ಕರ್ನಾಟಕ

karnataka

ETV Bharat / state

ಅಂಗನವಾಡಿ ನೌಕರರ ಬೇಡಿಕೆಗೆ ಸ್ಪಂದಿಸಿದ ಸರ್ಕಾರ; ಹೋರಾಟ ಹಿಂಪಡೆಯಲು ನಿರ್ಧಾರ

ಅಂಗನವಾಡಿ ನೌಕರರ ಹೋರಾಟವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಸಿಐಟಿಯು ಅಧ್ಯಕ್ಷೆ ವರಲಕ್ಷ್ಮಿ ತಿಳಿಸಿದ್ದಾರೆ.

ಅಂಗನವಾಡಿ ನೌಕರರು
ಅಂಗನವಾಡಿ ನೌಕರರು

By

Published : Feb 1, 2023, 9:21 PM IST

ಬೆಂಗಳೂರು: ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗು ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಜನವರಿ 23ರಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ನಗರದ ಫ್ರೀಡಂ ಪಾರ್ಕ್​ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದೀಗ ಪ್ರಮುಖ ಬೇಡಿಕೆಯಾದ, ಸುಪ್ರಿಂ ಕೋರ್ಟ್​ ತೀರ್ಪಿನಂತೆ ಗ್ರಾಚ್ಯುಟಿ ನೀಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಹೋರಾಟ ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಸಿಐಟಿಯು ಅಧ್ಯಕ್ಷೆ ವರಲಕ್ಷ್ಮಿ ತಿಳಿಸಿದ್ದಾರೆ.

ಅಂಗನವಾಡಿಗಳನ್ನು ಅನ್ನದ ಜೊತೆಗೆ ಅಕ್ಷರದ ಕೇಂದ್ರವಾಗಿಸಲು, ಅಂಗನವಾಡಿ ಕೇಂದ್ರಗಳಲ್ಲಿ ಶಾಲಾಪೂರ್ವ ಶಿಕ್ಷಣಕ್ಕೆ ನಿರ್ದಿಷ್ಟ ಸಮಯ ಮೀಸಲಿರಿಸುವುದು, ಶಿಕ್ಷಕಿ ಪದನಾಮ ನೀಡವುದು, ಅಂಗನವಾಡಿಗೆ ಬರುವ ಮಕ್ಕಳಿಗೆ ಸಮವಸ್ತ್ರ, ಶೂ ವಿತರಣೆ ಹಾಗೂ ಅಂಗನವಾಡಿಯಲ್ಲಿ ಓದಿರುವ ಬಗ್ಗೆ ದೃಢೀಕರಣ ಪತ್ರ ನೀಡುವುದು, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸೇವಾ ನಿಯಮಾವಳಿ ರೂಪಿಸಲು, ಮಿನಿ ಅಂಗನವಾಡಿ ಹಾಗೂ ಸಹಾಯಕಿಯರಿಗೆ ಪದೋನ್ನತಿಗೆ ಇರುವ ಆದೇಶ ಮಾರ್ಪಡಿಸುವುದು, ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು, ಅಂಗನವಾಡಿಗೆ ಸ್ವಂತ ಕಟ್ಟಡ ಕಟ್ಟಲು 30 ಲಕ್ಷ ರೂ ಮೀಸಲಿರಿಸುವುದು ಹಾಗೂ ಮೂಲಸೌಕರ್ಯ ಬಲವರ್ಧನೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿ ಕೆಲಸದ ಒತ್ತಡ ಕಡಿಮೆ ಮಾಡುವ ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಕಳೆದ ಹತ್ತು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಕೊರೆಯುವ ಚಳಿಯಲ್ಲಿಯೇ ಮಹಿಳೆಯರು ನಡೆಸಿದ ಈ ಹೋರಾಟ ಇದೀಗ ಫಲ ಕೊಟ್ಟಿದೆ.

ನಾಲ್ಕೈದು ಬಾರಿ ಸರ್ಕಾರದೊಂದಿಗೆ ಮಾತುಕತೆಗಳು ನಡೆದಿದ್ದವು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಂತ್ರಿಗಳು ಹೋರಾಟದ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿದ್ದರು. ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ನಿರ್ದೇಶಕರು, ಜಂಟಿ ನಿರ್ದೇಶಕರು, ಉಪನಿರ್ದೇಶಕರು ಹಾಗೂ ಇತರ ಹಿರಿಯ ಅಧಿಕಾರಿಗಳ ಜೊತೆಗೆ ನಿರ್ದಿಷ್ಟ ವಿಷಯಗಳ ಕುರಿತು ಚರ್ಚೆಗಳು ನಡೆದಿದ್ದವು ಎಂದು ವರಲಕ್ಷ್ಮಿ ಹೇಳಿದ್ದಾರೆ.

ಲಿಖಿತ ಆದೇಶ: ಆದರೆ ಬೇಡಿಕೆ ಈಡೇರಿಕೆಗೆ ಸ್ಪಷ್ಟತೆ ಸಿಗದೇ ಇರುವುದರಿಂದ ಹೋರಾಟವನ್ನು ಮುಂದುವರಿಸುವುದಾಗಿ ಘೋಷಿಸಲಾಗಿತ್ತು. ಮೂಲಸೌಕರ್ಯಗಳ ಕೊರತೆಯ ಮಧ್ಯೆಯೂ ಹೋರಾಟ ತೀವ್ರತೆ ಪಡೆದಿತ್ತು. ಸಿಐಟಿಯು ಹೋರಾಟಕ್ಕೆ ಮಣಿದ ಇಲಾಖೆಯು ಶಾಲಾಪೂರ್ವ ಶಿಕ್ಷಣಕ್ಕಾಗಿ ಬೆಳಿಗ್ಗೆ 10 ರಿಂದ 1 ಗಂಟೆಯ ವರೆಗೆ ನಿರ್ದಿಷ್ಟ ಸಮಯ ಮೀಸಲಿರಿಸಿ ಸ್ಪಷ್ಟ ಆದೇಶವನ್ನು ಲಿಖಿತವಾಗಿ ನೀಡಿದೆ.

ಕಟ್ಟಡ ವೆಚ್ಚ 20 ಲಕ್ಷಕ್ಕೆ ಏರಿಕೆ: ಕಟ್ಟಡದ ವೆಚ್ಚ 12 ಲಕ್ಷದಿಂದ 20 ಲಕ್ಷಕ್ಕೆ ಏರಿಕೆಗೆ ಒಪ್ಪಿಗೆ ನೀಡಲಾಗಿದೆ. ಮಕ್ಕಳಿಗೆ ಶೂ, ಸಮವಸ್ತ್ರ ಹಾಗೂ ಮೂಲಸೌಕರ್ಯ ಹೆಚ್ಚಿಸಲು, ಅಂಗನವಾಡಿಗಳಲ್ಲಿ ಶಾಲಾಪೂರ್ವ ಶಿಕ್ಷಣ ಪಡೆದ ದೃಢೀಕರಣ ಪತ್ರ ನೀಡಲು ಸಮ್ಮತಿ ನೀಡಿದ್ದಾರೆ. ಇಲಾಖೆಯ ಅಧಿಕಾರಿಗಳ ಜೊತೆಗೆ ಮಾತುಕತೆಯ ವೇಳೆಯಲ್ಲಿ ಇನ್ನುಳಿದ ಬೇಡಿಕೆಗಳೊಂದಿಗೆ ರಾಜ್ಯದ ಎಲ್ಲಾ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಪೂರ್ಣ ಆರೋಗ್ಯ ತಪಾಸಣೆ ಇತ್ಯಾದಿ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ದೊರಕಿಸಿಕೊಳ್ಳಲು ಸಾಧ್ಯವಾಗಿದೆ ಎಂದು ವರಲಕ್ಷ್ಮಿ ಹೇಳಿದ್ದಾರೆ.

ಹಣಕಾಸು ಇಲಾಖೆ ಒಪ್ಪಿಗೆ: ಗ್ರಾಚ್ಯುಟಿಗೆ ಸಂಬಂಧಿಸಿದಂತೆ ಇಂದು ಸಲಹೆಯಂತೆ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಸುಪ್ರಿಂ ಕೋರ್ಟಿನ ತೀರ್ಪಿನಂತೆ ಗ್ರಾಚ್ಯುಟಿ ಕಾಯ್ದೆ 1972 ರ ಪ್ರಕಾರ ಉಪಧನ (ಗ್ರಾಚ್ಯುಟಿ) ನೀಡುವ ಕುರಿತು ಮುಖ್ಯಮಂತ್ರಿಗಳ ಅನುಮೋದನೆಯ ಮೇರೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘವು ಕಳೆದ ಹತ್ತು ದಿನಗಳಿಂದ ಹಮ್ಮಿಕೊಂಡಿರುವ ಶಾಂತಿಯುತ ಅನಿರ್ದಿಷ್ಟಾವಧಿ ಹೋರಾಟವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

"ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಂಗನವಾಡಿ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಕಾನೂನಾತ್ಮಕವಾಗಿ ಈಡೇರಿಸಲು ಭರವಸೆ ನೀಡಲಾಗಿದೆ. ಅಂಗನವಾಡಿಗಳು ಈ ಮೊದಲಿನ ವೇಳಾಪಟ್ಟಿಯಂತೆ ಕಾರ್ಯ ನಿರ್ವಹಿಸಲಿದ್ದು, ಅದರಲ್ಲಿ ಬೆಳಿಗ್ಗೆ 10 ಗಂಟೆಯಿಂದ 1 ಗಂಟೆಯವರೆಗೆ ಕೇವಲ ಮಕ್ಕಳ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ಮೀಸಲಿರಿಸಲು ಸಹಮತಿಸಲಾಗಿದೆ" ಎಂದು ಸಚಿವ ಹಾಲಪ್ಪ ಆಚಾರ್‌ ಹೇಳಿದ್ದಾರೆ.

ಇದನ್ನೂ ಓದಿ:'ಪ್ರೋಗ್ರೆಸ್ಸಿವ್ ಬಜೆಟ್, 10/7 ಮಾರ್ಕ್ಸ್‌ ಕೊಡಬಹುದು': ಎಫ್​ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ ರೆಡ್ಡಿ

ABOUT THE AUTHOR

...view details