ಬೆಂಗಳೂರು: ಬಿಜೆಪಿ-ಜೆಡಿಎಸ್ 20-20 ಸರ್ಕಾರದ ಅವಧಿಯಲ್ಲಿನ ಅಧಿಕಾರ ಹಸ್ತಾಂತರ ವಿಚಾರ ಸದನದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ವಿಷಯ ಪ್ರಸ್ತಾಪಿಸಿದ ಹೆಚ್.ಡಿ.ಕುಮಾರಸ್ವಾಮಿ, ಅಧಿಕಾರ ಹಸ್ತಾಂತರ ಮಾಡಲು ನಾನು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೆ. ಯಾರಿಂದ ಅನ್ಯಾಯ ಆಯಿತು ಎಂದು ಸ್ವತಃ ಯಡಿಯೂರಪ್ಪ ಹೇಳಿದ್ದಾರೆ ಎಂದು ಹೇಳಿದರು.
ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಅಗ್ರಿಮೆಂಟ್ ದೆಹಲಿಯಿಂದ ಬಂದಿತ್ತು. ಅಗ್ರಿಮೆಂಟ್ಗೆ ಸಹಿ ಹಾಕಲು ಯಡಿಯೂರಪ್ಪ ಒಪ್ಪಿರಲಿಲ್ಲ. ಈ ಕಾರಣಕ್ಕಾಗಿ ನಾನು ಬೆಂಬಲ ಕೊಡಲಿಲ್ಲ. ಆದರೆ ನಾನು ಬಲಿಪಶುವಾದೆ. ಯಡಿಯೂರಪ್ಪ ಹೆಮ್ಮರವಾಗಿ ಬೆಳೆಯುತ್ತಾರೆ ಎಂದು ನಮ್ಮವರೇ ಕಾಲೆಳೆದರು. ಅವರು ಯಾರು ಎಂದು ನನಗೆ ಗೊತ್ತಿದೆ ಎಂದು ಬಿಎಸ್ವೈ ಅವರೇ ಹೇಳಿದ್ದರು. ಇದಕ್ಕೆ ನಾನು ಅಧಿಕಾರ ಹಸ್ತಾಂತರ ಮಾಡಲು ಆಗಿರಲಿಲ್ಲ ಎಂದು ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಮಾಧುಸ್ವಾಮಿ, ಹಾಗಾದರೆ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಏಕೆ ಬೆಂಬಲ ಕೊಟ್ಟಿಲ್ಲ? ಪಾಪ ಮಾಡಿ ಮಾಡಿಲ್ಲ ಮಾಡಿಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸಿದರು. ಈ ವೇಳೆ ಮಾತು ಮುಂದುವರಿಸಿದ ಕುಮಾರಸ್ವಾಮಿ, ಯಡಿಯೂರಪ್ಪ ಅವರು ಮಾಡಿದ ಭಾಷಣದ ಕ್ಯಾಸೆಟ್ ಸಹ ನನ್ನ ಬಳಿ ಇದೆ. ಕುಮಾರಸ್ವಾಮಿ ನನಗೆ ಅಧಿಕಾರ ಬಿಟ್ಟುಕೊಟ್ಟರು. ಆದರೆ ನಮ್ಮ ಪಕ್ಷದ ನಾಯಕರು ಚೂರಿ ಹಾಕಿದ್ರು ಅಂತ ಯಡಿಯೂರಪ್ಪ ಭಾಷಣ ಮಾಡಿದ್ದಾರೆ. ಅಧಿಕಾರ ಹಸ್ತಾಂತರ ಕುರಿತು ಕೇಂದ್ರ ನಾಯಕರು ಬಂದು ಮಾತುಕತೆ ಮಾಡಿರಲಿಲ್ಲ. ನಾನು ಅಧಿಕಾರ ಕೊಡಲು ಸಿದ್ಧ ಇದ್ದೆ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಶಾಸಕರಿಂದ ಬಾವಿಗಿಳಿದು ಪ್ರತಿಭಟನೆ:ಸಿದ್ಧಾಂತದ ಬಗ್ಗೆ ನೀವು ಬಹಳ ಮಾತಾಡ್ತೀರಿ. ಕೆಜೆಪಿ ಕಟ್ಟಿದಾಗ ಯಡಿಯೂರಪ್ಪ ಏನು ಮಾತನಾಡಿದ್ರು. ಬಿಜೆಪಿ ನಾಯಕರು ಬೆನ್ನಿಗೆ ಚೂರಿ ಹಾಕಿದ್ರು ಅಂತ ಹೇಳಿರಲಿಲ್ವಾ? ಎಂದ ಕುಮಾರಸ್ವಾಮಿ ಮಾತಿಗೆ ಮಾಧುಸ್ವಾಮಿ ಮತ್ತು ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ನಿಮ್ಮ ಕೇಂದ್ರ ಮಂತ್ರಿ ಬಂದು ಏನು ಮಾತಾಡ್ತಾರೆ. ದೇವೇಗೌಡರ ಕುಟುಂಬಕ್ಕೆ ಎಟಿಎಮ್ ಅಂತ ಹೇಳ್ತಾರೆ. ಯಾವ ಆಧಾರದ ಮೇಲೆ ನೀವು ಆರೋಪ ಮಾಡ್ತೀರಿ. ಹೇಗೆ ಮಾತಾಡ್ತೀರಿ ನೀವು ಎಂದು ಕುಮಾರಸ್ವಾಮಿ ಕೂಗಾಡಿದರು. ಈ ವೇಳೆ ಸದನದಲ್ಲಿ ಬಿಜೆಪಿ ಮತ್ತು ಕುಮಾರಸ್ವಾಮಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ನೀವು ಬಾಯಿಗೆ ಬಂದಂತೆ ಬೊಗಳಿಕೊಂಡು ಬರ್ತಿಲ್ವಾ ಎಂದು ಮಾಧುಸ್ವಾಮಿ ಕಿಡಿ ಕಾರಿದರು. ಸಚಿವ ಮಾಧುಸ್ವಾಮಿ ಮಾತಿಗೆ ವಿರೋಧ ವ್ಯಕ್ತಪಡಿಸಿದ ಜೆಡಿಎಸ್ ಶಾಸಕರು, ಸದನದ ಬಾವಿಗೆ ಬಂದು ಪ್ರತಿಭಟನೆ ನಡೆಸಿದರು.