ಬೆಂಗಳೂರು:ಕೋಳಿ ಸಾಕಾಣಿಕೆ ಮಾಡುವುದು ಕೃಷಿ ಚಟುವಟಿಕೆಯಾಗಿದ್ದು, ಇದನ್ನು ವಾಣಿಜ್ಯ ಚಟುವಟಿಕೆ ಎಂಬುದಾಗಿ ಪರಿಗಣಿಸಿ ಕರ್ನಾಟಕ ಗ್ರಾಮ ಸ್ವರಾಜ್ ಕಾಯ್ದೆಯಡಿ ಯಾವುದೇ ರೀತಿಯ ತೆರಿಗೆ ವಿಧಿಸಲು ಗ್ರಾಮ ಪಂಚಾಯ್ತಿಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ತನ್ನ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ತೆರಿಗೆ ವಿಧಿಸಿದ್ದ ಗ್ರಾಮ ಪಂಚಾಯ್ತಿ ಕ್ರಮ ಪ್ರಶ್ನಿಸಿ ಬೆಂಗಳೂರು ಉತ್ತರ ತಾಲೂಕಿನ ಸೊಂಡೆಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿವಾಸಿ ಕೆ. ನರಸಿಂಹಮೂರ್ತಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯ ಪೀಠವು ಈ ಆದೇಶ ನೀಡಿದೆ.
ಜೊತೆಗೆ, ಕೋಳಿ ಸಾಕಾಣಿಕೆ ಮಾಡುವುದು ಕೃಷಿ ಚಟುವಟಿಕೆಯಾಗಿದ್ದು, ಇದಕ್ಕಾಗಿ ಕಟ್ಟಡ ನಿರ್ಮಾಣ ಸಲುವಾಗಿ ಕೃಷಿ ಭೂಮಿಯನ್ನು ವಾಣಿಜ್ಯ ಭೂಮಿಯನ್ನಾಗಿ ಪರಿವರ್ತನೆ ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಇ. ಭಾಸ್ಕರ್ ರಾವ್ ಪ್ರಕರಣದಲ್ಲಿ ಹೈಕೋರ್ಟ್ ತಿಳಿಸಿದೆ. ಕೋಳಿ ಸಾಕಾಣಿಕೆ ಕೇಂದ್ರಕ್ಕಾಗಿ ನಿರ್ಮಾಣ ಮಾಡುವ ಕಟ್ಟಡವನ್ನು ಕನಾರ್ಟಕ ಗ್ರಾಮ ಸ್ವರಾಜ್ ಕಾಯ್ದೆ-4ರ (ಎ)(2) ಅಡಿಯಲ್ಲಿ ವಾಣಿಜ್ಯ ಕಟ್ಟಡವನ್ನಾಗಿ ಪರಿಗಣಿಸಿ ತೆರಿಗೆ ವಿಧಿಸಲು ಅವಕಾಶವಿಲ್ಲ. ಕೋಳಿ ಸಾಕಾಣಿಕೆ ಕೇಂದ್ರವಿರುವ ಭೂಮಿ ಕೃಷಿ ಭೂಮಿಯಾಗಿಯೇ ಮುಂದುವರೆಯಲಿದ್ದು, ಅದನ್ನು ವಾಣಿಜ್ಯ ಭೂಮಿಯನ್ನಾಗಿ ಪರಿಗಣಿಸಿ ತೆರಿಗೆ ವಿಧಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ. ಅರ್ಜಿದಾರರಿಂದ ತೆರಿಗೆ ರೂಪದಲ್ಲಿ ಈಗಾಗಲೇ ಸಂಗ್ರಹಿಸಿರುವ 59,551 ರೂ.ಗಳನ್ನು ಹಿಂದಿರುಗಿಸಬೇಕು ಎಂದೂ ನಿರ್ದೇಶನ ನೀಡಿದೆ. ಇಷ್ಟೇ ಅಲ್ಲ, ಗ್ರಾಮ ಪಂಚಾಯ್ತಿ ಜಾರಿ ಮಾಡಿದ್ದ ನೊಟೀಸ್ಅನ್ನು ರದ್ದುಪಡಿಸಿ ಆದೇಶಿಸಿದೆ.