ಬೆಂಗಳೂರು: ಧರ್ಮ ವಿಭಜನೆಗೆ ಸಿದ್ದರಾಮಯ್ಯ ಅವರು ಪಶ್ಚಾತ್ತಾಪವಲ್ಲ, ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.
ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾಗಿ ನೇಮಕವಾದ ಯಡಿಯೂರಪ್ಪರನ್ನು ಭೇಟಿಯಾಗಿ ಬಳಿಕ ಮಾತನಾಡಿದ ಅವರು, ಲಿಂಗಾಯತ-ವೀರಶೈವ ಪ್ರತ್ಯೇಕ ಧರ್ಮ ಮಾಡಲು ಹೋಗಿ ಒಡಕು ಮೂಡಿಸಿದ್ರು. ಈಗ ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಬೇಕು ಅಂತಾರೆ. ಹಿಂದೂ-ಮುಸ್ಲಿಂರ ನಡುವೆ ಒಡಕು ಮೂಡಿಸುವ ಕೆಲಸ ಮಾಡ್ತಿದ್ದಾರೆ. ಅವರದ್ದು ಬ್ರಿಟಿಷರ ಒಡೆದು ಆಳುವ ನೀತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಈಗ ಬಂದು ಲ್ಯಾಂಡ್ ಆಗಿದ್ದೇನೆ. ಅದರ ಬಗ್ಗೆ ಆಮೇಲೆ ಹೇಳ್ತೀನಿ. ಆದ್ರೆ ಯಾರೇ ಎಸೆಯಲಿ ಅದು ತಪ್ಪು, ಇದೇ ಮಾತನ್ನು ಯಡಿಯೂರಪ್ಪನವರು ಸಹ ಹೇಳಿದ್ದಾರೆ. ಸಿದ್ದರಾಮಯ್ಯನೋರು ಎಲ್ಲದರಲ್ಲೂ ರಾಜಕಾರಣ ಹುಡುಕ್ತಾರೆ. ಅದರಲ್ಲೂ ತುಷ್ಟೀಕರಣದ ರಾಜಕಾರಣ. ಈಗ ಬಿಜೆಪಿಯ ಭಯದಿಂದ ಮಠ, ಮಂದಿರಗಳಿಗೆ ತಿರಗುತ್ತಿದ್ದಾರೆ. ಹಿಂದೆ ಅವರು ಯಾವ ಮಠಗಳಿಗೂ ಹೋಗ್ತಿರಲಿಲ್ಲ ಎಂದು ಆರೋಪಿಸಿದರು.
ಮೋದಿಯವರು ಉತ್ತರಪ್ರದೇಶ ಎಲ್ಲಾ ಕಡೆ ಹೋಗಿದ್ದು, ಅವರ ಜನಪ್ರಿಯತೆ ನೋಡಿ ಸಿದ್ದರಾಮಯ್ಯ ಭಯಗೊಂಡಿದ್ದಾರೆ. ಸಿದ್ದರಾಮಯ್ಯನವರಿಗೂ ಹಿಂದುತ್ವ ಪರಂಪರೆಯ, ಸ್ವಾಮಿಗಳ ಬಗ್ಗೆ ಗೌರವವಿಲ್ಲ. ಆದ್ರೆ ಚುನಾವಣೆಯಲ್ಲಿ ಬಿಜೆಪಿಯ ಪ್ರಭಾವ ಇರೋದ್ರಿಂದ ಎಲ್ಲಾ ಕಡೆ ಹೋಗ್ತಿದ್ದಾರೆ. ಕರ್ನಾಟಕದಲ್ಲಿ ಮೋದಿ ಬಂದು ಪ್ರಚಾರ ಮಾಡಿದ್ರೆ ಏನಾಗುತ್ತೋ ಅನ್ನೂ ಭಯ ಅವರಿಗಿದೆ. ಹೀಗಾಗಿ ಪೂಜೆ ಪುನಸ್ಕಾರದ ಕೆಲಸಗಳ್ನನ್ನು ಮಾಡ್ತಿದ್ದಾರೆ. ಮೊದಲೇ ಅವರು ಟವೆಲ್ ಹಾಕೋ ಕೆಲಸ ಮಾಡ್ತಿದ್ದಾರೆ. ಆದರೆ ಆ ಟವೆಲ್ ಹಾಕೋ ಪ್ರಯತ್ನ ಆಗೋದಿಲ್ಲ ಎಂದು ತಿಳಿಸಿದರು.