ಬೆಂಗಳೂರು :ಹೈಕೋರ್ಟ್ನ ಮಧ್ಯಂತರ ಆದೇಶವು ಕಾಲೇಜು ಅಭಿವೃದ್ಧಿ ಸಮಿತಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಕೋರ್ಟ್ ಬಹಳ ಸ್ಪಷ್ಟವಾಗಿ ಹೇಳಿದೆ. ಈ ನಿಟ್ಟಿನಲ್ಲಿ ಆದೇಶವು ಯಾವುದೇ ಹೈಸ್ಕೂಲ್ಗಳಿಗೆ ಅನ್ವಯಿಸುವುದಿಲ್ಲ.
ಆದರೆ, ಇದೇ ಆದೇಶವನ್ನು ದುರ್ಬಳಕೆ ಮಾಡಿಕೊಂಡು ರಾಜ್ಯದ ಹಲವು ಹೈಸ್ಕೂಲ್‌ಗಳಲ್ಲಿ ಸ್ಕಾರ್ಫ್, ಬುರ್ಕಾ ಕಳಚಲು ಬಲವಂತಪಡಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರನ್ನು ಅವಮಾನಿಸುತ್ತಿದ್ದಾರೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜಾಧ್ಯಕ್ಷ ಯಾಸಿರ್ ಹಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಧ್ವಜ ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಾಜ್ಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜಾಧ್ಯಕ್ಷ ಯಾಸಿರ್ ಹಸನ್ ಅವರು, ಸರ್ಕಾರದ ಅಣತಿಯಂತೆ ಶಾಲಾ ಶಿಕ್ಷಕಿಯರು ಮತ್ತು ಆಡಳಿತ ಮಂಡಳಿ ಸದಸ್ಯರು ಅಮಾನವೀಯ ವರ್ತನೆ ತೋರುತ್ತಿದ್ದಾರೆ.
ಸರ್ಕಾರವು ಕೋರ್ಟ್ ಆದೇಶ ದುರ್ಬಳಕೆ ಮಾಡಿಕೊಂಡು ಗೊಂದಲ ಸೃಷ್ಟಿಸುವುದನ್ನು ಮತ್ತು ರಾಜಕೀಯ ಲಾಭ ಪಡೆಯುವುದನ್ನು ಕೂಡಲೇ ನಿಲ್ಲಿಸಬೇಕು. ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರನ್ನು ಅಮಾನವೀಯವಾಗಿ ನಡೆಸಿಕೊಂಡು ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ನ್ಯಾಯಾಂಗ ನಿಂದನೆ ಮಾಡಿದ ಶಿಕ್ಷಕರ ವಿರುದ್ಧ ಕೂಡಲೇ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮುಸ್ಲಿಂ ಸಮುದಾಯ ಮತ್ತು ಪ್ರಜ್ಞಾವಂತ ನಾಗರಿಕ ಸಮಾಜವು ಈ ರೀತಿಯ ದುರ್ವರ್ತನೆಗಳ ಬಗ್ಗೆ ಪ್ರಬಲವಾಗಿ ಧ್ವನಿ ಎತ್ತಬೇಕು. ಶಾಲೆಗಳಲ್ಲಿ ಇಂತಹ ಅನಾಗರಿಕ ವರ್ತನೆಗಳು ಮುಂದುವರಿದರೆ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಹಸನ್ ಎಚ್ಚರಿಸಿದ್ದಾರೆ.
ಓದಿ:ಮತೀಯ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು : ಸಚಿವ ಆರಗ ಜ್ಞಾನೇಂದ್ರ