ಬೆಂಗಳೂರು:ರಾಜಧಾನಿಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ರಸ್ತೆಗುಂಡಿಗಳ ಸಂಖ್ಯೆಯೂ ದ್ವಿಗುಣವಾಗಿದೆ. ವಾಹನ ಸವಾರರು ತೊಂದರೆ ಎದುರಿಸುತ್ತಿದ್ದಾರೆ.
ನಾಗರಬಾವಿ ಮುಖ್ಯರಸ್ತೆ, ಆರ್ ಟಿ ನಗರ, ಶಾಂತಿನಗರ, ವಿಲ್ಸನ್ ಗಾರ್ಡನ್, ಮಡಿವಾಳ, ಗುರಪ್ಪನಪಾಳ್ಯ, ತಿಲಕನಗರ ಹಾಗು ಹೆಬ್ಬಾಳ ಸೇರಿದಂತೆ ವಿವಿಧೆಡೆ ಮಳೆಯಿಂದ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ನೀರು ತುಂಬಿ ಹರಿಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕಳೆದ ತಿಂಗಳು ಬಿಬಿಎಂಪಿ ನಗರವನ್ನು ಗುಂಡಿ ಮುಕ್ತ ಮಾಡುವ ಗುರಿ ಹಾಕಿಕೊಂಡಿತ್ತು. ನೂರಕ್ಕೆ ನೂರರಷ್ಟು ಈ ಗುರಿ ಮುಟ್ಟುವಲ್ಲಿ ವಿಫಲವಾಗಿದೆ. ಮೇ ತಿಂಗಳಿನಿಂದ ಈವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂದಾಜು 31,211 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ. ಈವರೆಗೆ 24,957 ಗುಂಡಿಗಳನ್ನು ಮುಚ್ಚಲಾಗಿದೆ. 6,254 ಗುಂಡಿಗಳು ಮುಚ್ಚಲು ಬಾಕಿ ಉಳಿದಿವೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.