ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಜಾಮೀನು ಕೋರಿ ಎಂಟು ಆರೋಪಿಗಳು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆ ಪೂರ್ಣಗೊಳಿಸಿ, ಆರೋಪಿಗಳ ಅರ್ಜಿಯನ್ನು ಕಾಯ್ದಿರಿಸಿದೆ.
ಈ ಕುರಿತು ಜಾಮೀನು ಕೋರಿ ಮೌಲ್ವಿ ಮೊಹಮದ್ ಹನೀಫ್ ಅಫ್ಸರ್ ಅಜೀಜ್, ರವಿ ನರಾಳೆ, ಸನಾವುಲ್ಲಾ, ಸೈಯದ್ ಮುಜಾಹಿದ್, ಮೊಹಮದ್ ಅಕ್ಬರ್ ಶರೀಫ್, ಎ.ನಿಜಾಮುದ್ದೀನ್ ಎ.ಅಫ್ಸರ್ ಪಾಷ ಮತ್ತು ದಾದಾಪೀರ್ ಅಸಾದುಲ್ಲಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರಿದ್ದ ಏಕಸದಸ್ಯ ಪೀಠದಲ್ಲಿ ಗುರುವಾರ ನಡೆಯಿತು.
ಆರೋಪಿಗಳು ಐಎಂಎ ಪ್ರಕರಣದ ಪ್ರಮುಖ ಆರೋಪಿ ಜೊತೆ ಸೇರಿಕೊಂಡು ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಜಾಮೀನು ನೀಡಬಾರದು ಎಂದು ನ್ಯಾಯಾಲಯದಲ್ಲಿ ಸಿಬಿಐ ಪರ ವಕೀಲ ಪಿ. ಪ್ರಸನ್ನ ಕುಮಾರ್ ಮನವಿ ಮಾಡಿದರು.
ಪ್ರಕರಣದಲ್ಲಿ ಪ್ರಮುಖ ಆರೋಪಿ ಮನ್ಸೂರ್ ಆಗಿದ್ದಾರೆ. ಹೀಗಾಗಿ ಇದರಲ್ಲಿ ಅರ್ಜಿ ಹಾಕಿದ ಆರೋಪಿಗಳ ಪಾತ್ರ ಮುಖ್ಯವಲ್ಲ ಎಂದು ಆರೋಪಿಗಳ ಪರ ಹಿರಿಯ ವಕೀಲ ಬಿ.ವಿ. ಆಚಾರ್ಯ ವಾದಿ ಮಂಡಿಸಿದರು.
ಅರ್ಜಿ ವಿಚಾರಣೆ ವೇಳೆ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಕೋರಿದ ಕಾರಣ ವಿಚಾರಣೆಯನ್ನು ಮುಂದೂಡಲಾಗಿದೆ.