ಗದಗ: ಕಾಂಗ್ರೆಸ್ ಮಾಡಿದ ಸಾಧನೆಗಳನ್ನು ನೀವು ಮಾಡೋಕೆ ಸಾಧ್ಯವೇ?, ನೀವು ಮಾಡಿದ ಸಾಧನೆಗಳ ಪಟ್ಟಿ ಮಾಡಿ ಹೇಳೋಕೆ ನಿಮಗೆ ಧಮ್, ತಾಕತ್ತಿದೆಯೇ? ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಹಾಗು ಶಾಸಕ ಹೆಚ್.ಕೆ.ಪಾಟೀಲ್ ಬುಧವಾರ ಸಂಜೆ ಇಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಯೂರಿಯಾ ಗೊಬ್ಬರ ಕೇವಲ 474 ರೂ. ಇತ್ತು. ಈಗ 1,364 ರೂಪಾಯಿ ಆಗಿದೆ. ಸಿಮೆಂಟ್, ಕಬ್ಬಿಣ ಸೇರಿದಂತೆ ಇತರೆ ವಸ್ತುಗಳ ದರ ಹೆಚ್ಚಳ ಮಾಡಿ ಶ್ರೀಮಂತರಿಗೆ ಅನುಕೂಲ ಮಾಡಿಕೊಟ್ಟಿರಿ. ರೈತರು ಮತ್ತು ಬಡವರಿಗೆ ಬೇಕಾದ ವಸ್ತುಗಳ ಬೆಲೆ ಏರಿಕೆ ಮಾಡುವುದು ತಾಕತ್ತು ಅಲ್ಲ. ನಿಮ್ಮಲ್ಲಿ ಧಮ್ ಮತ್ತು ತಾಕತ್ತು ಅನ್ನೋದು ಇದ್ದರೆ ಅವುಗಳ ಬೆಲೆ ಕಡಿಮೆ ಮಾಡಿ ಎಂದರು.
ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ. ಬಡವರು ಬಡರಾಗಿಯೇ ಇದ್ದಾರೆ. ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ಈ ಸರ್ಕಾರವನ್ನು ಹೀಗೆ ಆಳಲು ಬಿಟ್ಟರೆ ಬಡವರಿಗೆ ಉಳಿಗಾಲ ಇಲ್ಲ ಎಂದು ಹೇಳಿದರು.
'ಮೋದಿ ಸುಳ್ಳಿನ ಸರದಾರ': ವಿಧಾನಸೌಧದಲ್ಲಿ ಹತ್ತು ಲಕ್ಷ ಹಣ ಸಿಕ್ಕಿರುವ ವಿಚಾರ ಪ್ರಸ್ತಾಪಿಸಿದ ಅವರು, ಈ ಜಿಲ್ಲೆಯ ಸಚಿವರೊಬ್ಬರಿಗೆ ಹತ್ತು ಲಕ್ಷ ರೂಪಾಯಿ ಕೊಡಲು ಅಧಿಕಾರಿಗಳು ವಿಧಾನಸೌಧಕ್ಕೆ ಬರುತ್ತಾರೆ. ವಿಧಾನಸೌಧವನ್ನು ಬಿಜೆಪಿ ಮಂತ್ರಿಗಳು ವಾಣಿಜ್ಯೋದ್ಯಮ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ಸಿ.ಸಿ.ಪಾಟೀಲ್ ವಿರುದ್ದ ವಾಗ್ದಾಳಿ ಮಾಡಿದರು. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಭಾಷಣದಲ್ಲಿ ಏನೂ ಕಡಿಮೆ ಇಲ್ಲ. ರಾಷ್ಟ್ರದಲ್ಲಿ ಸುಳ್ಳಿನ ಸರ್ದಾರ ಎಂದು ಅವರು ಖ್ಯಾತಿಯಾಗಿದ್ದಾರೆ ಎಂದು ಕೇಂದ್ರ ವಿರುದ್ಧವೂ ಕಿಡಿ ಕಾರಿದರು.