ಬೆಂಗಳೂರು:ಬಿಬಿಎಂಪಿ ಅಧಿಕಾರಿಗಳು ಹಾಗೂ ಮುಖ್ಯಸ್ಥರ ಸ್ಥಾನಗಳಿಗೆ, ರಾಜಕಾರಣಿಗಳಿಂದ ಶಿಫಾರಸು ಮತ್ತು ಲಾಬಿಗಳು ಮುಂದುವರಿದಿವೆ. ಸದ್ಯ ಕೇಂದ್ರ ಸಚಿವ ಸದಾನಂದಗೌಡರ ಪತ್ರ ಈ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಬಿಬಿಎಂಪಿ ಲೀಗಲ್ ಸೆಲ್ನ ಮುಖ್ಯಸ್ಥರ ಸ್ಥಾನಕ್ಕೆ, ನನ್ನ ಮತಕ್ಷೇತ್ರದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್. ಹೆಚ್. ಹೊಸಗೌಡರ್ ಅವರ ಮನವಿ ಪುರಸ್ಕರಿಸಿ ಎಂದು ಮೇಯರ್ ಗೌತಮ್ ಕುಮಾರ್ಗೆ ಕೇಂದ್ರ ಸಚಿವ ಸದಾನಂದ ಗೌಡರು ಪತ್ರ ಬರೆದಿದ್ದರು.
ಕೇಂದ್ರ ಸಚಿವ ಸದಾನಂದ ಗೌಡರ ಪತ್ರ ಆದರೆ ಹೈಕೋರ್ಟ್ ಸೂಚನೆ ಪ್ರಕಾರ ಜನಪ್ರತಿನಿಧಿಗಳು ಆಡಳಿತ, ವರ್ಗಾವಣೆ ಹಾಗೂ ಶಿಫಾರಸು ಮಾಡುವಂತಿಲ್ಲ. ಇದನ್ನು ಮೀರಿ ಕೇಂದ್ರ ಸಚಿವರು ಪತ್ರವನ್ನ ಬರೆದಿದ್ದಾರೆ. ಜತೆಗೆ ಮೇಯರ್ ಗೌತಮ್ ಕುಮಾರ್ ಕೂಡ ಒಪ್ಪಿಗೆ ಸೂಚಿಸಿದ್ದು, ಕೇಂದ್ರ ಸಚಿವರು ನೀಡಿರುವ ಶಿಫಾರಸು ಪರಿಶೀಲಿಸಿ ಎಂದು ಮತ್ತೊಂದು ಪತ್ರವನ್ನು ಬಿಬಿಎಂಪಿ ಕಮೀಷನರ್ಗೆ ಬರೆದಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೇಯರ್ ಗೌತಮ್ ಕುಮಾರ್, ನನ್ನ ಕ್ಷೇತ್ರದ ಮತದಾರರು ಎಂದು ಉಲ್ಲೇಖ ಮಾಡಿರಲು ಸಾಧ್ಯವಿಲ್ಲ. ಬಿಬಿಎಂಪಿ ಅವಶ್ಯಕತೆ ಆಧಾರದಲ್ಲಿ ಪತ್ರ ನೀಡಿದ್ದಾರೆ. ಇನ್ನು ಈ ಬಗ್ಗೆ ನಿರ್ಧಾರ ಮಾಡೋದು ಆಯುಕ್ತರಿಗೆ ಬಿಟ್ಟ ವಿಚಾರ ಎಂದರು.
ಬಿಬಿಎಂಪಿ ಕಾನೂನು ವಿಭಾಗದ ಮುಖ್ಯಸ್ಥನ ಸ್ಥಾನಕ್ಕೆ ಲಾಬಿ ಈ ಬಗ್ಗೆ ಆಡಳಿತ ಪಕ್ಷ ನಾಯಕ ಮುನೀಂದ್ರ ಕುಮಾರ್ ಮಾತನಾಡಿ, ಸಚಿವರು ಲಾಬಿ ಮಾಡುತ್ತಿಲ್ಲ. ಪಾಲಿಕೆ ಎಷ್ಟೋ ಆಸ್ತಿ ಪ್ರಕರಣಗಳೂ ಇನ್ನು ಕೋರ್ಟ್ನಲ್ಲೇ ಬಾಕಿ ಉಳಿದಿವೆ. ಇದೆಲ್ಲ ಅವರ ಗಮನಕ್ಕೆ ಬಂದಿದೆ. ಹೀಗಾಗಿ ಪಾಲಿಕೆ ಹಿತದೃಷ್ಟಿಯಿಂದ ಈ ಪತ್ರ ನೀಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.