ಬೆಂಗಳೂರು:ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ತುಮಕೂರು ಪ್ರವಾಸ ಉತ್ತಮ ಫಲ ನೀಡಿದ್ದು, ಮತ್ತೋರ್ವ ಜೆಡಿಎಸ್ ಶಾಸಕ ಕಾಂಗ್ರೆಸ್ ನತ್ತ ಮುಖ ಮಾಡಲಿದ್ದಾರೆ ಎನ್ನಲಾಗ್ತಿದೆ. ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ (ವಾಸು) ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
2018ರ ವಿಧಾನಸಭೆ ಚುನಾವಣೆಯಲ್ಲಿ ತುಮಕೂರಿನ 11 ಕ್ಷೇತ್ರಗಳ ಪೈಕಿ ಜೆಡಿಎಸ್ ಹಾಗೂ ಬಿಜೆಪಿ ತಲಾ 4 ಹಾಗೂ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಶಿರಾ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಸತ್ಯನಾರಾಯಣ ನಿಧನದಿಂದ ತೆರವಾದ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ರಾಜೇಶ್ ಗೌಡ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಸದಸ್ಯರ ಬಲ 5ಕ್ಕೆ ಏರಿಕೆ ಆಗಿದೆ.
ಮಾಜಿ ಸಚಿವ ಚೆನ್ನಿಗಪ್ಪ ಪುತ್ರ ಡಿ.ಸಿ. ಗೌರಿಶಂಕರ್ ಸ್ವಾಮಿ ತುಮಕೂರು ಗ್ರಾಮಾಂತರ ಶಾಸಕರಾಗಿದ್ದರು. ಮಧುಗಿರಿ ಶಾಸಕರಾಗಿ ಎಂವಿ ವೀರಭದ್ರಯ್ಯ ಮತ್ತು ಗುಬ್ಬಿ ಶಾಸಕರಾಗಿ ಎಸ್ ಆರ್ ಶ್ರೀನಿವಾಸ್ ಇದ್ದಾರೆ. ಮೂವರು ಶಾಸಕರನ್ನ ಹೊಂದಿರುವ ಕಾಂಗ್ರೆಸ್ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ತಂತ್ರ ಆರಂಭಿಸಿದೆ.
ಜೆಡಿಎಸ್ನ ಹಾಲಿ ಮತ್ತು ಮಾಜಿ ಪ್ರತಿನಿಧಿಗಳಾದ ತುಮಕೂರು ಜಿಲ್ಲೆಯ ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್, ಮಧುಗಿರಿ ಶಾಸಕ ಎಂ.ವಿ ವೀರಭದ್ರಯ್ಯ, ಕೊರಟಗೆರೆ ಮಾಜಿ ಶಾಸಕ ಸುಧಾಕರ್ ಲಾಲ್, ಚಿಕ್ಕನಾಯಕನಹಳ್ಳಿ ಸಿ.ಬಿ. ಸುರೇಶ್ ಬಾಬು, ಪಾವಗಡದ ಕೆ.ಎಂ. ತಿಮ್ಮರಾಯಪ್ಪ ಅವರನ್ನ ಕಾಂಗ್ರೆಸ್ ಮತ ಸೆಳೆಯುವ ಪ್ರಯತ್ನ ಆರಂಭಿಸಿದೆ. ತೆರೆಮರೆಯಲ್ಲಿ ಶ್ರೀನಿವಾಸ್ ಈಗಾಗಲೇ ಎರಡು ಮೂರು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ.