ಕರ್ನಾಟಕ

karnataka

ETV Bharat / state

ಬೊಮ್ಮಾಯಿ ಸಿಎಂ ಆದಾಗ ಬೆಂಕಿ ಬಿದ್ದದ್ದು ಯಾರ ಹೊಟ್ಟೆಗೆ ಪ್ರಹ್ಲಾದ್ ಜೋಶಿ?: ಸಿದ್ದರಾಮಯ್ಯ ಪ್ರಶ್ನೆ

ಬಿಎಸ್​ವೈ ಅವರಿಂದಲೇ ಆಪರೇಷನ್ ಕಮಲ ಮಾಡಿಸಿದ್ದು ಯಾರು? ಕೊನೆಗೆ ಅವರನ್ನೇ ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದ್ದು ಯಾರು? ಕೈಗೆ ಬಂದದ್ದು ಬಾಯಿಗೆ ಬಾರದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದಾಗ ಬೆಂಕಿ ಬಿದ್ದದ್ದು ಯಾರ ಹೊಟ್ಟೆಗೆ ಪ್ರಹ್ಲಾದ್ ಜೋಶಿ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪ್ರಹ್ಲಾದ್ ಜೋಶಿ ಮತ್ತು ಸಿದ್ದರಾಮಯ್ಯ
ಪ್ರಹ್ಲಾದ್ ಜೋಶಿ ಮತ್ತು ಸಿದ್ದರಾಮಯ್ಯ

By

Published : Jul 11, 2022, 10:26 PM IST

ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಡೆದ ಮನೆ ಬಿಜೆಪಿ ಎಂಬ ಟ್ಯಾಗ್ ಲೈನ್ ಅಡಿ ಸರಣಿ ಟ್ವೀಟ್ ಮಾಡಿರುವ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೇ, ನಾಲ್ಕು ದಶಕಗಳ ಕಾಲ ರಕ್ತ- ಬೆವರು ಹರಿಸಿ ಪಕ್ಷ ಕಟ್ಟಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿದವರು ಯಾರು? ಪಕ್ಷ ಅಧಿಕಾರದಲ್ಲಿದ್ದಾಗಲೇ ಅವರನ್ನು ಜೈಲಿಗೆ ಕಳಿಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು, ಯಾರ ಷಡ್ಯಂತ್ರ? ನೀವೂ ಅದರಲ್ಲಿ ಶಾಮೀಲಾಗಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನದ ಆಸೆ ತೋರಿಸಿ, ಅವರಿಂದಲೇ ಆಪರೇಷನ್ ಕಮಲ ಮಾಡಿಸಿದ್ದು ಯಾರು? ಕೊನೆಗೆ ಅವರನ್ನೇ ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದ್ದು ಯಾರು? ಕೈಗೆ ಬಂದದ್ದು ಬಾಯಿಗೆ ಬಾರದೇ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದಾಗ ಬೆಂಕಿ ಬಿದ್ದದ್ದು ಯಾರ ಹೊಟ್ಟೆಗೆ ಪ್ರಹ್ಲಾದ್ ಜೋಶಿ? ಎಂದು ಸಿದ್ದರಾಮಯ್ಯ ಟ್ವೀಟ್​ ಮೂಲಕ ಪ್ರಶ್ನಿಸಿದ್ದಾರೆ.

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನಿತ್ಯ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ವಿಜಯೇಂದ್ರರ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿರುವುದು ಯಾರ ಕುಮ್ಮಕ್ಕಿನಿಂದ? ಪಕ್ಷದ ಹಿರಿಯ ನಾಯಕನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಶಾಸಕರ ವಿರುದ್ದ ಕ್ರಮಕೈಗೊಳ್ಳದಂತೆ ತಡೆಯುತ್ತಿರುವ ಕೈಗಳು ಯಾರದ್ದು ಪ್ರಹ್ಲಾದ್ ಜೋಶಿ?.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಗ ವಿಜಯೇಂದ್ರನವರಿಗೆ ಸಚಿವ ಸ್ಥಾನ ಸಿಗದಂತೆ ಮಾಡಲು ಪಂಚೆ ಎತ್ತಿಕಟ್ಟಿ ನಿಂತು ಸಂತೋಷ ಪಡುತ್ತಿರುವವರು ಯಾರು?. ಆ ಸಂತೋಷದಲ್ಲಿ ಭಾಗಿಯಾಗಿರುವವರು ಯಾರು? ಹಗರಣಗಳಲ್ಲಿ ಅವರ ಹೆಸರನ್ನು ಸೋರಿಬಿಡುತ್ತಿರುವ ಸಂಚು ಯಾರದ್ದು ಪ್ರಹ್ಲಾದ್ ಜೋಶಿ? ಎಂದು ಕೇಳಿದ್ದಾರೆ.

ಲಿಂಗಾಯತರನ್ನು, ಲಿಂಗಾಯತ ಮಠದ ಸ್ವಾಮಿಗಳನ್ನು ಓಲೈಸುತ್ತಾ ಪಕ್ಷ ಕಟ್ಟಿ ಈಗ ಪಕ್ಷದಲ್ಲಿರುವ ಒಬ್ಬೊಬ್ಬ ಲಿಂಗಾಯತರನ್ನು ಮೂಲೆ ಗುಂಪು ಮಾಡುತ್ತಿರುವುದು ಯಾರ ಕಾರಸ್ತಾನ? ಮುಖ್ಯಮಂತ್ರಿ ಸ್ಥಾನದ ಕನಸಿನಲ್ಲಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಶಾಸಕ ಅರವಿಂದ ಬೆಲ್ಲದ ಅವರ ಆಸೆಗೆ ತಣ್ಣೀರೆರಚಿದ್ದು ಯಾರು ಪ್ರಹ್ಲಾದ್ ಜೋಶಿ?

ಮೊದಲ ಅಧಿಕಾರಾವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಮಾಡಿದ್ದ ಬಿಜೆಪಿ, 2ನೇ ಅವಧಿಯ ವರ್ಷ ಮುಗಿಯುವಷ್ಟರಲ್ಲಿ ಮೊದಲನೆಯವರನ್ನು ಪದಚ್ಯುತಿಗೊಳಿಸಿ 2ನೇ ಮುಖ್ಯಮಂತ್ರಿಯನ್ನು ಮಾಡಿತ್ತು. ಈಗ ಎರಡನೆಯವರನ್ನೂ ಇಳಿಸಿ ಮೂರನೆಯವರನ್ನು ಕೂರಿಸಲು ಹೊರಟಿರುವ ನೀವು ಕಾಂಗ್ರೆಸ್ ಭಿನ್ನಮತದ ಬಗ್ಗೆ ಮಾತನಾಡುವುದು ತಮಾಷೆಯಾಗಿದೆ ಪ್ರಹ್ಲಾದ್ ಜೋಶಿ ಎಂದಿದ್ದಾರೆ.

ಇದನ್ನೂ ಓದಿ:ಎಷ್ಟು ಬೇಗ ಮೋದಿ ಸರ್ಕಾರ ತೊಲಗುತ್ತದೋ, ಅಷ್ಟು ಬೇಗ ದೇಶಕ್ಕೆ ಒಳ್ಳೆಯದಾಗುತ್ತದೆ: ಸಿದ್ದರಾಮಯ್ಯ

ಸಾಧನೆಯ ಬಲದಿಂದ ಬಹುಮತಗಳಿಸಿ ಅಧಿಕಾರಕ್ಕೆ ಬರುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ. ನಿಮ್ಮದೇನಿದ್ದರೂ ಆಪರೇಷನ್ ಕಮಲದ ಹೊಲಸು ದಂಧೆ. ಎದುರಿಗಿದ್ದವರ ಊಟದೆಲೆಯ ಮೇಲಿನ ಸತ್ತ ನೊಣವನ್ನು ಹುಡುಕುವ ಚಾಳಿ ಬಿಡಿ, ನಿಮ್ಮ ಊಟದ ಎಲೆಯಲ್ಲಿ ಸತ್ತು ಬಿದ್ದಿರುವ ಆನೆಯನ್ನು ನೋಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಲೇವಡಿ ಮಾಡಿದ್ದಾರೆ.

ಚಿತ್ರಕಲಾ ಪರಿಷತ್

ಸಮಾರಂಭದಲ್ಲಿ ಸಿದ್ದರಾಮಯ್ಯ ಭಾಗಿ: ಮಾಜಿ ಉಪ ಮುಖ್ಯಮಂತ್ರಿ, ದಿ. ಎಂ.ಪಿ. ಪ್ರಕಾಶ್ ಅವರ 82ನೇ ಜನ್ಮದಿನ ಕಾರ್ಯಕ್ರಮವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಚಿತ್ರಕಲಾ ಪರಿಷತ್ತಿನಲ್ಲಿ ಇಂದು ಉದ್ಘಾಟಿಸಿದರು. ಬಿಹಾರದ ರಾಜ್ಯಸಭೆ ಸದಸ್ಯ ಅನಿಲ್ ಪ್ರಸಾದ್ ಹೆಗ್ಡೆ ಅವರನ್ನು ಗೌರವಿಸಿದರು. ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್, ರುದ್ರಾಂಬ ಪ್ರಕಾಶ್, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಸದಸ್ಯ ಡಾ.ಎಂ.ಪಿ. ನಾಡಗೌಡ, ರಂಗಕರ್ಮಿಗಳಾದ ನಾಗರಾಜಮೂರ್ತಿ, ಶ್ರೀನಿವಾಸ ಕಪ್ಪಣ್ಣ, ಮಾಜಿ ಸಚಿವ ಅಂಜನಮೂರ್ತಿ ಹಾಜರಿದ್ದರು.

ABOUT THE AUTHOR

...view details