ಬೆಂಗಳೂರು: ನಗರದ ಪುರಭವನದಲ್ಲಿ ನಡೆಯಬೇಕಿದ್ದ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆಯಾಗಿದ್ದು, ಚುನಾವಣಾ ಸಮಯ ನಿಗದಿಯಂತೆ ಸಭೆ ನಡೆಸಲಾಗಿದೆ.
ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ ಕೋರಮ್ ಇಲ್ಲದೆ ನಾಮಪತ್ರ ಸಲ್ಲಿಸದ ಹಿನ್ನೆಲೆ ಮುಂದೂಡಲಾಗಿದೆ. ಮುಂದಿನ ದಿನಾಂಕ ಪ್ರಕಟಗೊಳಿಸಲಾಗುತ್ತದೆ ಎಂದು ಪ್ರಾದೇಶಿಕ ಚುನಾವಣಾ ಆಯುಕ್ತ ಹರ್ಷಗುಪ್ತ ತಿಳಿಸಿದರು. ಡಿಸೆಂಬರ್ ಮೂರನೇ ತಾರೀಖಿಗೆ ಸ್ಥಾಯಿ ಸಮಿತಿಗಳ ಒಂದು ವರ್ಷದ ಅಧಿಕಾರಾವಧಿ ಮುಕ್ತಾಯವಾಗಿರುವುದರಿಂದ ಪ್ರಾದೇಶಿಕ ಚುನಾವಣಾ ಆಯುಕ್ತ ಹರ್ಷಗುಪ್ತ ಚುನಾವಣೆ ಅಧಿಸೂಚನೆ ಹೊರಡಿಸಿದ್ದರು. ಆದರೆ, ಉಪಚುನಾವಣೆ ನೆಪ ಹೇಳಿ ಮೂರು ಪಕ್ಷಗಳ ಪಾಲಿಕೆ ಸದಸ್ಯರು ಚುನಾವಣೆಗೆ ಗೈರಾಗಿದ್ದರು.
ಮೇಯರ್ ಗೌತಮ್ ಕುಮಾರ್ ಮಾತನಾಡಿ, ಸ್ಥಾಯಿ ಸಮಿತಿ ಚುನಾವಣೆ ಮುಂದೂಡಲಾಗಿದೆ. ಯಾರು ನಾಮೀನೇಷನ್ ಫೈಲ್ ಮಾಡಿಲ್ಲ , ಮಾಡೋದಕ್ಕೆ ಯಾರು ಬಂದಿಲ್ಲ. ಪ್ರಾದೇಶಿಕ ಆಯುಕ್ತರು ಮತ್ತೆ ಯಾವಾಗ ಚುನಾವಣೆಗೆ ಡೇಟ್ ಫಿಕ್ಸ್ ಮಾಡ್ತಾರೋ ನೋಡೋಣ. ಈ ಚುನಾವಣೆ ಮಾಡೋದಕ್ಕೆ 6 ಲಕ್ಷ ಖರ್ಚಾಗಿದೆ ಅಂತಾ ಹೇಳ್ತಾ ಇದಾರೆ, ಸಾರ್ವಜನಿಕರ ತೆರಿಗೆ ಹಣ ಪೋಲಾಗಿದೆ ಆದರೆ, ಇದಕ್ಕೆ ಆಯುಕ್ತರೇ ಉತ್ತರಿಸಬೇಕು ಎಂದರು.
ಇನ್ನು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಮಾತನಾಡಿ, ಉಪ ಚುನಾವಣೆ ಹಿನ್ನೆಲೆ ಬಿಬಿಎಂಪಿ ಸದಸ್ಯರು ಸ್ಥಾಯಿ ಸಮಿತಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ. ಚುನಾವಣೆಗೆ ಮತ್ತೊಮ್ಮೆ ದಿನಾಂಕ ನಿಗದಿ ಮಾಡಿ ಎಂದು ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡ್ತೇವೆ. ಯಾವ ಕಾರ್ಪೋರೇಟರ್ಸ್ಗೂ ಗೈರಾಗುವಂತೆ ಒತ್ತಡ ಹೇರಿಲ್ಲ. ಉಪ ಚುನಾವಣೆ ಸಂಬಂಧ ಗೈರಾಗಿದ್ದಾರೆ ಎಂದರು.