ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ವಿವಿಧ ರಾಜಕೀಯ ನಾಯಕರಿಂದ ವೋಟಿಂಗ್ - ಈಟಿವಿ ಭಾರತ ಕನ್ನಡ

ಬೆಂಗಳೂರಲ್ಲಿ ಅಭ್ಯರ್ಥಿಗಳು ಸೇರಿದಂತೆ ರಾಜಕೀಯ ನಾಯಕರಾದ ತಮ್ಮ ಮತ ಕ್ಷೇತ್ರಗಳಲ್ಲಿ ಮತದಾನ ಮಾಡಿದ್ದಾರೆ.

ರಾಜಕೀಯ ನಾಯಕರ ಮತ ಚಲಾವಣೆ
ರಾಜಕೀಯ ನಾಯಕರ ಮತ ಚಲಾವಣೆ

By

Published : May 10, 2023, 11:45 AM IST

ಬೆಂಗಳೂರು:ಮಾಜಿ ಸಚಿವ ರಾಮಲಿಂಗಾರೆಡ್ಡಿ, ಪತ್ನಿ, ಪುತ್ರಿ ಶಾಸಕಿ ಸೌಮ್ಯ ರೆಡ್ಡಿ ಇಂದು ಮತದಾನ ಮಾಡಿದರು. ವಿಲ್ಸನ್ ಗಾರ್ಡನ್‌ನಲ್ಲಿರುವ ಮೇರಿ ಇಮ್ಮಾಕ್ಯುಲೆಟ್ ಕಾನ್ವೆಂಟ್​ನಲ್ಲಿ ಬೆಳಗ್ಗೆ ಕುಟುಂಬ ಸಮೇತರಾಗಿ ಆಗಮಿಸಿ ವೋಟ್ ಹಾಕಿದರು.

ನಂತರ ಮಾತನಾಡಿದ ರಾಮಲಿಂಗಾರೆಡ್ಡಿ, ಮಳೆ ಬರುವ ಕಾರಣಕ್ಕೆ ಮತದಾನ ಬಿರುಸಿನಿಂದ ನಡೆಯುತ್ತಿದೆ. ಬೆಂಗಳೂರಿನಲ್ಲಿ ಶೇ.55 ರಷ್ಟು ಮತದಾನ ಆಗಬಹುದು ಎಂದು ಹೇಳಿದರು. ಚುನಾವಣಾ ಆಯೋಗ ತುಂಬಾ ಅಚ್ಚುಕಟ್ಟಾಗಿ ಮತದಾನಕ್ಕೆ ವ್ಯವಸ್ಥೆ ಮಾಡಿದೆ ಎಂದರು.

ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿ, ಎಲ್ಲರೂ ಮತಗಟ್ಟೆಗೆ ಬಂದು ಮತದಾನ ಮಾಡಬೇಕು. ಅದರಲ್ಲೂ ಮುಖ್ಯವಾಗಿ ಯುವಕರು, ಮಹಿಳೆಯರು ಹೆಚ್ಚು ಮತದಾನ ಮಾಡಿ ಎಂದು ಮನವಿ ಮಾಡಿದರು.

ಮತ ಚಲಾಯಿಸಿದ ಗೋಪಾಲಯ್ಯ:ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಮತದಾನ ಪ್ರಾರಂಭವಾಗಿದ್ದು, ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಕುಟುಂಬ ಸಮೇತರಾಗಿ ತಮ್ಮ ಕ್ಷೇತ್ರದ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮತ ಚಲಾಯಿಸಿದರು. ವೃಷಭಾವತಿ ನಗರದ 102ನೇ ವಾರ್ಡಿನ ಅಮರ ವಾಣಿ ಶಾಲೆಯ ಮತಗಟ್ಟೆಗೆ ಕುಟುಂಬ ಸಮೇತರಾಗಿ ಆಗಮಿಸಿದ್ದರು. ಬಳಿಕ ಮಾತನಾಡಿ, ಕ್ಷೇತ್ರದ ಜನ ನನಗೆ ಅತ್ಯಂತ ಹೆಚ್ಚಿನ ಬಹುಮತದೊಂದಿಗೆ ಮತವನ್ನು ನೀಡುತ್ತಾರೆ ಎಂಬ ಆತ್ಮವಿಶ್ವಾಸ ಇದೆ ಎಂದು ತಿಳಿಸಿದರು.

ತೇಜಸ್ವಿ ಸೂರ್ಯ ಮತದಾನ: ಬಸವನಗುಡಿ ಕ್ಷೇತ್ರ ವ್ಯಾಪ್ತಿಯ ಗಿರಿನಗರದ ವಿಜಯ ಭಾರತಿ ವಿದ್ಯಾಲಯದಲ್ಲಿ ಸಂಸದ ತೇಜಸ್ವಿ ಸೂರ್ಯ ಮತದಾನ ಮಾಡಿದರು. ತಂದೆ ಮತ್ತು ತಾಯಿ ಜೊತೆ ಬಂದು ಮತದಾನ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ಎಲ್ಲರೂ ಬಂದು ಮತದಾನ ಮಾಡಿ. ಪ್ರಜಾಪ್ರಭುತ್ವದಲ್ಲಿ ಚುನಾವಣೆ ದೊಡ್ಡ ಹಬ್ಬ. ಬೆಂಗಳೂರಲ್ಲಿ ಸುಮಾರು 10-12% ಮತದಾನ ಆಗಿದೆ ಎಂಬ ಮಾಹಿತಿ ಬರುತ್ತಿದೆ. ಮತಗಟ್ಟೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಕ್ಯೂ ಕಾಣುತ್ತಿದೆ. ವೃದ್ಧರು ವ್ಹೀಲ್​ಚೇರ್​ನಲ್ಲಿ ಬಂದು ಮತ ಹಾಕುತ್ತಿದ್ದಾರೆ. ವೃದ್ಧರೇ ಬಂದು ಮತ ಹಾಕುತ್ತಿರುವಾಗ, ಯುವಕರು ಮನೆಯಲ್ಲಿ ಕೂರಬಾರದು‌. ಅವರು ಬಂದು ಮತದಾನ ಮಾಡಬೇಕು. ಸುಭದ್ರ ಸರ್ಕಾರಕ್ಕೆ ನಿರ್ಧಾರ ಮಾಡಬೇಕು ಎಂದು ಕರೆ ನೀಡಿದರು.

ಎಸ್.ಟಿ.ಸೋಮಶೇಖರ್ ಮತದಾನ:ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಕುಟುಂಬಸಮೇತರಾಗಿ ಆಗಮಿಸಿ ಮತದಾನ ಮಾಡಿದರು. ಪತ್ನಿ ರಾಧಾ ಸೋಮಶೇಖರ್, ಪುತ್ರ ನಿಶಾಂತ್ ಸೋಮಶೇಖರ್ ಅವರೊಂದಿಗೆ ನಾಗದೇವನಹಳ್ಳಿಯಲ್ಲಿನ ರೋಟರಿ ಬೆಂಗಳೂರು ವಿದ್ಯಾಲಯದಲ್ಲಿನ ಮತಗಟ್ಟೆ ಸಂಖ್ಯೆ 237ಕ್ಕೆ ಬೆಳಗ್ಗೆ 9 ಗಂಟೆಗೆ ಆಗಮಿಸಿ ಮತದಾನ ಮಾಡಿದರು. ಮತದಾನದ ಬಳಿಕ ಮಾತನಾಡಿದ ಅವರು, ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದ್ದೇವೆ. ಕ್ಷೇತ್ರದ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

ಬಚ್ಚೇಗೌಡ ಮತದಾನ: ಹೊಸಕೋಟೆ ನಗರದ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಸಂಸದ ಬಚ್ಚೇಗೌಡ ಪತ್ನಿ ಸಮೇತರಾಗಿ ಬಂದು ತಮ್ಮ ಮತ ಚಲಾಯಿಸಿದರು. ಮತಗಟ್ಟೆ ಸಂಖ್ಯೆ 165ರಲ್ಲಿ ಮತ ಚಲಾಯಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕರ್ನಾಟಕ ವಿಧಾನಸಭಾ ಚುನಾವಣೆ ರಾಷ್ಟ್ರದಲ್ಲೇ ಗಮನ ಸೆಳೆದಿದೆ ಎಂದರು. ಹೊಸಕೋಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಣದಲ್ಲಿ ಇಲ್ಲದೆ ಇರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಾನೇರ ಸ್ವರ್ಧೆ ಇದೆ, ಬಚ್ಚೇಗೌಡರ ಮಗ ಶರತ್ ಬಚ್ಚೇಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಇದನ್ನೂ ಓದಿ:ಕುಟುಂಬ ಸಮೇತ ಯಡಿಯೂರಪ್ಪ ಮತದಾನ: ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ

ABOUT THE AUTHOR

...view details