ಬೆಂಗಳೂರು: ಕೊರೊನಾ ವೈರಸ್ ತಡೆಗಟ್ಟಲು ವೈದ್ಯರು, ನರ್ಸ್ ಹಾಗೂ ಇತರೆ ಆರೋಗ್ಯ ರಕ್ಷಣಾ ಕಾರ್ಯಕರ್ತರು ಮುಂಚೂಣಿಯಲ್ಲಿ ನಿಂತು ಹೋರಾಟ ಶ್ರಮವಹಿಸುತ್ತಿದ್ದಾರೆ. ಸೋಂಕಿತರ ಹಾಗೂ ಇತರೆ ರೋಗಿಗಳ ಚಿಕಿತ್ಸೆಗೆ ಬಳಸುವ ತ್ಯಾಜ್ಯವನ್ನು ಆಸ್ಪತ್ರೆಗಳು ಹೇಗೆ ವಿಲೇವಾರಿ ಮಾಡುತ್ತಿವೆ ಎಂಬ ಸಹಜ ಪ್ರಶ್ನೆ ಜನಸಾಮನ್ಯರಲ್ಲಿ ಮೂಡುತ್ತದೆ. ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಸುರಕ್ಷಿತ ಮತ್ತು ವೈಜ್ಞಾನಿಕ ವಿಧಾನದಡಿ ವಿಲೇವಾರಿ ಮಾಡುವುದರ ವಿವರಣೆ ಇಲ್ಲಿದೆ.
ಕೊರೊನಾದಿಂದ ಎಷ್ಟು ಆತಂಕ ಇದಿಯೋ ಮಾಸ್ಕ್, ಪಿಪಿಇ ಕಿಟ್‌ಗಳ ತ್ಯಾಜ್ಯದಿಂದಲೂ ಅಷ್ಟೇ ಆತಂಕವಿದೆ. ಜನ ಸಾಮಾನ್ಯರು ಮಾಸ್ಕ್‌ಗಳನ್ನು ಧರಿಸಿ ಸುರಕ್ಷಿತವಾಗಿದ್ದಾರೆ. ನಾವು ಪಿಪಿಇ ಕಿಟ್ ಧರಿಸಿ ಕೊರೊನಾ ವಿರುದ್ಧ ಹೋರಾಡುತ್ತೇವೆ. ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಧರಿಸಿರುವ ವೇಳೆ ಎಸಿ ಬಳಸುವಂತಿಲ್ಲ. ಜೊತೆಗೆ ಒಮ್ಮೆ ಧರಿಸಿದರೆ 6-8 ಗಂಟೆ ತನಕ ತೆಗೆಯುವಂತಿಲ್ಲ. ಇದು ಅನಿವಾರ್ಯ ಕೂಡ ಎನ್ನುತ್ತಾರೆ ರಾಧಾಕೃಷ್ಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರಾದ ಡಾ.ವಿದ್ಯಾ ಭಟ್.
ಪಿಇ ಕಿಟ್ ಧರಿಸಿ ಚಿಕಿತ್ಸೆ ನೀಡುವ ವೇಳೆ ಹಸಿವಾದರೆ ಆಹಾರ ಸೇವಿಸುವಂತಿಲ್ಲ. ಜೊತೆಗೆ ಹೆಚ್ಚು ನೀರು ಕುಡಿಯುವಂತಿಲ್ಲ. ಒಂದು ವೇಳೆ ನೀರು ಕುಡಿದರೆ ಶೌಚಾಲಯಕ್ಕೆ ಹೋಗಬೇಕಾಗುತ್ತೆ ಅನ್ನೋ ಕಾರಣಕ್ಕೆ ಅದೆಷ್ಟೋ ಬಾರಿ ಹಲವು ಡೈಪರ್ ಬಳಸಿದ್ದು ಇದೆ ಎಂದು ಕೊರೊನಾ ಚಿಕಿತ್ಸೆಯ ಕಷ್ಟದ ಸನ್ನಿವೇಶವನ್ನು ವಿವರಿಸುತ್ತಾರೆ.
ಇಷ್ಟೆಲ್ಲ ಕಷ್ಟಗಳ ನಡುವೆ ಅದನ್ನು ಬಳಸಿದ ನಂತರ ವಿಲೇವಾರಿ ಮಾಡುವುದು ದೊಡ್ಡ ಸಾಹಸದ ಕೆಲಸ. ಯಾಕೆಂದರೆ ಇದರಿಂದ ಇತರರಿಗೆ ಸೋಂಕು ಸುಲಭವಾಗಿ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಾಗುತ್ತೆ. ಕೊರೊನಾ ವಾರಿಯರ್ಸ್ ಬಳಸಿದ ನಂತರದ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕವಾಗಿ ಪೌರಕಾರ್ಮಿಕರನ್ನು ನಿಯೋಜಿಸಬೇಕು. ಈ ಕಾರ್ಮಿಕರು ಪಿಪಿಇ ಕಿಟ್ ಧರಿಸುವುದು ಸೇರಿದಂತೆ ಸುರಕ್ಷತೆ ಕ್ರಮಗಳನ್ನು ಪಾಲಿಸಬೇಕು. ರಾಜ್ಯದ ಆಸ್ಪತ್ರೆಗಳಲ್ಲಿ ದಾಖಲಾದ ಕೊರೊನಾ ಸೋಂಕಿತರಿಂದ ಉತ್ಪತ್ತಿಯಾಗುತ್ತಿರುವ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊಸ ನಿಯಮ ರೂಪಿಸಿದೆ.