ಬೆಂಗಳೂರು: ಸಂಗೊಳ್ಳಿ ರಾಯಣ್ಣ ಮಹಾ ಸೇನಾನಿ. ಅವರ ಸ್ಮರಣೆ ಮಾಡುವುದು ನಮ್ಮ ಕರ್ತವ್ಯ. ಸುಭಾಷ್ ಚಂದ್ರ ಬೋಸ್ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರವನ್ನು ಪ್ರತಿಯೊಂದು ಸರ್ಕಾರಿ ಶಾಲಾ ಕಾಲೇಜಿನಲ್ಲಿ ಕಡ್ಡಾಯವಾಗಿ ಇಡಬೇಕು ಎಂದು ಇಂದಿನಿಂದಲೇ ಆದೇಶ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ವತಿಯಿಂದ ದೇವರಾಜ ಅರಸು ವೃತ್ತದ (ಖೋಡೆ ಸರ್ಕಲ್) ಬಳಿ ಇಂದು ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 192ನೇ ಸ್ಮರಣೋತ್ಸವದ ನಿಮಿತ್ತ ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮೊದಲ ಸ್ವಾತಂತ್ರ್ಯ ಕಹಳೆಯನ್ನು ಊದಿದ ಮಹಾ ಸೇನಾನಿ ಸಂಗೊಳ್ಳಿ ರಾಯಣ್ಣ. ಸ್ವಾತಂತ್ರ್ಯ ಬಂದ ದಿನ ಅವರು ಹುಟ್ಟಿದ್ದು, ಗಣರಾಜ್ಯೋತ್ಸವದ ದಿನ ಅವರನ್ನು ನೇಣಿಗೆ ಹಾಕಿದ್ದು. ಈ ಎರಡು ದಿನ ಬಹಳ ವಿಶೇಷವಾದ ದಿನ. ರಾಯಣ್ಣನ ಹೆಸರಿನಲ್ಲಿ 184 ಕೋಟಿ ರೂ. ವೆಚ್ಚದಲ್ಲಿ ರೆಸಿಡೆನ್ಸಿಯಲ್ ಶಾಲೆ ಮಾಡಿದ್ದೇವೆ. ಬೆಳಗಾವಿ ಸುವರ್ಣಸೌಧದಲ್ಲಿ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದೆ ಎಂದರು.
ಆ ಧೈರ್ಯ, ಶೌರ್ಯ, ವೀರಾವೇಷ ಎಂಬುದು ರಾಯಣ್ಣನಿಗೆ ಹುಟ್ಟಿನಿಂದಲೇ ಬಂದಿರುವಂಥದ್ದು. ಕಿತ್ತೂರು ರಾಣಿ ಚೆನ್ನಮ್ಮ ಅವರಿಗೆ ಬ್ರಿಟಿಷರು ಕಪ್ಪ ಕೊಡಬೇಕು ಎಂದಾಗ, ನಾವು ಯಾವುದೇ ಕಪ್ಪ ಕೊಡುವುದಿಲ್ಲ. ದೇಶ ಬಿಟ್ಟು ತೊಲಗಿ ಎಂದಿದ್ದರು. ರಾಣಿ ಚೆನ್ನಮ್ಮನವರಿಗೆ ಬೆಂಬಲವಾಗಿ ನಿಂತಿದ್ದವರು ಸಂಗೊಳ್ಳಿ ರಾಯಣ್ಣ ಮತ್ತು ಬಾಳಪ್ಪ. ಮೋಸದಿಂದ ಸೋತ ಸಮಯದಲ್ಲಿ ಸಂಗೊಳ್ಳಿ ರಾಯಣ್ಣ ಹಳ್ಳಿಗಳಲ್ಲಿ ಸಂಘಟನೆ ಮಾಡಿ ಬ್ರಿಟಿಷರನ್ನು ಹೆದರಿಸಿದ್ದರು ಎಂದು ಹೇಳಿದರು.
ಸಂಗೊಳ್ಳಿ ರಾಯಣ್ಣ ಪ್ರತಿ ಮನೆಯಲ್ಲೂ ಹುಟ್ಟಬೇಕು. ಅವರ ಸಾಹಸ ದಕ್ಷತೆ ಗಾಂಭೀರ್ಯತೆ, ಅವರ ಹೋರಾಟದ ಹಾದಿಯನ್ನು ನಮ್ಮ ಮಕ್ಕಳಿಗೆ, ಮುಂದಿನ ಪೀಳಿಗೆಗೆ ಹೇಳಬೇಕು. ರಾಯಣ್ಣ ಸತ್ತಿಲ್ಲ ಇಂದಿಗೂ ಕೂಡ ನಮ್ಮ ಜೊತೆಯಲ್ಲಿದ್ದಾರೆ. ಅವರ ಧೈರ್ಯ, ಆದರ್ಶ, ತತ್ವ ಸಿದ್ಧಾಂತ ನಮ್ಮ ಜೊತೆಯಲ್ಲಿದೆ. ಸಂಗೊಳ್ಳಿ ರಾಯಣ್ಣ ವಿಶೇಷವಾಗಿ ಆಶೀರ್ವಾದದಿಂದ ಹುಟ್ಟಿದವರು. ಕೆಚ್ಚೆದೆ ಧೈರ್ಯ, ದೇಶಭಕ್ತಿ ಒಬ್ಬರಲ್ಲಿ ಇರಬೇಕಾದರೇ ದೇವರ ಆಶೀರ್ವಾದ ಬಹಳ ಮುಖ್ಯ.
ರಾಯಣ್ಣನನ್ನು ಮೋಸದಿಂದ ಗಲ್ಲಿಗೇರಿಸಿದರು:ಬಡತನದಲ್ಲಿ ಹುಟ್ಟಿದರೂ ಸಂಗೊಳ್ಳಿ ರಾಯಣ್ಣ ಸ್ವಾವಲಂಬಿಯಾಗಿ ಜೀವಿಸಿದ್ದರು. ಭಯ ಮುಕ್ತವಾಗಿ ಬದುಕು ನಡೆಸಿದವರು ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮ ಕಿಚ್ಚಿಗೆ ಸಂಪೂರ್ಣವಾಗಿ ಬೆಂಬಲಕ್ಕೆ ನಿಂತರು. ರಾಜ ಮನೆತನದಲ್ಲಿ ಬ್ರಿಟಿಷರನ್ನು ಎದುರಿಸಬೇಕಾದರೇ ಕಷ್ಟ ಸಾಧ್ಯ. ಆದರೂ ಸೈನ್ಯವನ್ನು ಕಟ್ಟಿ ಬ್ರಿಟಿಷ್ ಸಾಮ್ರಾಜ್ಯವನ್ನು ಎದುರಿಸಿ ಕಿತ್ತೂರು ಯುದ್ಧ ಗೆದ್ದರು.
ದೇಶದಲ್ಲಿ ಬ್ರಿಟಿಷರನ್ನು ಅತ್ಯಂತ ಯಶಸ್ವಿಯಾಗಿ ಎದುರಿಸಿದವರು ಇಬ್ಬರೇ. ಒಬ್ಬರು ಸಂಗೊಳ್ಳಿ ರಾಯಣ್ಣ, ಇನ್ನೊಬ್ಬರು ಛತ್ರಪತಿ ಶಿವಾಜಿ. ರಾಯಣ್ಣ ಅವರನ್ನು ಮೋಸದಿಂದ ನೇಣಿಗೆ ಏರಿಸಿದರು. ಸಾಧಕನಿಗೆ ಸಾವು ಇಲ್ಲ. ಸಾವಿನ ನಂತರವೂ ಸಾಧನೆ ಅಜರಾಮರವಾಗಿರುತ್ತದೆ ಎಂದು ವಿವೇಕಾನಂದ ಅವರು ಹೇಳಿದ್ದಾರೆ ಎಂದರು.