ಕರ್ನಾಟಕ

karnataka

ETV Bharat / state

ಹೈಟೆಕ್ ಆಗಲಿದೆ ಅಂಚೆ ಇಲಾಖೆ: ದಿನದ 24 ಗಂಟೆಯೂ ಮಾಡಬಹುದು ಸ್ಪೀಡ್ ಪೋಸ್ಟ್, ರಿಜಿಸ್ಟರ್ ಪೋಸ್ಟ್ - ಸಿಡಾಕ್ ಸಂಸ್ಥೆಯ ಜಂಟಿ ನಿರ್ದೇಶಕ ಶ್ರೀಕೃಷ್ಣ

Postal will become high tech: ಕ್ಯಾಷ್ ಡೆಪಾಸಿಟ್ ಮಷಿನ್, ಆಟೋಮೇಟೆಡ್ ಟೆಲ್ಲರ್ ಮಷಿನ್​ಗಳಂತೆಯೇ ಇದೀಗ ಅಂಚೆ ಇಲಾಖೆಯೂ ಡಿಜಿಟಲೀಕರಣಗೊಳ್ಳುತ್ತಿದ್ದು, ದಿನದ 24 ಗಂಟೆಯೂ ಪಾರ್ಸೆಲ್, ರಿಜಿಸ್ಟರ್ಡ್ ಪೋಸ್ಟ್, ಸ್ಪೀಡ್ ಪೋಸ್ಟ್ ಮಾಡಬಹುದಾಗಿದೆ.

Indian Postal
ಭಾರತೀಯ ಅಂಚೆ ಇಲಾಖೆ

By ETV Bharat Karnataka Team

Published : Nov 30, 2023, 7:14 PM IST

ಸಿಡಾಕ್ ಸಂಸ್ಥೆಯ ಜಂಟಿ ನಿರ್ದೇಶಕ ಶ್ರೀಕೃಷ್ಣ

ಬೆಂಗಳೂರು: ದಿನದ 24 ಗಂಟೆಯೂ ಸ್ಪೀಡ್ ಪೋಸ್ಟ್, ರಿಜಿಸ್ಟರ್ ಪೋಸ್ಟ್ ಮಾಡುವ ಕಾಲ ಸನ್ನಿಹಿತವಾಗಿದೆ. ಎಟಿಎಂ ರೀತಿ ಕೆಲಸ ಮಾಡುವ ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್ ಅನ್ನು ಬೆಂಗಳೂರು ಮೂಲದ ಕಂಪನಿ ಆವಿಷ್ಕಾರ ಮಾಡಿದ್ದು, ಪ್ರಾಯೋಗಿಕ ಪರೀಕ್ಷೆಯೂ ಮುಗಿದಿದೆ. ಸದ್ಯದಲ್ಲೇ ಎಟಿಎಂ ಕೇಂದ್ರಗಳಂತೆ ಪೋಸ್ಟ್ ಕಿಯೋಸ್ಕ್​ಗಳೂ ತಲೆ ಎತ್ತಲಿವೆ.

ಮೊದಲೆಲ್ಲ ಬ್ಯಾಂಕ್ ಸಮಯದಲ್ಲಿ ಮಾತ್ರ ಹಣ ಜಮೆ ಮಾಡುವ, ವರ್ಗಾವಣೆ, ವಿತ್ ಡ್ರಾ ಮಾಡಬೇಕಾಗಿತ್ತು. ಆದರೆ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಡಿಜಿಟಲೀಕರಣದ ಪರಿಣಾಮ ಇಂದು ದಿನದ 24 ಗಂಟೆಯೂ ಹಣ ವಿತ್ ಡ್ರಾ ಮಾಡುವ, ಖಾತೆಗೆ ಜಮೆ ಮಾಡುವ ವ್ಯವಸ್ಥೆ ಬಂದಿದೆ. ಅದಕ್ಕಾಗಿ ಕ್ಯಾಷ್ ಡೆಪಾಸಿಟ್ ಮಷಿನ್, ಆಟೋಮೇಟೆಡ್ ಟೆಲ್ಲರ್ ಮಷಿನ್ ಬಂದಿವೆ. ಅದರಂತೆಯೇ ಇದೀಗ ಅಂಚೆ ಇಲಾಖೆಯೂ ಡಿಜಿಟಲೀಕರಣಗೊಳ್ಳುತ್ತಿದ್ದು, ದಿನದ 24 ಗಂಟೆಯೂ ಪಾರ್ಸೆಲ್, ರಿಜಿಸ್ಟರ್ಡ್ ಪೋಸ್ಟ್, ಸ್ಪೀಡ್ ಪೋಸ್ಟ್ ಮಾಡಬಹುದಾಗಿದೆ.

ಸದ್ಯ ಅಂಚೆ ಪೆಟ್ಟಿಗೆಗೆ ಯಾವಾಗ ಬೇಕಾದರೂ ಪತ್ರ ಹಾಕುವ ವ್ಯವಸ್ಥೆ ಇದ್ದರೂ ಪಾರ್ಸಲ್, ರಿಜಿಸ್ಟರ್, ಸ್ಪೀಡ್ ಪೋಸ್ಟ್ ಮಾಡಲು ಅಂಚೆ ಕಚೇರಿಗೇ ಹೋಗಬೇಕು. ರಜೆ ದಿನಗಳಲ್ಲಿ ಈ ಸೇವೆಯೂ ಲಭ್ಯವಿರುವುದಿಲ್ಲ. ಆದರೆ, ಇದಕ್ಕೆ ಬೆಂಗಳೂರಿನ ಸಿಡಾಕ್ ಕಂಪನಿ ಪರಿಹಾರ ಹುಡುಕಿದ್ದು, ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್ ಅನ್ನು ಆವಿಷ್ಕಾರ ಮಾಡಿದೆ. ಆಟೋಮೇಟೆಡ್ ಆರ್ಟಿಕಲ್ ಇನ್ ಟೇಕ್ ಪ್ರೋಸೆಸ್ ಆಫ್ ಸ್ಪೀಡ್ ಪೋಸ್ಟ್ ಮತ್ತು ರಿಜಿಸ್ಟರ್ ಪೋಸ್ಟ್ ಸಿಸ್ಟಮ್ ಇದಾಗಿದೆ.

ಕಿಯೋಸ್ಕ್​ಗೆ ಹೋಗಿ ರಿಜಿಸ್ಟರ್ ಪೋಸ್ಟ್:ಎಟಿಎಂಗೆ ಹೋಗಿ ಹಣ ಹಾಕಿದ ರೀತಿಯಲ್ಲಿಯೇ ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್​ಗೆ ಹೋಗಿ ರಿಜಿಸ್ಟರ್ ಪೋಸ್ಟ್ ಮತ್ತು ಸ್ಪೀಡ್ ಪೋಸ್ಟ್ ಮಾಡಬಹುದಾಗಿದೆ. ಅದಕ್ಕೆ ನಿಗದಿಪಡಿಸಿದ ಶುಲ್ಕವನ್ನು ಯುಪಿಐ, ಕ್ರೆಡಿಟ್, ಡೆಬಿಟ್ ಕಾರ್ಡ್, ಆನ್​ಲೈನ್ ಮೂಲಕ ಪಾವತಿಸಬಹುದಾಗಿದೆ. ಇಷ್ಟು ಮಾತ್ರವಲ್ಲದೆ ಪಾರ್ಸಲ್ ಮಾಡಲು ಅವಕಾಶವಿದೆ. ಕಿಯೋಸ್ಕ್​ನಲ್ಲಿ ಪಾರ್ಸಲ್ ಇರಿಸಿದರೆ ಅದರ ತೂಕ ಪ್ರದರ್ಶಿತಗೊಂಡು ತಲುಪುವ ವಿಳಾಸಕ್ಕೆ ತಕ್ಕಂತೆ ದರವನ್ನು ವಿಧಿಸುತ್ತದೆ. ಅದನ್ನು ಪಾವತಿಸಿದರೆ ಪಾರ್ಸಲ್ ಸ್ವೀಕಾರವಾಗಲಿದೆ. ಒಮ್ಮೆ ಇದು ಅಧಿಕೃತವಾಗಿ ಆರಂಭಗೊಂಡರೆ ಯಾವ ಸ್ಥಳದಿಂದ ಯಾವ ಸಮಯಕ್ಕೆ ಬೇಕಾದರೂ ಸ್ಪೀಡ್ ಅಂಡ್​​​ ರಿಜಿಸ್ಟರ್ ಪೋಸ್ಟ್ ಮಾಡಬಹುದಾಗಿದೆ.

ಪರೀಕ್ಷಾರ್ಥ ಪ್ರಯೋಗ ಸಫಲ:ಈಗಾಗಲೇ ಮ್ಯೂಸಿಯಂ ರಸ್ತೆಯಲ್ಲಿರುವ ಅಂಚೆ ಕಚೇರಿಯಲ್ಲಿ ಪ್ರಾಯೋಗಿಕವಾಗಿ ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್ ಅಳವಡಿಸಿ ಪರೀಕ್ಷಾರ್ಥ ಪ್ರಯೋಗ ನಡೆಸಿ ಸಫಲವಾಗಿದೆ. ಇದರಿಂತ ಹರ್ಷಚಿತ್ತರಾಗಿರುವ ಅಂಚೆ ಇಲಾಖೆ ಅಧಿಕಾರಿಗಳು ಮತ್ತೆ 12 ಕಡೆ ಇಂತಹ ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್ ಅಳವಡಿಸಲು ಸೂಚಿಸಿದ್ದು, ನಂತರ ಅಧಿಕೃತವಾಗಿ ರಾಜ್ಯಾದ್ಯಂತ ಅಧಿಕೃತವಾಗಿ ಅಳವಡಿಕೆ ಮಾಡಲಾಗುತ್ತದೆ.

ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಸಿಡಾಕ್ ಸಂಸ್ಥೆಯ ಜಂಟಿ ನಿರ್ದೇಶಕ ಶ್ರೀಕೃಷ್ಣ, ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ರಿಜಿಸ್ಟರ್, ಸ್ಪೀಡ್ ಪೋಸ್ಟ್ ಮಾಡಬೇಕಾದರೆ ಪೋಸ್ಟ್ ಆಫೀಸ್​ಗೆ ಹೋಗಿ ಸರದಿ ಸಾಲಿನಲ್ಲಿ ನಿಂತು ನಮ್ಮ ಪೋಸ್ಟ್ ಅಥವಾ ಪಾರ್ಸೆಲ್ ಕೊಡಬೇಕು. ಅದನ್ನು ತೂಕ ಮಾಡಿ ವಿಳಾಸ ನೋಡಿ ದರ ಎಷ್ಟು ಎಂದು ತಿಳಿಸುತ್ತಾರೆ. ಅಷ್ಟು ಹಣವನ್ನು ನಗದು ರೂಪದಲ್ಲೇ ಅಲ್ಲಿ ಪಾವತಿ ಮಾಡಬೇಕಿದೆ. ಆದರೆ, ಈ ಮಷಿನ್ ಸ್ವಯಂ ಚಾಲಿತವಾಗಿರಲಿದೆ. ಪಾರ್ಸೆಲ್ ಇಲ್ಲಿ ಹಾಕಿ ತೂಕ ನೋಡಿ ವಿಳಾಸ ನಮೂದಿಸಿದರೆ ಹಣ ಎಷ್ಟು ಎಂದು ತೋರಿಸಲಿದೆ. ಯುಪಿಐ, ಕ್ರೆಡಿಟ್, ಡೆಬಿಟ್ ಕಾರ್ಡ್, ಆನ್ ಲೈನ್ ಮೂಲಕ ಪಾವತಿ ಮಾಡಬಹುದು, ಎನಿ ವೇರ್, ಎನಿ ಟೈಂ ಸ್ಪೀಡ್ ಪೋಸ್ಟ್ ಮತ್ತು ರಿಜಿಸ್ಟರ್ ಪೋಸ್ಟ್​ಗಳನ್ನು ಆ್ಯಕ್ಸಸ್ ಮಾಡಬಹುದಾಗಿದೆ. ಇಡೀ ಪ್ರಕ್ರಿಯೆ ಸಂಪೂರ್ಣ ಸ್ವಯಂ ಚಾಲಿತವಾಗಿರಲಿದೆ. ಇದು ವೆರಿವೆಲ್ ಇಂಟಿಗ್ರೇಟೆಡ್‌ ವಿತ್ ದಿ ಪೋಸ್ಟಲ್ ಸಿಸ್ಟಮ್ಸ್. ಇದರಿಂದ ಯಾವ ಸಮಯದಲ್ಲಿ ಎಲ್ಲಿಯಾದರೂ ಸ್ಪೀಡ್ ಮತ್ತು ರಿಜಿಸ್ಟರ್ ಪೋಸ್ಟ್ ಮಾಡಬಹುದಾಗಿದೆ ಎಂದರು.

ಅಗತ್ಯಕ್ಕೆ ತಕ್ಕಂತೆ ಕಿಯೋಸ್ಕ್​​ ಮರು ವಿನ್ಯಾಸ: ಸದ್ಯ 10 ಕೆಜಿವರೆಗೂ ಪಾರ್ಸೆಲ್ ಅನ್ನು ಕಿಯೋಸ್ಕ್ ಮೂಲಕ ಪೋಸ್ಟ್ ಮಾಡಬಹುದು. ಅಗತ್ಯಕ್ಕೆ ತಕ್ಕಂತೆ ಕಿಯೋಸ್ಕ್ ಅನ್ನು ಮರು ವಿನ್ಯಾಸ ಮಾಡಬಹುದಾಗಿದೆ. ಈಗಾಗಲೇ ಇದರ ಪ್ರಯೋಗಿಕ ಪರೀಕ್ಷೆ ಮುಕ್ತಾಯವಾಗಿದೆ. ಮ್ಯೂಸಿಯಂ ರಸ್ತೆಯ ಪೋಸ್ಟ್ ಆಫೀಸ್​ನಲ್ಲಿ ಪೈಲಟ್ ಪರೀಕ್ಷೆಯಾಗಿದೆ. ಪೋಸ್ಟಲ್ ಇಲಾಖೆಯವರು ಉತ್ಸಾಹ ತೋರಿದ್ದಾರೆ. ಈಗ ಇದನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸುವ ಗುರಿ ಇದೆ. ಸದ್ಯಕ್ಕೆ ನಾವೇ ಈ ಕಿಯೋಸ್ಕ್ ಉತ್ಪಾದನೆ ಮಾಡುತ್ತಿದ್ದೇವೆ. ಸಾಫ್ಟ್‌ವೇರ್ ಮತ್ತು ಹಾರ್ಡ್​​ವೇರ್ ಎರಡೂ ನಮ್ಮದೇ ಇರಲಿದೆ. ಸದ್ಯಕ್ಕೆ ನಮಗಿನ್ನು ಅಂಚೆ ಇಲಾಖೆಯಿಂದ ಆರ್ಡರ್ ಬಂದಿಲ್ಲ. ಆದರೆ, 12 ಸ್ಥಳಗಳಲ್ಲಿ ಪೋಸ್ಟಲ್ ಡಿಪಾರ್ಟ್‌ಮೆಂಟ್​ನವರು ಇದನ್ನು ಅಳವಡಿಸಲು ಆದೇಶ ಕೊಟ್ಟಿದ್ದಾರೆ. ಸದ್ಯದಲ್ಲೇ ಅವುಗಳ ಅಳವಡಿಕೆ ಮಾಡಲಾಗುತ್ತದೆ ಎಂದರು.

ಇದನ್ನೂ ಓದಿ:ಎಕ್ಸಪ್ರೆಸ್ ಕಾರ್ಗೋ ಸರ್ವಿಸ್... ಅಂಚೆ ಇಲಾಖೆಯ ವೇಗದ ಪಾರ್ಸಲ್ ಸೇವೆ ಆರಂಭ

ABOUT THE AUTHOR

...view details