ಬೆಂಗಳೂರು: ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಮಳೆಯರಾಯ ಆರ್ಭಟಿಸುವ ಸಾಧ್ಯತೆ ಇದೆ.
ಇದರ ಪ್ರಭಾವದಿಂದ ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ 17ರವರೆಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದ ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಇಂದು ಮತ್ತು 17ರಂದು ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದ ಕೆಲವು ಕಡೆ ಮೇ 15 ಮತ್ತು 16ರಂದು ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ.
ಇನ್ನು ಉತ್ತರ ಕರ್ನಾಟಕ ಭಾಗಗಳಾದ ಬೆಳಗಾವಿ, ಧಾರವಾಡ, ಹಾವೇರಿ, ಗದಗದ ಕೆಲವು ಭಾಗಗಳಲ್ಲಿ ಮೇ 15 ಮತ್ತು 17ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮೇ 15 ಮತ್ತು 16ರಂದು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರ ಹಾಗೂ ಬಾಗಲಕೋಟೆಯ ಕೆಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಮೇ 15 ಮತ್ತು 16ರಂದು ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಕಡೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಕೆಲವು ಕಡೆ ಇಂದು ಮತ್ತು 17ರಂದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಮೇ 15ರಂದು ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ ಅತೀ ಹೆಚ್ಚು ಮಳೆ ಮತ್ತು ಕೆಲವು ಕಡೆ 20 ಸೆಂ.ಮೀ. ಮಳೆಯಾಗುವ ಸಾಧ್ಯತೆ ಇದೆ.
ಇನ್ನು ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಹೇಳಿಕೆ ನೀಡಿದ್ದಾರೆ.
ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ಅಂದರೆ ಲಕ್ಷದ್ವೀಪಗಳ ನಡುಗಡ್ಡೆಗಳ ಪ್ರದೇಶದಲ್ಲಿ ವಾಯುಭಾರ ಕುಸಿತ ಇನ್ನಷ್ಟು ತೀವ್ರಗೊಂಡಿದೆ. ಇದು 24 ಗಂಟೆಗಳಲ್ಲಿ ಚಂಡಮಾರುತ ಆಗುವ ಸಾಧ್ಯತೆ ಇದೆ. ಮುಂದೆ ಮತ್ತಷ್ಟು ತೀವ್ರಗೊಳ್ಳುತ್ತಾ ಉತ್ತರದ ಕಡೆ ಚಲಿಸುವ ಸಾಧ್ಯತೆ ಇದ್ದು, ಮೇ 18ರಂದು ಗುಜರಾತ್ ಕರಾವಳಿ ಪ್ರದೇಶ ತಲುಪುವ ಸಾಧ್ಯತೆ ಇದೆ. ಇದರ ಪ್ರಭಾವದಿಂದ ಕರಾವಳಿ ಜಿಲ್ಲೆಗಳಲ್ಲಿ ಮೇ 14ರಿಂದ 18ರವರೆಗೆ ವ್ಯಾಪಕ ಮಳೆಯಾಗಲಿದೆ.
ರಾಜ್ಯದ ದ.ಒಳನಾಡಿನ ಬಹುತೇಕ ಎಲ್ಲಾ ಸ್ಥಳಗಳಲ್ಲಿ ಈಗಾಗಲೇ ಮಳೆಯಾಗಿದ್ದು, ಕರಾವಳಿ ಮತ್ತು ಉ.ಒಳನಾಡಿನ ಕೆಲವು ಕಡೆ ಮಾತ್ರ ಮಳೆಯಾಗಿದೆ ಎಂದು ಅವರು ತಿಳಿಸಿದರು.