ಬೆಂಗಳೂರು:ಕಾಂಗ್ರೆಸ್‌ಗೆ "ಪವರ್ ಕ್ಯಾನ್ಸರ್" ಶುರುವಾಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಬ್ಬರು ಒಬ್ಬರಿಗಿಂತ ಇನ್ನೊಬ್ಬರು ಪವರ್‌ಫುಲ್ ಎಂದು ತೋರಿಸಿಕೊಳ್ಳುವುದರಲ್ಲಿ ಕಾಲ ವ್ಯಯಿಸುತ್ತಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಅಭ್ಯರ್ಥಿ ನಾನೇ ಎಂಬ ಸಂದೇಶ ರವಾನಿಸುವುದರಲ್ಲೂ ತಮ್ಮ ಶಕ್ತಿ ಪ್ರದರ್ಶಿಸುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಬಿಜೆಪಿ ಸರಣಿ ಟ್ವೀಟ್:ಕಾಂಗ್ರೆಸ್ ಕಿತ್ತಾಟದ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇವರಿಬ್ಬರ ಜಗಳದಲ್ಲಿ ಡಾ.ಜಿ ಪರಮೇಶ್ವರ್ ಮತ್ತು ಖರ್ಗೆ ನಡುವೆ ಪೈಪೋಟಿ ಶುರುವಾಗಿದೆ. ಎಲ್ಲಿ ಖರ್ಗೆ ಬಂದು ಬಿಟ್ಟಾರೋ ಎಂದು ಪರಮೇಶ್ವರ್ ಮೆಲ್ಲಗೆ ಕುರ್ಚಿಗೆ ಟವೆಲ್ ಹಾಸಿ ಕುಳಿತಿದ್ದಾರೆ. ಈ ವಿಷಯ ತಿಳಿದಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಹೊಸ ಖೆಡ್ಡಾವನ್ನು ತೋಡುತ್ತಿದ್ದಾರೆ ಎಂದು ಟೀಕಿಸಿದೆ.
ಡಿಕೆಶಿ vs ಸಿದ್ದರಾಮಯ್ಯ:ಎಲ್ಲಿ ತನಗಿಂತ ಬೆಳೆದುಬಿಡುತ್ತಾರೋ ಎಂದು ಡಿಕೆ ಶಿವಕುಮಾರ್ ಅಧ್ಯಕ್ಷರಾಗೋದನ್ನು ತಪ್ಪಿಸಲು ಸಿದ್ದರಾಮಯ್ಯ ಹಿಂದೆ ಆಡಿದ ಆಟಗಳು ಒಂದೆರಡಲ್ಲ. 17 ಜನ ನಾಯಕರನ್ನು ದಿಲ್ಲಿಗೆ ಕರೆದೊಯ್ದು, ಡಿಕೆಶಿಯನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬೇಡಿ ಎಂದು ಹಿಂದಿನಿಂದ ಬಾಣ ಬಿಟ್ಟಿದ್ದನ್ನು ಶಿವಕುಮಾರ್ ಇನ್ನೂ ಮರೆತಿಲ್ಲ.