ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಬದಲಾವಣೆ ಸಾಧ್ಯತೆ?! - ಈಟಿವಿ ಭಾರತ ಕನ್ನಡ

ವಿಧಾನ ಪರಿಷತ್ ಸದಸ್ಯರಾಗಿ ನಿಯೋಜನೆಗೊಂಡ ಅಬ್ದುಲ್​ ಜಬ್ಬಾರ್,​ ರಾಜ್ಯ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಬೇರೆಯವರಿಗೆ ನೀಡಬೇಕು ಎಂದು ಕೆಲವು ಕಾಂಗ್ರೆಸ್​​ ನಾಯಕರು ಮಾತನಾಡಿದ್ದಾರೆ ಎನ್ನಲಾಗಿದೆ.

KN_BNG_02_CONG
ಕೆ.ಅಬ್ದುಲ್​ ಜಬ್ಬಾರ್​

By

Published : Oct 10, 2022, 3:52 PM IST

ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಕ್ಷದ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿ ಕೆಲ ತಿಂಗಳು ಅಧಿಕಾರ ಮುಂದುವರಿಸಿದ್ದ ಕೆ.ಅಬ್ದುಲ್ ಜಬ್ಬಾರ್ ಇದೀಗ ವಿಧಾನ ಪರಿಷತ್ ಸದಸ್ಯರಾಗಿ ನಿಯೋಜಿತರಾಗಿದ್ದಾರೆ. ಪಕ್ಷದಲ್ಲಿ ಒಬ್ಬರು ಎರಡು ಹುದ್ದೆಯಲ್ಲಿ ಇರುವಂತಿಲ್ಲ ಎನ್ನುವ ನಿಯಮ ಇರುವ ಹಿನ್ನೆಲೆ ಅಲ್ಪಸಂಖ್ಯಾತ ಘಟಕಕ್ಕೆ ಮತ್ತೊಬ್ಬರ ನೇಮಕ ಆಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ವಿಧಾನ ಪರಿಷತ್ ಸದಸ್ಯರಾದ ಮಾತ್ರಕ್ಕೆ ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂದೇನೂ ಇಲ್ಲ. ಎರಡು ಹುದ್ದೆಯನ್ನು ಹೊಂದಿದ್ದರೆ ಅದು ದೊಡ್ಡ ಜವಾಬ್ದಾರಿ. ಆದರೆ, ಅಧ್ಯಕ್ಷರಾಗಿದ್ದವರು ವಿಧಾನಸಭೆ ಇಲ್ಲವೇ ವಿಧಾನ ಪರಿಷತ್ ಸದಸ್ಯರಾದರೆ ಅಧ್ಯಕ್ಷ ಸ್ಥಾನ ತ್ಯಜಿಸಬೇಕೆಂದೇನು ಇಲ್ಲ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ರಾಮಲಿಂಗರೆಡ್ಡಿ, ಸಲೀಂ ಅಹಮದ್, ಈಶ್ವರ್ ಖಂಡ್ರೆ ಮಾತ್ರವಲ್ಲದೇ ಹಲವು ನಾಯಕರು ಎರಡು ಹುದ್ದೆ ಹೊಂದಿದ್ದು, ಬದಲಾವಣೆ ಅಗತ್ಯವಿಲ್ಲ ಎಂದು ಕೆಲ ನಾಯಕರು ಹೇಳುತ್ತಿದ್ದಾರೆ.

ಆದರೆ, ಮತ್ತೆ ಕೆಲವರು ಅಲ್ಪಸಂಖ್ಯಾತ ಘಟಕದ ಅಡಿ ಮುಸ್ಲೀಂಮರು ಮಾತ್ರ ಇಲ್ಲ. ಕ್ರಿಶ್ಚಿಯನ್, ಸಿಕ್, ಜೈನರು ಸೇರಿದಂತೆ ಎಲ್ಲ ಅಲ್ಪಸಂಖ್ಯಾತ ಸಮುದಾಯದವರೂ ಇದ್ದಾರೆ. ಇದರಿಂದ ಬೇರೆ ಸಮುದಾಯಕ್ಕೆ ಯಾಕೆ ಅವಕಾಶ ನೀಡಬಾರದು ಎಂಬ ಮಾತನ್ನು ಸಹ ಕೆಲವರು ಆಡುತ್ತಿದ್ದಾರೆ. ಅಬ್ದುಲ್ ಜಬ್ಬಾರ್ ಇತ್ತೀಚೆಗೆ ವಿಧಾನ ಪರಿಷತ್​ಗೆ ನಾಮನಿರ್ದೇಶನಗೊಂಡಿದ್ದಾರೆ.

ಈಗಾಗಲೇ ಪರಿಷತ್​ನಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಸಲ್ಮಾನ್ ಸಮುದಾಯವನ್ನು ಪ್ರತಿನಿಧಿಸುವ ಮೂವರು ಸದಸ್ಯರಿದ್ದಾರೆ. ಇನ್ನೊಬ್ಬರ ಅಗತ್ಯ ಇರಲಿಲ್ಲ. ಅಲ್ಲದೇ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಜಬ್ಬಾರ್ ಎಮ್ಮೆಲ್ಸಿ ಆಗಿದ್ದರು. ಹೊಸಬರಿಗೆ ಅವಕಾಶ ನೀಡಬೇಕೆಂಬ ಒತ್ತಾಯ ಇತ್ತು.

ಒಬ್ಬರಿಗೆ ಒಂದು ಜವಾಬ್ದಾರಿ ನೀಡಿದ್ದರೆ ಸಾಕಿತ್ತು?:ಒಂದು ಜವಾಬ್ದಾರಿಯುತ ಹೊಣೆಗಾರಿಕೆ ನಿಭಾಯಿಸುತ್ತಿರುವ ಅವರ ಬದಲು ಬೇರೊಬ್ಬರನ್ನು ವಿಧಾನ ಪರಿಷತ್​ಗೆ ಆಯ್ಕೆ ಮಾಡಬೇಕಿತ್ತು ಎಂಬ ಮಾತು ಕೇಳಿಬಂದಿತ್ತು. ಆದರೆ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಅಬ್ದುಲ್ ಜಬ್ಬಾರ್ ಸುಲಭವಾಗಿ ಎಮ್ಮೆಲ್ಸಿ ಆಗಿಬಿಟ್ಟರು.

ಅಬ್ದುಲ್ ಜಬ್ಬಾರ್ ಪ್ರಸ್ತುತ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಾವಣಗೆರೆ ಜಿಲ್ಲಾಧ್ಯಕ್ಷರಾಗಿದ್ದರು, ಸಿದ್ದರಾಮಯ್ಯ ಅವಧಿಯಲ್ಲಿ ಎಂಎಲ್​ಸಿಯಾಗಿದ್ದರು, ಅಲ್ಪ ಸಂಖ್ಯಾತ ಜನಪ್ರತಿನಿಧಿಗಳೆಲ್ಲರ ಒಕ್ಕೊರಲ ಶಿಫಾರಸು ಇವರಿಗೆ ಲಭಿಸಿದ ಹಿನ್ನೆಲೆ ಪರಿಷತ್​ಗೆ ಆಯ್ಕೆಯಾಗಿದ್ದಾರೆ. ಅಬ್ದುಲ್ ಜಬ್ಬಾರ್​ಗೆ ಟಿಕೆಟ್ ನೀಡಿದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಒಂದಿಷ್ಟು ಆಕ್ರೋಶ ವ್ಯಕ್ತವಾಗಿತ್ತು.

ಹಿಂದೆ ಕೊಟ್ಟವರಿಗೆ ಮತ್ತೆ ಅವಕಾಶ:ಹಿಂದೆ ಕೊಟ್ಟವರಿಗೆ ಮತ್ತೆ ಟಿಕೆಟ್ ನೀಡಿದ್ದಾರೆ. ನಿಜವಾದ ಕಾರ್ಯಕರ್ತರಿಗೆ ಅನ್ಯಾಯವಾಗಿದೆ. ತಳಮಟ್ಟದ ಕಾರ್ಯಕರ್ತರಿಗೆ ಪಕ್ಷದಲ್ಲಿ ಬೆಲೆ ಇಲ್ಲ. ಇದು ಮತ್ತೊಮ್ಮೆ ಸಾಬೀತಾಗಿದೆ. ಸಲೀಂ ಅಹ್ಮದ್, ನಜೀರ್ ಅಹ್ಮದ್, ನಾಸೀರ್ ಹುಸೇನ್ ಇವರೆಲ್ಲರೂ ಮುಸ್ಲಿಂ ನಾಯಕರೇ ಅಲ್ವೇ? ಮತ್ತೆ ಅವರಿಗೇ ಟಿಕೆಟ್ ನೀಡುವುದು ಯಾವ ನ್ಯಾಯ? ಎಂದು ಸಾಮಾಜಿಕ ಜಾಲತಾಣದ ಮೂಲಕ ಕೆಲ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೀಗ ಎರಡು ಹುದ್ದೆ ಒಬ್ಬರಿಗೇ ನೀಡುವ ಬದಲು ಪಕ್ಷ ಕಟ್ಟುವ ಶಕ್ತಿ ಇರುವ ಯುವ ಸಮುದಾಯದ ನಾಯಕರಿಗೆ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನ ನೀಡಿ ಎನ್ನುವ ಒತ್ತಡ ಕೇಳಿಬರುತ್ತಿದೆ. ಆದರೆ ಇರುವವರೇ ಮುಂದುವರಿಯಲಿ ಎನ್ನುವ ಮಾತು ಸಹ ಇದೆ.

ತೆರೆ ಮರೆ ಕಸರತ್ತು:ಆದರೆ, ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಅಬ್ದುಲ್ ಜಬ್ಬಾರ್ ಬದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವ ಪ್ರಭಾವಿ ಮುಸಲ್ಮಾನ್ ಇಲ್ಲವೇ ಕ್ರಿಶ್ಚಿಯನ್ ಸಮುದಾಯದ ನಾಯಕರೊಬ್ಬರಿಗೆ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನ ನೀಡುವ ತೆರೆಮರೆಯ ಕಸರತ್ತು ನಡೆದಿದೆ.

ಈ ಸಂಬಂಧ ಕೆಪಿಸಿಸಿ ಅಧ್ಯಕ್ಷರ ಮೇಲೆ ಕೆಲ ನಾಯಕರು ಒತ್ತಡ ಹೇರುತ್ತಿದ್ದಾರೆ ಎಂಬ ಮಾತಿದೆ. ಸದ್ಯ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆಯಲ್ಲಿ ತೊಡಗಿಕೊಂಡಿರುವ ಅಧ್ಯಕ್ಷರು ಇದು ರಾಜ್ಯದಲ್ಲಿ ತನ್ನ ಪಾದಯಾತ್ರೆ ಪೂರೈಸಿದ ಬಳಿಕ ಅಲ್ಪಸಂಖ್ಯಾತ ಸಮುದಾಯದ ನಾಯಕರ ಜತೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಬದಲಾವಣೆ ಅನಗತ್ಯ:ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಅವರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಕ್ಕೆ ರಾಜೀನಾಮೆ ನೀಡಬೇಕೆಂದೇನೂ ಇಲ್ಲ. ಅಲ್ಲದೇ ಈ ವಿಚಾರವಾಗಿ ಪಕ್ಷದ ಅಧ್ಯಕ್ಷರ ಮೇಲೆ ಇದುವರೆಗೂ ಯಾರೂ ಒತ್ತಡ ತಂದಿಲ್ಲ. ಚುನಾವಣೆ ಸಮೀಪಿಸುತ್ತಿದೆ. ಹೊಸಬರಿಗೆ ಹೊಸ ಜವಾಬ್ದಾರಿ ನೀಡಲಾಗುತ್ತಿದೆ.

ಹಾಗಂತ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಬದಲಾವಣೆ ಮಾಡುವ ಸಾಧ್ಯತೆ ಬಹಳ ಕಡಿಮೆ. ಅಬ್ದುಲ್ ಜಬ್ಬಾರ್ ಪಕ್ಷ ಕಟ್ಟುವ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲಾ ನಾಯಕರ ಮೆಚ್ಚುಗೆ ಇವರ ಮೇಲಿದೆ. ಬದಲಾಯಿಸಬೇಕೆಂಬ ಒತ್ತಡ ಸಹ ಇಲ್ಲ ಎಂದು ಕಾಂಗ್ರೆಸ್ ಹಿರಿಯ ಶಾಸಕ ಎನ್.ಎ. ಹ್ಯಾರಿಸ್ ಅವರು 'ಈಟಿವಿ ಭಾರತ್' ಗೆ ತಿಳಿಸಿದ್ದಾರೆ.

ಇದನ್ನೂ ಓದಿ:ವಾಲ್ಮೀಕಿ ಜಯಂತಿ ದಿನ ರಾಹುಲ್ ಗಾಂಧಿಯಿಂದ ವಾಲ್ಮೀಕಿಗೆ ಅಪಮಾನ: ಬಿ ಸಿ ನಾಗೇಶ್

ABOUT THE AUTHOR

...view details