ಬೆಂಗಳೂರು:ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಸಾವಿಗೂ ಮುನ್ನ ಐದಾರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರು. ಈ ಸಿನಿಮಾಗಳ ಸಾಲಿನಲ್ಲಿ ವಿಜಯ್ ಅಭಿನಯಿಸಿರುವ ಬಹು ನಿರೀಕ್ಷಿತ ಚಿತ್ರ ಪಿರಂಗಿಪುರ ಕೂಡ ಒಂದು. ಈ ಸಿನಿಮಾದಲ್ಲಿ ಸಂಚಾರಿ ವಿಜಯ್ ಪಾತ್ರ ಪರಿಚಯದ ಬಗ್ಗೆ, ಒಂದು ವಿಡಿಯೋ ಮತ್ತು ಪೋಸ್ಟರ್ ಅನ್ನು ಅನಾವರಣ ಮಾಡಲು ಪಿರಂಗಿಪುರ ಚಿತ್ರತಂಡ ಸಿದ್ಧತೆ ನಡೆಸಿದೆ.
ನಾಳೆ ಸಂಚಾರಿ ವಿಜಯ್ ಹುಟ್ಟುಹಬ್ಬ ಇರುವ ಹಿನ್ನೆಲೆ, ಪಿರಂಗಿಪುರ ಸಿನಿಮಾದ ಮೊದಲ ಲುಕ್ ಅನಾವರಣ ಆಗಲಿದೆ. ಈ ಚಿತ್ರದಲ್ಲಿ ಸಂಚಾರಿ ವಿಜಯ್ ಕಮರ್ಷಿಯಲ್ ಹೀರೋ ಆಗಿ 3 ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಪಿರಂಗಿಪುರ ಚಿತ್ರತಂಡ, ಸಂಚಾರಿ ವಿಜಯ್ಗೆ Silent Star ಎಂಬ ಬಿರುದನ್ನ ನೀಡಲು ಪ್ಲಾನ್ ಮಾಡಿದೆ.
ಈಗಾಗಲೇ ಚಿತ್ರತಂಡ ಶೇಕಡಾ 30ರಷ್ಟು ಶೂಟಿಂಗ್ ಮುಗಿಸಿದ್ದು, ಇದಕ್ಕೆ 2 ವರ್ಷಗಳಿಂದ Vfx ತಂತ್ರಜ್ಞಾನದ ಮೇಲೆ ಪ್ರಯೋಗ ಮಾಡಿ, ಕೋವಿಡ್ಗೂ ಮುನ್ನ ಸಿದ್ಧತೆ ಮಾಡಿಕೊಂಡಿದ್ದರು. ಉಳಿದ ಶೂಟಿಂಗ್ ಮಾಡುವಷ್ಟರಲ್ಲಿ ಕೊರೊನಾ ಅಡ್ಡಿ ಬಂತು.
ಜೂನ್ 14 ರಂದು ಸಂಚಾರಿ ವಿಜಯ್ ಅವರು ಅಪಘಾತದಲ್ಲಿ ವಿಧಿವಶರಾದರು. ನಾಳೆ ಅವರ ಬರ್ತಡೇ ಇರುವುದರಿಂದ ಅವರ ಸವಿ ನೆನಪಿಗಾಗಿ ಚಿತ್ರತಂಡ ಒಂದು ವಿಡಿಯೋ ಮತ್ತು ಪೋಸ್ಟರ್ ರಿಲೀಸ್ ಮಾಡಲಿದೆ.
ಚಿತ್ರದಲ್ಲಿ ದೊಡ್ಡ ತಾರಾಗಣವಿದೆ. ಏಕ ಕಾಲದಲ್ಲಿ ಐದು ಭಾಷೆಗಳಲ್ಲಿ ತಯಾರಾಗುತ್ತಿರುವ, ಅತಿ ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಮಾಡುತ್ತಿರುವ, ಬಹುತೇಕ Vfx ಮತ್ತು Animation ನಿಂದ ಕೂಡಿರುವ ಚಿತ್ರ ಇದಾಗಿದೆ. ಈ ಚಿತ್ರದ ನಿರ್ದೇಶನ ಮತ್ತು ನಿರ್ಮಾಣವನ್ನು ಪ್ರಿಸ್ಟಿಸ್ ಸ್ಟುಡಿಯೋದ ಜನಾರ್ಧಾನ್ ರೆಡ್ಡಿ & ತ್ರಿಪುಲ ಕ್ರಿಯೇಷನ್ರವರು ವಹಿಸಿಕೊಂಡಿದ್ದಾರೆ. ಸಂಚಾರಿ ವಿಜಯ್ ವಿಧಿವಶರಾದ ಮೇಲೆ, ಅವರ ಪಾತ್ರಕ್ಕೆ ಅರ್ಥ ಕೊಡುವ ಪಾತ್ರಧಾರಿಯನ್ನು ಚಿತ್ರತಂಡ ಹುಡುಕುತ್ತಿದೆ.