ಬೆಂಗಳೂರು :ಯಕೃತ್‌ನಲ್ಲಿಯೇ ಉಳಿದ ಟ್ಯೂಬ್‌ನಿಂದ ಕಲ್ಲು ಉತ್ಪತ್ತಿಯಾಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದ 31 ವರ್ಷದ ಮಹಿಳೆಗೆ ಫೋರ್ಟಿಸ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ "ಪವರ್ ಸ್ಪೈರಲ್ ಎಂಡೋಸ್ಕೋಪಿ" ನಡೆಸಿದ್ದಾರೆ. ಇವರು ಈ ಶಸ್ತ್ರಚಿಕಿತ್ಸೆ ಪಡೆದ ಭಾರತದ 3ನೇ ಮಹಿಳೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಫೊರ್ಟಿಸ್ ಆಸ್ಪತ್ರೆ ಗ್ಯಾಸ್ಟ್ರೋಎಂಟರಾಲಜಿ ನಿರ್ದೇಶಕ ಡಾ. ರವೀಂದ್ರ, ಯಕೃತ್‌ನ ಪಿತ್ತರಸ ನಾಳಗಳ ಚೀಲವನ್ನು ಹಿಗ್ಗಿಸುತ್ತಾ ಬೆಳೆಯುವಿಕೆಯೇ ಕೊಲೆಡೋಕಲ್ ಸಿಸ್ಟ್ ಎನ್ನಲಾಗುತ್ತದೆ. ಕೊಲೆಡೋಕಲ್ ಸಿಸ್ಟ್ ಅತ್ಯಂತ ಅಪರೂಪದ ಕಾಯಿಲೆಯಾಗಿದೆ. ಇದು 2 ದಶಲಕ್ಷ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ ಎಂದರು.
ಕರ್ನಾಟಕದ ಮೂಲದವರೇ ಆದ 31 ವರ್ಷದ ಮಹಿಳೆಗೆ ಯಕೃತ್ ಸಮಸ್ಯೆಯಿಂದಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರಿಗೆ ಕೊಲೆಡೋಕಲ್ ಸಿಸ್ಟ್ ಇರುವುದು ತಿಳಿದು ಬಂದಿದೆ. ಆದರೆ, ಅಲ್ಲಿ ಯಕೃತ್ ಬೈಪಾಸ್ ಸರ್ಜರಿ ನಡೆಸಿ, ಒಳಗಿನಿಂದಲೇ ಪಿಟಿಬಿಡಿ ಟ್ಯೂಬ್ ಹಾಕಲಾಗಿತ್ತು. ಇದನ್ನು 3-4 ತಿಂಗಳೊಳಗೆ ತೆಗೆಸಬೇಕು. ಆದರೆ, ಆ ಮಹಿಳೆ ಟ್ಯೂಬ್ ತೆಗೆಸದೇ ಇದಿದ್ದರಿಂದ ಯಕೃತ್ ಬಳಿ ಕಲ್ಲು ಉತ್ಪತ್ತಿಯಾಗಿದೆ.
ಇದು ಜೀವಕ್ಕೆ ಅತ್ಯಂತ ಅಪಾಯಕಾರಿ. ಜೊತೆಗೆ, ಟ್ಯೂಬ್‌ನಲ್ಲಿಯೂ ಕಲ್ಲು ಶೇಖರಣೆ ಆಗ ತೊಡಗಿತು. ಇದನ್ನು "ಪವರ್ ಸ್ಪೈರಲ್ ಎಂಡೋಸ್ಕೋಪಿ" ವಿಧಾನದ ಮೂಲಕವೇ ತೆಗೆಯಲು ಸಾಧ್ಯ. ಸತತ ಎರಡೂವರೆ ತಾಸು ನಡೆಸಿದ ಶಸ್ತ್ರಚಿಕಿತ್ಸೆಯ ಬಳಿಕ ಕಲ್ಲುಗಳನ್ನು ಹೊರತೆಗೆಯಲಾಯಿತು. ರೋಗಿಯು ಈಗ ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಅತ್ಯಾಧುನಿಕ ತಂತ್ರಜ್ಞಾನ ದೇಶದಲ್ಲಿ ಕೇವಲ 17 ಕಡೆ ಲಭ್ಯವಿದೆ. ಅದರಲ್ಲೂ ಈ ಪ್ರಕ್ರಿಯೆ ಮೂಲಕ ಶಸ್ತ್ರಚಿಕಿತ್ಸೆ ನಡೆಸುವುದು ಅತ್ಯಂತ ಸವಾಲಿನ ಕೆಲಸ. ನಮ್ಮ ತಂಡ ಜಾಗರೂಕತೆಯಿಂದ ಈ ಚಿಕಿತ್ಸೆ ನಡೆಸಿದೆ. ದೇಶದಲ್ಲಿಯೇ ಇದು ಮೂರನೇ ಪ್ರಕರಣ ಎನಿಸಿಕೊಂಡಿದೆ ಎಂದಿದ್ದಾರೆ.