ಬೆಂಗಳೂರು:ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಕ್ರಿಕೆಟ್ ಸರಣಿಯಲ್ಲಿ ಆರಂಭಿಕ ಹಿನ್ನಡೆ ನಡುವೆಯೂ ಪುಟಿದೆದ್ದಿರುವ ಭಾರತ ತಂಡ 2-2ರಿಂದ ಸಮಬಲ ಸಾಧಿಸಿದೆ. ಅಂತಿಮ ಹಣಾಹಣಿ ತೀವ್ರ ಕುತೂಹಲ ಮೂಡಿಸಿದ್ದು, ಇಂದು ಬೆಂಗಳೂರಿನಲ್ಲಿ ನಡೆಯಲಿದೆ. ಆದರೆ ಉದ್ಯಾನನಗರಿಯಲ್ಲಿ ಕೆಲದಿನಗಳಿಂದ ಮಳೆಯಾಗುತ್ತಿದ್ದು, ಇಂದೂ ಕೂಡ ಕ್ರಿಕೆಟ್ ಪ್ರೇಮಿಗಳ ಸಂಭ್ರಮಕ್ಕೆ ವರುಣ ತಣ್ಣೀರೆರಚುವ ಸಾಧ್ಯತೆ ಹೆಚ್ಚಾಗಿದೆ.
ಸರಣಿಯ ಮೊದಲ ಪಂದ್ಯ ನವದೆಹಲಿಯಲ್ಲಿ ನಡೆದಿದ್ದು, ದ.ಆಫ್ರಿಕಾವು 7 ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ ಶುಭಾರಂಭ ಮಾಡಿತು. ನಂತರ ಎರಡನೇ ಪಂದ್ಯವನ್ನೂ ಕೂಡ 4 ವಿಕೆಟ್ಗಳಿಂದ ಗೆದ್ದ ಹರಿಣಗಳು ಸರಣಿಯಲ್ಲಿ 2-0 ಮುನ್ನಡೆಯೊಂದಿಗೆ ಗೆಲುವಿನ ಉತ್ಸಾಹದಲ್ಲಿದ್ದರು. ಬಳಿಕ ಭರ್ಜರಿ ಪುನರಾಗಮನ ಮಾಡಿದ ಟೀಂ ಇಂಡಿಯಾ ಮೂರನೇ ಪಂದ್ಯದಲ್ಲಿ 48 ರನ್ ಹಾಗೂ ನಾಲ್ಕನೇ ಹಣಾಹಣಿಯಲ್ಲಿ 82 ರನ್ಗಳ ಅಮೋಘ ಜಯಭೇರಿ ಬಾರಿಸಿದ್ದು, ಸರಣಿಯು ರೋಚಕ ಘಟ್ಟಕ್ಕೆ ತಲುಪಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಭಾರತ-ದ.ಆಫ್ರಿಕಾ ಟಿ20: ಬಿಎಂಟಿಸಿಯಿಂದ ಮಿಡ್ ನೈಟ್ ಬಸ್ ಸೌಲಭ್ಯ
ಹೀಗಾಗಿ ಸರಣಿಯ ನಿರ್ಣಾಯಕ ಹೋರಾಟದ ವೀಕ್ಷಣೆಗೆ ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಅಂತಿಮ ಪಂದ್ಯದ ವೀಕ್ಷಣೆಗೆ ಅಭಿಮಾನಿಗಳು ಕಿಕ್ಕಿರಿದು ಸೇರುವ ಸಾಧ್ಯತೆ ಇದೆ. ಪಂದ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಎಂಟಿಸಿ ಹಾಗೂ ಮೆಟ್ರೋ ಸಂಚಾರದ ಅವಧಿಯನ್ನೂ ಕೂಡ ಮಧ್ಯರಾತ್ರಿಯವರೆಗೆ ವಿಸ್ತರಿಸಿ ಅನುವು ಮಾಡಿಕೊಡಲಾಗಿದೆ. ಆದರೆ ಎಲ್ಲದಕ್ಕೂ ಮಳೆರಾಯ ಶಾಂತವಾಗಿರುವುದು ಬಹುಮುಖ್ಯವಾಗಿದೆ.
ಏರ್ ಸ್ಟಿಸ್ಟಮ್ ವ್ಯವಸ್ಥೆ:ಹವಾಮಾನ ಇಲಾಖೆ ವರದಿಯಂತೆ ಭಾನುವಾರ ಸಂಜೆಯೂ ಮಳೆ ಬೀಳುವ ಸಾಧ್ಯತೆಗಳಿದೆ. ಆದರೆ ಚಿನ್ನಸ್ವಾಮಿ ಮೈದಾನದಲ್ಲಿ ಸಬ್ ಏರ್ ಸ್ಟಿಸ್ಟಮ್ ಅಳವಡಿಕೆ ಮಾಡಿರುವ ಹಿನ್ನೆಲೆಯಲ್ಲಿ ಎಷ್ಟೇ ದೊಡ್ಡ ಪ್ರಮಾಣದಲ್ಲಿ ಮಳೆಬಿದ್ದರೂ ಆಟಕ್ಕೆ ಪಿಚ್ ಸಜ್ಜುಗೊಳಿಸಲು ಕೆಲ ನಿಮಿಷಗಳು ಸಾಕು. 20 ನಿಮಿಷಗಳಲ್ಲೇ ಪಂದ್ಯ ಮರಳಿ ಆರಂಭಿಸಬಹುದು. ಆದರೆ, ಮಳೆ ಬಿಡುವು ನೀಡದೆ ಸತತವಾಗಿ ಸುರಿದರೆ, ಪಂದ್ಯಕ್ಕೆ ಅಡ್ಡಿಯಾಗಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ:ಬೆಂಗಳೂರಲ್ಲಿ ಭಾರತ-ದ.ಆಫ್ರಿಕಾ ಟಿ20: ಮಧ್ಯರಾತ್ರಿವರೆಗೆ ಇರಲಿದೆ ಮೆಟ್ರೋ ಸೇವೆ