ಬೆಂಗಳೂರು : ಕರ್ನಾಟಕ ರಾಜ್ಯ ಹುಲಿಗಳ ಸಂತತಿಯ ಸಂಖ್ಯೆಯಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಹೀಗಾಗಿ ವ್ಯಾಘ್ರಗಳಿಗೆ ಕರುನಾಡು ನೆಚ್ಚಿನ ತಾಣವೆನ್ನಬಹುದು. ರಾಜ್ಯದಲ್ಲಿ ಹುಲಿಗಳ ಸಂಖ್ಯೆ 600ರ ಗಡಿ ದಾಟಲಿದೆ ಎಂದು ಅರಣ್ಯ ಇಲಾಖೆ ಅಂದಾಜಿಸಿದೆ. ಈ ಶುಭಸುದ್ದಿಯ ನಡುವೆ ಹುಲಿ ಮರಣ ಪ್ರಮಾಣದ ಹೆಚ್ಚಳದ ಕಹಿಯೂ ಇದರೊಳಗೆ ಅಡಗಿದೆ.
2022ರ ಹುಲಿ ಗಣತಿ ಪ್ರಕಾರ, ಹುಲಿಗಳ ಸಂಖ್ಯೆಯಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲೂ ಹುಲಿಗಳ ಸಂಖ್ಯೆ ಪ್ರತಿವರ್ಷ ಏರಿಕೆ ಕಾಣುತ್ತಿದೆ. ಅರಣ್ಯ ಇಲಾಖೆ ಕೈಗೊಂಡಿರುವ ಸಂರಕ್ಷಣಾ ಕ್ರಮಗಳಿಂದ ಇದು ಸಾಧ್ಯವಾಗಿದೆ.
ಹುಲಿ ಗಣತಿಯ ಐದನೇ ಆವೃತ್ತಿಯ ಅಂದಾಜಿನಿಂದ ಸಂಗ್ರಹಿಸಿದ ಗಣತಿಯ ಸವಿಸ್ತಾರ ಪರಾಮರ್ಶೆಯ ಬಳಿಕ ಪರಿಷ್ಕೃತ ಅಂಕಿ-ಅಂಶದಂತೆ ರಾಜ್ಯವು 563 ಹುಲಿಗಳಿಗೆ ಆಶ್ರಯ ತಾಣವಾಗಿದೆ. ಮಧ್ಯಪ್ರದೇಶದಲ್ಲಿ 785 ಹುಲಿಗಳಿವೆ. ಗಣತಿಯ ಅಂತಿಮ ವರದಿ ಬಿಡುಗಡೆಯಾಗುವ ವೇಳೆ ರಾಜ್ಯದಲ್ಲಿ ಈ ಸಂಖ್ಯೆ 600ರ ಗಡಿ ದಾಟುವ ವಿಶ್ವಾಸ ಅರಣ್ಯ ಇಲಾಖೆ ಅಧಿಕಾರಿಗಳದ್ದು. ರಾಜ್ಯದಲ್ಲೀಗ ಸುಮಾರು 44,000 ಚ.ಕಿ.ಮೀ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶವಿದೆ.
ಕರ್ನಾಟಕದ ಎಲ್ಲೆಲ್ಲಿ, ಎಷ್ಟು ಹುಲಿ?: ರಾಜ್ಯದಲ್ಲಿ 5 ಪ್ರಮುಖ ಹುಲಿ ಮೀಸಲು ಅಭಯಾರಣ್ಯಗಳಿವೆ. ನಾಗರಹೊಳೆ, ಬಂಡೀಪುರ, ಕಾಳಿ, ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನ ಮತ್ತು ಭದ್ರ ಮೀಸಲು ಅಭಯಾರಣ್ಯ. ಈ ಎಲ್ಲ ಅಭಯಾರಣ್ಯಗಳಲ್ಲಿಯೂ ಹುಲಿ ಸಂಖ್ಯೆ ಹೆಚ್ಚಾಗಿದೆ. ಗಣತಿಯಂತೆ, ಬಂಡೀಪುರದಲ್ಲಿ ಅತಿ ಹೆಚ್ಚು 150 ಹುಲಿಗಳಿವೆ. ನಾಗರಹೊಳೆಯಲ್ಲಿ 141, ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನ ಮೀಸಲು ಅಭಯಾರಣ್ಯದಲ್ಲಿ 37, ಭದ್ರ ಮೀಸಲು ಅಭಯಾರಣ್ಯದಲ್ಲಿ 28 ಹಾಗೂ ಕಾಳಿ ಮೀಸಲು ಅಭಯಾರಣ್ಯದಲ್ಲಿ 17 ಹುಲಿಗಳು ಪತ್ತೆಯಾಗಿವೆ.
ನಾಲ್ಕು ವರ್ಷಕ್ಕೊಮ್ಮೆ ಹುಲಿ ಗಣತಿ: ಪ್ರತಿ 4 ವರ್ಷಗಳಿಗೊಮ್ಮೆ ಹುಲಿ ಗಣತಿ ಮಾಡಲಾಗುತ್ತದೆ. 2006ರ ಗಣತಿಯಲ್ಲಿ ರಾಜ್ಯದಲ್ಲಿ ಒಟ್ಟು 290 ಹುಲಿಗಳಿದ್ದವು. 2010ರಲ್ಲಿ ರಾಜ್ಯದ ಅಭಯಾರಣ್ಯಗಳಲ್ಲಿ 300 ಹುಲಿಗಳು ಕಂಡು ಬಂದಿವೆ. 2014ರ ಗಣತಿಯಂತೆ ರಾಜ್ಯದಲ್ಲಿ ಒಟ್ಟು 406 ಹುಲಿಗಳಿದ್ದವು. ಅಂದರೆ ನಾಲ್ಕು ವರ್ಷಗಳಲ್ಲಿ ಹುಲಿಗಳ ಸಂಖ್ಯೆ 106 ಏರಿಕೆಯಾಗಿತ್ತು.
2018ರಲ್ಲಿ ರಾಜ್ಯದ ಹುಲಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿದ್ದು, ಒಟ್ಟು 524 ಹುಲಿಗಳಿದ್ದವು. ಅದೇ ಈಗಿನ ಹುಲಿ ಗಣತಿಯ ಪರಿಷ್ಕೃತ ವರದಿಯಲ್ಲಿ ರಾಜ್ಯದ ಹುಲಿ ಸಂಖ್ಯೆ 563ಕ್ಕೆ ಏರಿಕೆ ಕಂಡಿದೆ. ಆ ಮೂಲಕ ದೇಶದ ಎರಡನೇ ಹುಲಿ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ಹುಲಿ ಸಂಖ್ಯೆಯ ಏರಿಕೆಯಲ್ಲಿ ಭಾರಿ ಕುಸಿತ ಕಂಡು ಬಂದಿರುವುದು ಅಚ್ಚರಿ ಮೂಡಿಸಿದೆ.
ನಾಲ್ಕು ವರ್ಷಗಳಲ್ಲಿ ಕೇವಲ 39 ಹುಲಿ ಹೆಚ್ಚಳ? : 2018ಕ್ಕೆ ಹೋಲಿಸಿದರೆ 2022ರ ಗಣತಿಯಲ್ಲಿ ರಾಜ್ಯದಲ್ಲಿ ಕೇವಲ 39 ಹುಲಿಗಳಷ್ಟೇ ಏರಿಕೆಯಾಗಿದೆ. 2014 ಹಾಗೂ 2018ರ ಗಣತಿಯಲ್ಲಿ ರಾಜ್ಯದಲ್ಲಿ ಗಣನೀಯವಾಗಿ ಹುಲಿ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. 2014ರ ಗಣತಿಯಲ್ಲಿ 106ರಷ್ಟು ಹುಲಿ ಸಂಖ್ಯೆ ಏರಿಕೆಯಾಗಿದ್ದರೆ, 2018ರಲ್ಲಿ 118 ವ್ಯಾಘ್ರಗಳ ಸಂಖ್ಯೆ ಅಧಿಕವಾಗಿತ್ತು. ಆದರೆ, 2022ರ ಗಣತಿಯಲ್ಲಿ, ಕಳೆದ ಬಾರಿಯ ಗಣತಿಗೆ ಹೋಲಿಸಿದರೆ ಕೇವಲ 39 ಹುಲಿಗಳು ಹೆಚ್ಚಳವಾಗಿರುವುದು ಹಲವು ಪ್ರಶ್ನೆಗಳು ಮೂಡುವಂತಿದೆ. ಅಂದರೆ ಕಳೆದ ನಾಲ್ಕು ವರ್ಷದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಹುಲಿ ಸಂಖ್ಯೆ ಹೆಚ್ಚಳವಾಗಿರುವುದು ಗೋಚರವಾಗುತ್ತಿದೆ. ಆದರೆ, ಅರಣ್ಯ ಅಧಿಕಾರಿಗಳು ಹೇಳುವ ಪ್ರಕಾರ, ಇನ್ನು ಎರಡು ತಿಂಗಳಲ್ಲಿ ಬಿಡುಗಡೆಯಾಗಲಿರುವ ಅಂತಿಮ ಗಣತಿ ವರದಿಯಲ್ಲಿ ರಾಜ್ಯದ ಹುಲಿ ಸಂಖ್ಯೆ 600ರ ಗಡಿ ದಾಟಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹುಲಿಗಳ ಮರಣ ಪ್ರಮಾಣ ಹೆಚ್ಚಳ: ರಾಜ್ಯದ ಐದು ಹುಲಿ ಮೀಸಲು ಅಭಯಾರಣ್ಯದಲ್ಲಿ ಹುಲಿಗಳ ಮರಣ ಪ್ರಮಾಣವೂ ಆತಂಕಕ್ಕೆ ಕಾರಣವಾಗಿದೆ. ಕರ್ನಾಟಕ ಅರಣ್ಯ ಇಲಾಖೆ ವರದಿ ಪ್ರಕಾರ 2018ರಿಂದ 2023ರ ವರೆಗೆ 5 ಅಭಯಾರಣ್ಯಗಳಲ್ಲಿ ಅಂದಾಜು 54 ಹುಲಿಗಳು ಸಾವನ್ನಪ್ಪಿವೆ. 2018-2019ರಲ್ಲಿ 7 ಹುಲಿಗಳು ಅಸುನೀಗಿದ್ದರೆ, 2019-20ರಲ್ಲೂ 7 ವ್ಯಾಘ್ರಗಳು ಸಾವಿಗೀಡಾಗಿವೆ.
ಇದನ್ನೂ ಓದಿ :Tiger: ರಾಜಸ್ಥಾನದ ಹುಲಿ ಮರಿಗೆ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತೆ ಅವನಿ ಲೇಖರಾ ಹೆಸರು ನಾಮಕರಣ
2020-21ರಲ್ಲಿ ರಾಜ್ಯದಲ್ಲಿ ಒಟ್ಟು 9 ಹುಲಿಗಳು, 2021-22ರಲ್ಲಿ ಒಟ್ಟು 18 ಹುಲಿಗಳು ಸಾವಿಗೀಡಾಗಿದ್ದವು. 2022-23ರಲ್ಲಿ ಸುಮಾರು 13 ಹುಲಿಗಳು ಸತ್ತಿರುವ ವರದಿಯಾಗಿವೆ. ಈ ವರ್ಷ ಈವರೆಗೆ 8 ಹುಲಿಗಳು ಸಾವಿಗೀಡಾಗಿವೆ. ಸಾವಿಗೆ ಸೋಂಕು, ವಯೋಸಹಜ ಅನಾರೋಗ್ಯ ಕಾರಣವಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಮಾನವ ಸಂಘರ್ಷದಿಂದ ಕಳೆದ ಮೂರು ನಾಲ್ಕು ವರ್ಷದಿಂದ ಯಾವುದೇ ಹುಲಿಗಳ ಹತ್ಯೆಯಾಗಿಲ್ಲ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.
ಹುಲಿ ಯೋಜನೆಯ (Project Tiger) ಪಾತ್ರವೇನು? : ರಾಜ್ಯದಲ್ಲಿ ಕೇಂದ್ರ ಪುರಸ್ಕೃತ ಹುಲಿ ಯೋಜನೆಯು 1973ರಿಂದ ಅನುಷ್ಠಾನಗೊಳಿಸಲಾಗುತ್ತಿದೆ. 5 ಅಭಯಾರಣ್ಯದಲ್ಲಿ ಹುಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಹುಲಿ ಸಂರಕ್ಷಿತ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ತನ್ನ ಪಾಲು 60% ಒದಗಿಸುತ್ತಿದ್ದು, ರಾಜ್ಯ ಸರ್ಕಾರ 40% ಪಾಲು ಆರ್ಥಿಕ ನೆರವು ನೀಡುತ್ತಿದೆ. ರಾಜ್ಯದಲ್ಲಿ ಹುಲಿ ಯೋಜನೆಗಳ ಅನುಷ್ಠಾನಕ್ಕಾಗಿ ಅವಶ್ಯವಿರುವ ಅನುದಾನಕ್ಕೆ ರಾಜ್ಯ ಸರ್ಕಾರ ಪ್ರತಿ ಆರ್ಥಿಕ ಸಾಲಿನಲ್ಲಿ ವಾರ್ಷಿಕ ಕ್ರಿಯಾ ಯೋಜನೆಯನ್ನು ತಯಾರಿಸಿ ಕೇಂದ್ರಕ್ಕೆ ಸಲ್ಲಿಸಲಾಗುತ್ತದೆ. ಅದರನ್ವಯ ಕೇಂದ್ರ ಸರ್ಕಾರ ವಾರ್ಷಿಕ ಕ್ರಿಯಾ ಯೋಜನಗಳಿಗೆ ಅನುಮೋದನೆ ನೀಡಿ ಕೇಂದ್ರದ ಪಾಲು 60% ಒದಗಿಸುತ್ತದೆ. ಇತ್ತ ರಾಜ್ಯ ಸರ್ಕಾರ ರಾಜ್ಯದ ಪಾಲು 40% ಆರ್ಥಿಕ ನೆರವು ನೀಡುತ್ತಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ :ಹುಲಿ ಗಣತಿ: ಭಾರತದಲ್ಲಿವೆ 3 ಸಾವಿರಕ್ಕೂ ಹೆಚ್ಚು ಹುಲಿಗಳು.. ಮೊದಲ ಸ್ಥಾನದಲ್ಲಿ ಮಧ್ಯಪ್ರದೇಶ , ಕರ್ನಾಟಕಕ್ಕೆ ಎರಡನೇ ಸ್ಥಾನದ ಪಟ್ಟ!