೆಸರು ತರುವ ಮೂಲಕ ನಮ್ಮ ಕುಟುಂಬ ಒಡೆಯುವ ಕೆಲಸ ನಡೆಯುತ್ತಿದೆ. ಪ್ರಜ್ವಲ್ ರೇವಣ್ಣರನ್ನು ನೋಡಿ ಕಲಿಯಬೇಕಂತೆ. ನಮ್ಮ ಕುಟುಂಬವನ್ನು ಒಡೆಯುವ ಹುನ್ನಾರವಲ್ಲವೇ?. ಕುಟುಂಬ ಒಡೆಯಲು ಪದ ಬಳಕೆ ಮಾಡಿದ್ದಾರೆ. ನಮ್ಮ ಕುಟುಂಬವನ್ನ ಯಾರಿಗೂ ಒಡೆಯಲು ಸಾಧ್ಯವಿಲ್ಲ.
ನಿಮ್ಮಂತಹ ಕುತಂತ್ರಗಳಿಂದ ಒಡೆಯಲು ಸಾಧ್ಯವಿಲ್ಲ. ಕುಟುಂಬವನ್ನು ಒಡೆಯಲು ಬಂದವರು ಏನು ಆಗಿದ್ದಾರೆ ಅಂತಾ ಗೊತ್ತಿದೆ. ಸುಮಲತಾ ಅವರಿಂದ ಸಂಸ್ಕೃತಿ ಪಾಠ ನಾನು ಕಲಿಯಬೇಕಿಲ್ಲ. ಅವರ ಸಂಸ್ಕೃತಿ ಏನು ಅಂತಾ ನನಗೆ ಗೊತ್ತಿದೆ. ಸಂಸ್ಕೃತಿ, ಭಾಷೆ ನಾನು ಚೆನ್ನಾಗಿ ತಿಳಿದುಕೊಂಡಿದ್ದೇನೆ ಎಂದು ತಿರುಗೇಟು ನೀಡಿದರು.
ನಾನೇಕೆ ಕ್ಷಮೆ ಕೇಳಬೇಕು :ನಾನೇಕೆ ಸುಮಲತಾ ಅವರ ಬಳಿ ಕ್ಷಮೆ ಕೇಳಬೇಕು. ನಾನು ಯಾವತರ ಪದಗಳ ಬಳಕೆ ಮಾಡಬೇಕಾಗಿತ್ತು. ಹಳ್ಳಿ ಭಾಷೆಯಲ್ಲಿ ಪದ ಬಳಸಿದ್ದೇನೆ. ಕ್ಷಮೆ ಕೇಳಬೇಕಾದ ಪದ ಬಳಕೆ ಮಾಡಿಲ್ಲ. ಕನ್ನಡ ಪದ ಬಳಕೆ ಸಂಸ್ಕೃತಿ ಬಗ್ಗೆ ನನಗೆ ಗೊತ್ತಿದೆ. ಅವರು ನನಗೆ ಹೇಳಿ ಕೊಡಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ನನ್ನ ಬಳಿ ಮಾಧ್ಯಮಗಳು ಬರುವುದೇ ಬೇಡ. ಸುಮ್ಮನೆ ನನ್ನ ವಿರುದ್ಧ ಇಲ್ಲಸಲ್ಲದ ಸುದ್ದಿ ಮಾಡಬೇಡಿ. ಸರಿಯಾಗಿ ಅರ್ಥ ಮಾಡಿಕೊಂಡು ಸುದ್ದಿ ಮಾಡಿ. ಹಳ್ಳಿ ಭಾಷೆಯಲ್ಲಿ ಹೇಳಿಕೆ ನೀಡಿದ್ದೇನೆ. ಅದನ್ನ ಮೊದಲು ಮಾಧ್ಯಮಗಳು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮುಂದಿನ ರಾಜಕಾರಣ ಮಂಡ್ಯದಲ್ಲಿ ತೋರಿಸುವೆ :ಕೆಆರ್ಎಸ್ ಬಿರುಕು ಬಿಟ್ಟಿದ್ದರೆ ಅಲ್ಲಿಗೆ ಮಾಧ್ಯಮದವರನ್ನು ಕರೆದುಕೊಂಡು ಹೋಗಿ ತೋರಿಸಬೇಕಾಗಿತ್ತು. ಅದರ ಬದಲಿಗೆ ಗಣಿಗಾರಿಕೆ ತೋರಿಸಲು ಹೋಗಿದ್ದಾರೆ. ಸಿನಿಮಾದಲ್ಲಿ ನಡೆಸುವ ರಾಜಕಾರಣವನ್ನು ಇಲ್ಲಿಯೂ ನಡೆಸುತ್ತೇನೆ ಅಂದುಕೊಂಡಿದ್ದಾರೆ ಎಂದು ಸುಮಲತಾ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ, ಮುಂದಿನ ರಾಜಕಾರಣವನ್ನು ಮಂಡ್ಯದಲ್ಲಿ ತೋರಿಸುತ್ತೇನೆ. ಮಂಡ್ಯದಲ್ಲಿ ನಮ್ಮನ್ನು ಸೋಲಿಸಿದ್ದೀರಾ.. ಅಲ್ಲಿಂದಲೇ ಪ್ರಾರಂಭ ಮಾಡುತ್ತೇನೆ ಎಂದು ಸವಾಲು ಹಾಕಿದರು.
ಸಹೋದರ ನಟ ಅಂಬರೀಶ್ ಮೃತಪಟ್ಟ ವೇಳೆ ನಾನು ಯಾವ ರೀತಿ ಗೌರವ ಕೊಟ್ಟಿದ್ದೇನೆ ಅಂತಾ ಜನತೆಗೆ ಗೊತ್ತಿದೆ. ಇವತ್ತು ಮಂಡ್ಯ ಬಗ್ಗೆ ಮಾತನಾಡುತ್ತಾರೆ. ಅವತ್ತು ಅಂಬರೀಶ್ ಮೃತದೇಹವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗುವುದು ಬೇಡ ಅಂದಿದ್ದು ಅವರು. ಮಂಡ್ಯಕ್ಕೆ ತೆಗೆದುಕೊಂಡು ಹೋದ ಮೇಲೆ ಮಣ್ಣನ್ನು ಹಚ್ಚಿಕೊಂಡ್ರು ಎಂದರು.
ಮಾಧ್ಯಮದವರು ನಾನು ಕೊಟ್ಟ ಹೇಳಿಕೆಯನ್ನು ತಿರುಚುವ ಕೆಲಸವನ್ನು ಮಾಡಿದ್ದಾರೆ. ಕಳೆದ 50 ವರ್ಷದಿಂದ ಮಾಧ್ಯಮ ಎಷ್ಟರಮಟ್ಟಿಗೆ ಸಹಕಾರ ಕೊಟ್ಟಿದ್ದಾರೆ ಅನ್ನೋದು ಗೊತ್ತಿದೆ. ಮೈತ್ರಿ ಸರ್ಕಾರ ಇದ್ದಾಗ, ಮಂಡ್ಯ ಲೋಕಸಭಾ ಚುನಾವಣೆ ಇದ್ದಾಗ ಏನೇನು ಮಾಡಿದ್ದೀರಿ ಅಂತಾ ಗೊತ್ತಿದೆ ಎಂದು ಮಾಧ್ಯಮಗಳ ವಿರುದ್ಧ ಹೆಚ್ಡಿಕೆ ಹರಿಹಾಯ್ದರು.
ರಾಜ್ಯದ ಸಂಪತ್ತನ್ನು ಲೂಟಿ ಮಾಡಲು ಅವಕಾಶ ನೀಡಿಲ್ಲ. ನನ್ನ ತೇಜೋವಧೆ ನಡೆಯುತ್ತಿದೆ. ಮಾಧ್ಯಮಗಳು ಏನು ಮಾಡುತ್ತಿದ್ದಾರೆ ಅನ್ನೋದು ಗೊತ್ತಿದೆ. ಪ್ರತಿನಿತ್ಯ ತೇಜೋವಧೆ ನಡೆಯುತ್ತಿದೆ. ದೇವೇಗೌಡರ ವಿರುದ್ಧ ಏನೆಲ್ಲಾ ಷಡ್ಯಂತ್ರ ನಡೆಯಿತು ಅಂತಾ ಗೊತ್ತಿದೆ. ಆದರೂ ದೇವೇಗೌಡರು ಪ್ರಧಾನಿ ಆಗೋದನ್ನು ತಪ್ಪಿಸಲು ಸಾಧ್ಯವಾಯಿತಾ ಎಂದರು.
ಮಂಡ್ಯದಲ್ಲಿ ಸುಮಲತಾ ಅವರು ಏನು ಕೆಲಸ ಮಾಡಿದ್ದಾರೆ. ಜನ ಸತ್ತಾಗ ಅವರು ಹೋಗಲಿಲ್ಲ. ಈಗ ಕಲ್ಲು ಗಣಿಗಾರಿಕೆ ವೀಕ್ಷಿಸಲು ಹೋಗಿದ್ದಾರೆ. ಈ ರಾಜಕಾರಣ ಸಿನಿಮಾದಲ್ಲಿ ನಟಿಸಿದಂತೆ ಇಲ್ಲೂ ಮಾಡಬಹುದು ಅಂದುಕೊಂಡಿದ್ದಾರೆ. ನನ್ನ ಪ್ರೀತಿಸುವ ದೊಡ್ಡ ವರ್ಗವೇ ರಾಜ್ಯದಲ್ಲಿ ಇದೆ. ಸೋಲು, ಗೆಲುವು ಎರಡನ್ನೂ ನೋಡಿದ್ದೇವೆ. ದೇವೇಗೌಡರು ಸೋತಾಗ ರಾಜಕೀಯ ಜೀವನ ಮುಗಿದೇ ಹೋಯ್ತು ಅಂದಿದ್ದರು. ಐದೇ ವರ್ಷದಲ್ಲಿ ಪ್ರಧಾನಿಯಾದರು. ಮುಂದೆ ರಾಜಕಾರಣ ಏನಾಗುತ್ತೋ ನೋಡೋಣ ಎಂದರು.
ಆಡಿಯೋ ರಿಲೀಸ್ಗೆ ಆತುರ ಯಾಕೆ?. ನನಗೇನು ಆತುರ ಇಲ್ಲ. ನಾನು ಲಘುವಾಗಿ ಮಾತನಾಡುವುದಿಲ್ಲ. ದಾಖಲೆಗಳೊಂದಿಗೆ ಮಾತನಾಡುವವನು. ಯಾರನ್ನೋ ಹೆದರಿಸಲು ಮಾತನಾಡೋದಿಲ್ಲ ಎಂದು ಹೇಳಿದರು.