ಬೆಂಗಳೂರು: ಬಿಜೆಪಿ ಹೈಕಮಾಂಡ್ ಪ್ರತಿನಿಧಿಗಳಾಗಿ ಇಬ್ಬರು ವೀಕ್ಷಕರು ರಾಜ್ಯಕ್ಕೆ ಆಗಮಿಸಿದ್ದು, ಪ್ರತಿಪಕ್ಷ ನಾಯಕ ಹಾಗೂ ನೂತನ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಪಕ್ಷದ ರಾಜ್ಯ ನಾಯಕರು ಮತ್ತು ಶಾಸಕರಿಂದ ಅಭಿಪ್ರಾಯ ಸಂಗ್ರಹ ಆರಂಭಿಸಿದ್ದಾರೆ. ಸದನದ ಒಳಗೆ ಮತ್ತು ಹೊರಗಡೆ ಬಿಜೆಪಿ ಹೋರಾಟ ನಡೆಸುತ್ತಿರುವ ನಡುವೆಯೇ ಆಯ್ದ ನಾಯಕರು ಪಕ್ಷದ ಕಚೇರಿಗೆ ಆಗಮಿಸಿ ಅಭಿಪ್ರಾಯ ತಿಳಿಸುತ್ತಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ಆಗಮಿಸಿದ್ದಾರೆ. ಹೈಕಮಾಂಡ್ ವೀಕ್ಷಕರಾಗಿ ಇಬ್ಬರು ನಾಯಕರು ಆಗಮಿಸಿದ್ದು ಮಧ್ಯಾಹ್ನದಿಂದಲೇ ಪಕ್ಷದ ನಾಯಕರು ಮತ್ತು ಶಾಸಕರನ್ನು ಒಬ್ಬೊಬ್ಬರನ್ನಾಗಿ ಕರೆಸಿಕೊಂಡು ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ.
ವಿಧಾನಸಭೆ ಪ್ರತಿಪಕ್ಷ ನಾಯಕ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಹಾಗೂ ನೂತನ ರಾಜ್ಯಾಧ್ಯಕ್ಷರ ಆಯ್ಕೆಯಾಗಬೇಕಿದ್ದು, ಈ ಸಂಬಂಧ ಪಕ್ಷದ ಪ್ರಮುಖರು, ಶಾಸಕರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಶಾಸಕರು, ಪರಿಷತ್ ಸದಸ್ಯರು, ಪಕ್ಷದ ನಾಯಕರಿಂದ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹ ಕಾರ್ಯ ನಡೆಯುತ್ತಿದ್ದು, ಒಬ್ಬೊಬ್ಬರೇ ಬಿಜೆಪಿ ಕಚೇರಿಗೆ ಬಂದು ಅಭಿಪ್ರಾಯ ತಿಳಿಸಿ ಹೋಗುತ್ತಿದ್ದಾರೆ.
ಸಂಸದರಾದ ಡಿವಿ ಸದಾನಂದಗೌಡ, ಪಿ.ಸಿ ಮೋಹನ್, ಶಾಸಕರಾದ ಡಾ.ಅಶ್ವತ್ಥ ನಾರಾಯಣ್, ಬೈರತಿ ಬಸವರಾಜ್, ಎಸ್.ಟಿ ಸೋಮಶೇಖರ್, ಮುನಿರತ್ನ, ಶಿವರಾಮ್ ಹೆಬ್ಬಾರ್, ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ಕೆ. ಗೋಪಾಲಯ್ಯ ಸೇರಿದಂತೆ ಹಲವರು ಪಕ್ಷದ ಕಚೇರಿಗೆ ಆಗಮಿಸಿ ತಮ್ಮ ಅಭಿಪ್ರಾಯವನ್ನು ವೀಕ್ಷಕರಿಗೆ ತಿಳಿಸಿದ್ದಾರೆ. ಬಿಜೆಪಿ ಪ್ರತಿಭಟನೆ ಸಂಜೆ 5 ಗಂಟೆಗೆ ಮುಗಿಯಲಿದ್ದು, ನಂತರ ಪಕ್ಷದ ಇತರ ನಾಯಕರು ಹಾಗೂ ಇಂದಿನ ಕಲಾಪ ಮುಕ್ತಾಯದ ನಂತರ ಉಳಿದ ಶಾಸಕರು ಪಕ್ಷದ ಕಚೇರಿಗೆ ಆಗಮಿಸಿ ತಮ್ಮ ಅಭಿಪ್ರಾಯ ತಿಳಿಸಲಿದ್ದಾರೆ.
ನಾಳೆ ಹೊಸ ನಾಯಕರ ಆಯ್ಕೆ ಸಾಧ್ಯತೆ:ಶಾಸಕರು, ಸಂಸದರು, ಪರಿಷತ್ ಸದಸ್ಯರು ಮತ್ತು ಕೋರ್ ಕಮಿಟಿ ಸದಸ್ಯರ ಅಭಿಪ್ರಾಯ, ರಾಜ್ಯ ಘಟಕದ ಅಭಿಪ್ರಾಯ ಆಲಿಸಿದ ನಂತರ ಹೈಕಮಾಂಡ್ಗೆ ವೀಕ್ಷಕರು ವರದಿ ಸಲ್ಲಿಕೆ ಮಾಡಲಿದ್ದು, ಅದರಂತೆ ಹೈಕಮಾಂಡ್ ನಾಳೆ ಉಭಯ ಸದನಗಳಿಗೂ ಪ್ರತಿಪಕ್ಷ ನಾಯಕರ ಆಯ್ಕೆ ಮಾಡಿ ಹೆಸರು ಪ್ರಕಟಿಸಲಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಂತರ ಹೆಸರು ಪ್ರಕಟಿಸಲಿದೆ.