ಬೆಂಗಳೂರು: ಅರಮನೆ ಮೈದಾನದಲ್ಲಿ ಈ ತಿಂಗಳ 18 ರಂದು ನಡೆಸಲು ಉದ್ದೇಶಿಸಿದ್ದ ಜೆಡಿಎಸ್ ಮಹಿಳಾ ಸಮಾವೇಶವನ್ನು ಮುಂದೂಡಲಾಗಿದೆ ಎಂದು ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲೀಲಾದೇವಿ ಆರ್. ಪ್ರಸಾದ್ ತಿಳಿಸಿದ್ದಾರೆ.
ಸಮಾವೇಶ ಸಿದ್ಧತೆ ಕುರಿತಂತೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಅಧ್ಯಕ್ಷತೆಯಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲೀಲಾದೇವಿ ಆರ್. ಪ್ರಸಾದ್ ತಿಳಿಸಿದ್ದಾರೆ.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಜನರು ತೀವ್ರ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಮಹಿಳಾ ಸಮಾವೇಶವನ್ನು ಮುಂದೂಡಲು ತೀರ್ಮಾನಿಸಲಾಗಿದೆ. ಪ್ರವಾಹ ಸಂಪೂರ್ಣ ನಿಂತ ನಂತರ ಸಮಾವೇಶ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಜೆಡಿಎಸ್ ಮಹಿಳಾ ಸಮಾವೇಶ ಕುರಿತಂತೆ ನಡೆದ ಸಭೆ ಕಷ್ಟದಲ್ಲಿರುವವರಿಗೆ ನೆರವಾಗಲು ಜೆಡಿಎಸ್ ಪಕ್ಷದ ವತಿಯಿಂದ ನಿಧಿ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡರ ಬಳಿ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಪ್ರವಾಹದಲ್ಲಿ ಸಿಲುಕಿರುವ ಸಂತ್ರಸ್ತರಿಗೆ ಸಹಾಯ ಮಾಡಲು ನಮ್ಮ ಪಕ್ಷ ಮುಂದಾಗಿದ್ದು, ಈಗಾಗಲೇ ಪಕ್ಷದ ವತಿಯಿಂದ ನೆರವು ನೀಡಲಾಗಿದೆ. ಮಹಿಳಾ ವಿಭಾಗದಿಂದಲೂ ತಂಡಗಳನ್ನು ಮಾಡಿಕೊಂಡು ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಇದಕ್ಕೂ ಮುನ್ನ ಸಭೆಯಲ್ಲಿ ಪಕ್ಷ ಸಂಘಟನೆ ಕುರಿತಂತೆ ಜಿಲ್ಲಾವಾರು ಮಹಿಳಾ ಘಟಕದ ಸದಸ್ಯರಿಂದ ಅಭಿಪ್ರಾಯವನ್ನು ದೇವೇಗೌಡರು ಆಲಿಸಿದರು.