ಬೆಂಗಳೂರು : ನಾಲ್ಕು ದಿನ ನಡೆದ ಚಳಿಗಾಲದ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಡಿ.7ರಿಂದ ಪ್ರಾರಂಭವಾದ ಚಳಿಗಾಲದ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಸ್ಪೀಕರ್ ಕಾಗೇರಿ ಅವರು, ಕಲಾಪದ ಸಂಕ್ಷಿಪ್ತ ವರದಿ ನೀಡಿದರು.
ನಾಲ್ಕು ದಿನಗಳ ವಿಧಾನಸಭೆ ಅಧಿವೇಶನದಲ್ಲಿ ಒಟ್ಟು 20 ಗಂಟೆಗಳ ಕಾಲ ಕಾರ್ಯಕಲಾಪ ನಡೆಯಿತು. ಈ ಅವಧಿಯಲ್ಲಿ ಸದನವೂ ಶೇ. 90ಕ್ಕಿಂತ ಹೆಚ್ಚಿನ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಕರ್ನಾಟಕ ವಿಧಾನಮಂಡಲ, ವಿಧಾನಸಭೆಯ ಸಮಿತಿಗಳ ಹಾಗೂ ಜಂಟಿ ಪರಿಶೀಲನಾ ಸಮಿತಿಯ ವರದಿಯು ಸೇರಿದಂತೆ ಒಟ್ಟು 14 ವರದಿ, 9 ಅಧಿಸೂಚನೆಗಳು, 4 ಅಧ್ಯಾದೇಶಗಳು, 46 ವಾರ್ಷಿಕ ವರದಿಗಳು, 18 ಲೆಕ್ಕ ಪರಿಶೋಧನಾ ವರದಿ, 2 ಅನುಪಾಲನಾ ವರದಿ ಹಾಗೂ 2 ತಪಾಸಣಾ ವರದಿಗಳನ್ನು ಮಂಡಿಸಲಾಗಿದೆ.
3 ಅರ್ಜಿಗಳನ್ನು ಒಪ್ಪಿಸಲಾಗಿದೆ. 2020-21ನೇ ಸಾಲಿನ ಪೂರಕ ಅಂದಾಜುಗಳ 2ನೇ ಕಂತಿನ ಬೇಡಿಕೆಗಳನ್ನು ಮತಕ್ಕೆ ಹಾಕಿ ಅಂಗೀಕರಿಸಲಾಗಿದೆ. ವಿಧಾನ ಪರಿಷತ್ತಿನಿಂದ ತಿದ್ದುಪಡಿಗಳೊಂದಿಗೆ ಅಂಗೀಕಾರವಾದ ರೂಪದಲ್ಲಿದ್ದ ಎರಡು ವಿಧೇಯಕಗಳು ಹಾಗೂ ಧನ ವಿನಿಯೋಗವೂ ಸೇರಿದಂತೆ ಒಟ್ಟು 8 ವಿಧೇಯಕಗಳನ್ನು ಅಂಗೀಕರಿಸಲಾಯಿತು.
ಓದಿ:ಲಂಚ ಸ್ವೀಕಾರ ಸಾಬೀತು.. ಕಸ್ಟಮ್ಸ್ ಅಧಿಕಾರಿಗೆ 4 ವರ್ಷ ಜೈಲು ಶಿಕ್ಷೆ
ನಿಯಮ 60ರ ಅಡಿಯಲ್ಲಿ ನೀಡಿದ್ದ 12 ನಿಲುವಳಿ ಸೂಚನೆಗಳನ್ನು ಪರಿವರ್ತಿಸಿರುವುದನ್ನು ಸೇರಿಸಿ 9 ಸೂಚನೆಗಳನ್ನು ನಿಯಮ 69ರ ಅಡಿಯಲ್ಲಿ ಸ್ವೀಕರಿಸಿದ್ದು, 2 ಸೂಚನೆಗಳನ್ನು ಚರ್ಚಿಸಲಾಗಿದೆ. ಒಟ್ಟು 1640 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 60 ಪ್ರಶ್ನೆಗಳಿಗೆ ಸಂಪೂರ್ಣವಾಗಿ ಉತ್ತರಿಸಲಾಗಿದೆ. ಲಿಖಿತವಾಗಿ ಉತ್ತರಿಸುವ 600 ಪ್ರಶ್ನೆಗಳ ಉತ್ತರಗಳನ್ನು ಮಂಡಿಸಲಾಗಿದೆ.
ನಿಯಮ 351ರ ಅಡಿಯಲ್ಲಿ 40 ಸೂಚನೆಗಳನ್ನು ಅಂಗೀಕರಿಸಿದ್ದು, 25 ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿರುತ್ತದೆ. ಗಮನ ಸೆಳೆಯುವ 142 ಸೂಚನೆಗಳ ಪೈಕಿ 3 ಸೂಚನೆಗಳನ್ನು ಚರ್ಚಿಸಲಾಗಿದೆ ಹಾಗೂ 37 ಸೂಚನೆಗಳ ಉತ್ತರಗಳನ್ನು ಮಂಡಿಸಲಾಗಿದೆ. 52 ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿರುತ್ತದೆ. ಶೂನ್ಯ ವೇಳೆ ಅಡಿಯಲ್ಲಿ ಒಟ್ಟು 7 ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಅವುಗಳ ಬಗ್ಗೆ ಸದನದಲ್ಲಿ ಚರ್ಚಿಸಲಾಗಿದೆ.