ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳಿಂದ ಪುತ್ರನ ಬಂಧನವಾಗುತ್ತಿದ್ದಂತೆ ಶಾಸಕ, ಕೆಎಸ್ಡಿಎಲ್ ಮಾಜಿ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಪೋಸ್ಟರ್ ಅಭಿಯಾನ ನಡೆಯುತ್ತಿದೆ. ಬೆಂಗಳೂರಿನ ಹಲವೆಡೆ ಪೋಸ್ಟರ್‌ಗಳು ರಾರಾಜಿಸುತ್ತಿದ್ದು, 'ಮೈಸೂರು ಸ್ಯಾಂಡಲ್ ಸೋಪ್ ಹಗರಣದ ಪ್ರಮುಖ ಆರೋಪಿ ಮಾಡಾಳ್ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದಾರೆ. ಅವರು ಎಲ್ಲಿಯಾದರೂ ಕಂಡಲ್ಲಿ ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಮಾಡುವ ಮೂಲಕ ಲೋಕಾಯುಕ್ತ ತನಿಖೆಗೆ ಸಹಕರಿಸಿ' ಎಂದು ಪೋಸ್ಟರ್ ಅಂಟಿಸಲಾಗಿದೆ.
ಈ ಪೋಸ್ಟರ್ ಅಂಟಿಸಿದವರು ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ. ಕೆಎಸ್ಡಿಎಲ್ಗೆ ರಾಸಾಯನಿಕ ಪೂರೈಸುವ ಟೆಂಡರ್ ನೀಡಲು ಲಂಚ ಸ್ವೀಕರಿಸುತ್ತಿದ್ದ ಪ್ರಶಾಂತ್ ಮಾಡಾಳ್‌ರನ್ನು ಮಾರ್ಚ್ 2ರಂದು ಬಂಧಿಸಿದ್ದ ಲೋಕಾಯುಕ್ತ ಅಧಿಕಾರಿಗಳು ಬಳಿಕ ಕೆಎಸ್ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಅಧ್ಯಕ್ಷ ವಿರೂಪಾಕ್ಷಪ್ಪ ಮಾಡಾಳ್ ಹಾಗೂ ಅವರ ಪುತ್ರ ಪ್ರಶಾಂತ್ ಮಾಡಾಳ್ ಮನೆಯಲ್ಲಿಯೂ ತೀವ್ರ ಶೋಧ ನಡೆಸಿದ್ದರು. ಪರಿಶೀಲನೆಯ ಸಂದರ್ಭದಲ್ಲಿ ಪ್ರಶಾಂತ್ ಮಾಡಾಳ್ ಮನೆಯಲ್ಲಿ ಅಪಾರ ಪ್ರಮಾಣದ ನಗದು ಜಪ್ತಿ ಮಾಡಲಾಗಿತ್ತು. ಪುತ್ರನ ಬಂಧನದ ಬಳಿಕ ನೈತಿಕ ಹೊಣೆ ಹೊತ್ತು ಕೆಎಸ್ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ:ಮಾಡಾಳ್ ವಿರೂಪಾಕ್ಷಪ್ಪ ವಿರುದ್ದ ಆಧಾರರಹಿತ ಸುದ್ದಿ ಪ್ರಕಟಿಸದಂತೆ ನಿರ್ಬಂಧ ವಿಧಿಸಿದ ನ್ಯಾಯಾಲಯ