ಕರ್ನಾಟಕ

karnataka

ETV Bharat / state

ಅಧಿಕಾರದ ಚುಕ್ಕಾಣಿ ಹಿಡಿಯಲು ಮೂರು ಪಕ್ಷಗಳಲ್ಲಿ ಕಸರತ್ತು.. ಹೊಸ ಕಾರ್ಯತಂತ್ರಗಳಿಗೆ ಒತ್ತು.. - ಹೈಕಮಾಂಡ್

ಬಿಜೆಪಿ ಜನಸ್ಪಂದನ ಹಮ್ಮಿಕೊಳ್ಳುತ್ತಿದ್ದರೆ , ಜೆಡಿಎಸ್ ಪಂಚರತ್ನ ರಥಯಾತ್ರೆ ಮೂಲಕ ಚುನಾವಣೆ ಪ್ರಚಾರ ಆರಂಭಿಸಿದೆ. ಕಾಂಗ್ರೆಸ್ ಜಿಲ್ಲಾವಾರು ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೊನ್ನೆ ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಕೈ ನಾಯಕರಿಗೆ ಹಲವು ಸಲಹೆ ನೀಡಿದ್ದು,ಕಾಂಗ್ರೆಸ್ ಸಹ ಸರ್ವ ಸಿದ್ಧತೆಯಲ್ಲಿ ತೊಡಗಿದೆ.

Congress JDS BJP
ಕಾಂಗ್ರೆಸ್ ಜೆಡಿಎಸ್ ಬಿಜೆಪಿ

By

Published : Dec 14, 2022, 6:05 PM IST

ಬೆಂಗಳೂರು: ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಚುಟುವಟಿಕೆಗಳು ಗರಿಗೆದರಿವೆ. ಮೂರು ಪಕ್ಷಗಳು ರಾಜ್ಯದ ಅಧಿಕಾರದ ಚುಕ್ಕಾಣೆ ಹಿಡಿಯುವ ನಿಟ್ಟಿನಲ್ಲಿ ತಮ್ಮದೇ ಕಾರ್ಯತಂತ್ರಗಳನ್ನು ಹೆಣೆಯುವಲ್ಲಿ ನಿರತವಾಗಿವೆ.

ಗುಜರಾತ್‌ ಹಾಗೂ ಹಿಮಾಚಲ ವಿಧಾನಸಭೆ ಚುನಾವಣೆ ಫ‌ಲಿತಾಂಶ ರಾಜ್ಯದಲ್ಲಿ ಬಿಜೆಪಿಗೆ ಧೈರ್ಯದ ಜತೆಗೆ ಆತಂಕ ಸೃಷ್ಟಿಸಿದರೆ, ಕಾಂಗ್ರೆಸ್‌ಗೆ ಆಘಾತದ ನಡುವೆ ಸಮಾಧಾನ. ಜೆಡಿಎಸ್‌ಗೆ ಎಂದಿನಂತೆ ಆಶಾಭಾವನೆ ಮೂಡಿಸಿದೆ. ಆದರೆ, ಗುಜರಾತ್‌ ಫ‌ಲಿತಾಂತ ರಾಜ್ಯ ಬಿಜೆಪಿ ನಾಯಕರಲ್ಲಿ ಉತ್ಸಾಹ ತುಂಬಿದೆ.

ಕಾಂಗ್ರೆಸ್‌ ನಾಯಕರಿಗೆ ಗುಜರಾತ್‌ ಫ‌ಲಿತಾಂಶ ಆಘಾತ ತರಿಸಿದರೂ ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಹಿಡಿಯುವ ಸಮಾಧಾನ ಪಟ್ಟು ಇಲ್ಲೂ ಸಹ ಅದೇ ರೀತಿ ಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿದೆ. ಗುಜರಾತ್‌ನಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ನ ಹಿನ್ನಡೆ, ಹಿಮಾಚಲದಲ್ಲಿ ಬಿಜೆಪಿ ಹಿನ್ನೆಡೆ ಆಧಾರದಲ್ಲಿ ಕರ್ನಾಟಕದಲ್ಲಿ ತಮಗೆ ಜನಮನ್ನಣೆ ಸಿಗಬಹುದು ಎಂಬ ಜೆಡಿಎಸ್ ಆಶಾಭಾವನೆ ಇಟ್ಟುಕೊಂಡಿದೆ.
ಮತದಾರರ ಸೆಳೆಯಲು ಪಕ್ಷಗಳು ಸಜ್ಜು:ರಾಜ್ಯದ ಮತದಾರರ ಮನವೊಲಿಸಿಕೊಳ್ಳಲು ಅನುಸರಿಸಬೇಕಾದ ತಂತ್ರಗಳ ಬಗ್ಗೆ ಸಮಾಲೋಚನೆ ಪ್ರಾರಂಭವಾಗಿದೆ.ಮುಂದಿನ ಮೂರು ತಿಂಗಳ ಕಾಲ ಸಮುದಾಯವಾರು ಸಮಾವೇಶ, ಯಾತ್ರೆ, ವಾರ್‌ ರೂಂ ಸ್ಥಾಪನೆ, ಟಿಕೆಟ್‌ ಕುರಿತು ಜಿಲ್ಲಾ, ವಿಭಾಗವಾರು ಸಭೆಗಳ ಕುರಿತು ಪ್ಲಾನ್ ಸಿದ್ಧ ಮಾಡಿಕೊಂಡು ಕ್ಷೇತ್ರಕ್ಕಿಳಿಯಲು ಎಲ್ಲ ರೀತಿಯ ಸರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.


ಬಿಜೆಪಿ ಈಗಾಗಲೇ ಜನಸ್ಪಂದನ ಕಾರ್ಯಕ್ರಮ ನಡೆಸುತ್ತಿದ್ದರೆ, ಜೆಡಿಎಸ್ ಪಂಚರತ್ನ ರಥಯಾತ್ರೆ ಮಾಡುವ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದೆ. ಇನ್ನು ಕಾಂಗ್ರೆಸ್ ಜಿಲ್ಲಾವಾರು ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೊನ್ನೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ನೂತನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ನಾಯಕರಿಗೆ ಹಲವು ಸಲಹೆ, ಸೂಚನೆಗಳನ್ನು ನೀಡಿದ್ದು,ಕಾಂಗ್ರೆಸ್​ ಸರ್ವ ಸಿದ್ಧತೆಯಲ್ಲಿ ತೊಡಗಿದೆ.

ಕೈಗೆ ಶಕ್ತಿ ತುಂಬಿದ ಹಿಮಾಚಲ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರಿದ ಹಿನ್ನೆಲೆ ರಾಜ್ಯದ ಕೈ ನಾಯಕರಲ್ಲೂ ಉತ್ಸಾಹದ ಅಲೆ ಎದ್ದು ಕಾಣುತ್ತಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ತರಲು ಒಗ್ಗಟ್ಟಿನ ಮಂತ್ರ ಜಪಿಸಬೇಕು ಎಂದು ಹೈಕಮಾಂಡ್ ನಿಂದ ರಾಜ್ಯ ನಾಯಕರಿಗೆ ಸಂದೇಶ ರವಾನೆಯಾಗಿದೆ ಎನ್ನಲಾಗಿದೆ.

ಬಿಜೆಪಿ ಗುಜರಾತ್ ಮಾದರಿ ಚರ್ಚೆ :ಆಡಳಿತಾರೂಢ ಬಿಜೆಪಿಯಲ್ಲಿ ಗುಜರಾತ್‌ ಮಾದರಿ ಜಪ ನಡೆಯುತ್ತಿದ್ದು, ಇಲ್ಲಿಯೂ ಅದೇ ಮಾದರಿ ಅನುಸರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಕಾಂಗ್ರೆಸ್‌ನಲ್ಲೂ ಗುಜರಾತ್‌ ಮಾದರಿಯ ಬಗ್ಗೆ ಚರ್ಚೆಯಾಗುತ್ತಿದೆ.

ಕೈ ನಾಯಕರ ಹೇಳಿಕೆ ಚರ್ಚೆಗೆ ಗ್ರಾಸ: ಕಾಂಗ್ರೆಸ್‌ ರಾಜ್ಯ ದಲ್ಲಿಯೂ ಶೇ. 60 ರಷ್ಟು ಕಿರಿಯರು, ಶೇ. 40 ರಷ್ಟು ಹಿರಿಯರಿಗೆ ಟಿಕೆಟ್‌ ನೀಡಬೇಕು. ನಮ್ಮಲ್ಲಿ ಸೋಲುತ್ತಾರೆ ಎಂದು ಗೊತ್ತಿದ್ದರೂ ಹಿರಿತನ ಎಂದು ಟಿಕೆಟ್‌ ನೀಡಲಾಗುತ್ತಿದೆ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ನೀಡಿರುವ ಹೇಳಿಕೆ ಪಕ್ಷದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದರ ಜತೆಗೆ ಕಾಂಗ್ರೆಸ್ ನಲ್ಲಿ ದಲಿತ ಸಿಎಂ ಯಾಕೆ ಆಗಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಆಮ್ ಆದ್ಮಿಗೆ ಖಾತೆ ತೆರೆಯುವ ಹುಮ್ಮಸ್ಸು:ಇನ್ನು ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದು ಬೀಗಿದ ಆಮ್ ಆದ್ಮಿ ಪಕ್ಷ, ಗುಜರಾತ್ ನಲ್ಲಿ ಮ್ಯಾಜಿಕ್ ಮಾಡಲು ಸಾಧ್ಯವಾಗಲಿಲ್ಲ. ಮೊದಲ ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ದ ಎಎಪಿ 5 ಸೀಟ್ ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇದೇ ಹುಮ್ಮಸ್ಸಿನಲ್ಲಿ ಕರ್ನಾಟಕದಲ್ಲೂ ಗಟ್ಟಿ ಪ್ರಯತ್ನ ಮಾಡಿದರೆ ಖಾತೆ ತೆರೆಯಬಹುದು ಎಂಬ ಆತ್ಮ ವಿಶ್ವಾಸದಲ್ಲಿದೆ.
ಕಾಗ್ರೆಸ್​ ಒಗ್ಗಟ್ಟಿನ ಮಂತ್ರ ಜಪ : ಒಳ ಜಗಳ ಹಾಗೂ ಅತಿಯಾದ ಆತ್ಮವಿಶ್ವಾಸದಿಂದ ಮೈ ಮರೆತರೆ ಅಧಿಕಾರ ಹಿಡಿಯುವ ಕನಸು ನನಸಾಗುವುದಿಲ್ಲ ಎಂಬ ಸಂದೇಶ ಕಾಂಗ್ರೆಸ್‌ಗೆ ಸಿಕ್ಕಿದೆ. ಒಗ್ಗಟ್ಟಿನಿಂದ ಹೋರಾಟ ಮಾಡುವ ಅನಿವಾರ್ಯತೆಯಿದೆ. ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ಗೆ ಅಧಿಕಾರ ತಂದುಕೊಟ್ಟಿದ್ದು, ಆ ಪ್ರೇರಣೆಯಿಂದ ರಾಜ್ಯದಲ್ಲೂ ಅಧಿಕಾರಕ್ಕೆ ತರುವ ಸವಾಲು ಎದುರಾಗಿದೆ.

ಗುಜರಾತ್‌ ಫ‌ಲಿತಾಂಶ ಬಿಜೆಪಿಗೆ ಟಾನಿಕ್​:ಗುಜರಾತ್‌ ಫ‌ಲಿತಾಂಶ ಬಿಜೆಪಿ ಪಾಲಿಗೆ ಟಾನಿಕ್‌ನಂತಾಗಿದೆ. ಕರ್ನಾಟಕದ 150 ಟಾರ್ಗೆಟ್‌ ಗುರಿ ತಲುಪುವ ಧೈರ್ಯ ಬಂದಂತಾಗಿದೆ. ಆದರೆ, ಅಲ್ಲಿ ಬಿಜೆಪಿಯು ಏಳು ಸಚಿವರೂ ಸೇರಿ 42 ಹಾಲಿ ಪ್ರಭಾವಿ ಶಾಸಕರಿಗೆ ಟಿಕೆಟ್‌ ನಿರಾಕರಿಸಿದರೂ ಪ್ರಯೋಗ ಯಶಸ್ವಿಯಾಗಿರುವುದರಿಂದ ಅಲ್ಲಿನ ಮಾಡೆಲ್‌ ಇಲ್ಲಿಯೂ ಅನುಸರಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಇದು ಕರ್ನಾಟಕದ ಕೆಲವು ಸಚಿವರು ಹಾಗೂ ಶಾಸಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಬಿಜೆಪಿ ಅಭ್ಯರ್ಥಿಗಳಿಗೆ ನಡುಕ:70 ವರ್ಷ ದಾಟಿದವರಿಗೆ ಟಿಕೆಟ್‌ ಅನುಮಾನ ಎಂಬ ಮಾತುಗಳ ನಡುವೆ ಇದೀಗ ಗುಜರಾತ್‌ ಮಾಡೆಲ್‌ ಸಹ ಶಾಸಕರಲ್ಲಿ ಭಯ ಹುಟ್ಟಿಸಿದೆ. ಆದರೆ, ಹೊಸ ಮುಖಗಳಿಗೆ ಅವಕಾಶ ಸಿಗಬಹುದೆಂಬ ಆಸೆಯೂ ಎರಡನೇ ಹಂತದ ನಾಯಕರಲ್ಲಿ ಮೂಡಿದೆ. ಒಟ್ಟಾರೆ, ಗುಜರಾತ್‌ ನಂತರ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಜನವರಿ ತಿಂಗಳಿನಿಂದ 15 ದಿನಕ್ಕೊಮ್ಮೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಕರ್ನಾಟಕ ಪ್ರವಾಸ ಮಾಡಲಿದ್ದು, ವಾರ್‌ ರೂಂ ಸ್ಥಾಪನೆ ಸಹಿತ ಎಲ್ಲ ಕಾರ್ಯತಂತ್ರಗಳು ಇಲ್ಲಿಂದಲೇ ಆರಂಭವಾಗಲಿವೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್‌ ಲೆಕ್ಕಾಚಾರವೇನು? :ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ಫ‌ಲಿತಾಂಶ ಜೆಡಿಎಸ್‌ಗೆ ನಿರೀಕ್ಷಿತ. ಆದರೂ ಆ ಎರಡೂ ರಾಜ್ಯಗಳ ರಾಜಕಾರಣಕ್ಕೂ ಕರ್ನಾಟಕದ ಪರಿಸ್ಥಿತಿಗೆ ವ್ಯತ್ಯಾಸ ಇರುವುದರಿಂದ ತಮ್ಮ ಗುರಿ ತಲುಪಲು ದೊಡ್ಡ ಮಟ್ಟದ ಸಮಸ್ಯೆ ಆಗದು ಎಂಬ ವಿಶ್ವಾಸ ಹೊಂದಿದೆ. ಕಳೆದ 20 ದಿನಗಳಿಂದ ನಡೆಸಿದ ಪಂಚರತ್ನ ಯಾತ್ರೆಗೆ ಸ್ಪಂದನೆ, ಕಾಂಗ್ರೆಸ್‌ನಲ್ಲಿನ ಆಂತರಿಕ ಸಂಘರ್ಷ, ಬಿಜೆಪಿಯಲ್ಲಿ ಮುಂದೆ ಅನಿರೀಕ್ಷಿತ ವಿದ್ಯಮಾನಗಳು ನಡೆದರೆ ತಮಗೆ ವರದಾನವಾಗಬಹುದು ಎಂಬುದು ಜೆಡಿಎಸ್‌ ಲೆಕ್ಕಾಚಾರದ ಚಿಂತನೆಯಲ್ಲಿದೆ.


ರಾಜ್ಯದಲ್ಲಿ ಎಲ್ಲ ರಾಜಕೀಯ ಪಕ್ಷಗಳಲ್ಲೂ ಈಗಾಗಲೇ ಚುನಾವಣೆ ವಾತಾವರಣ ಆವರಿಸಿದೆ. ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ಫ‌ಲಿತಾಂಶ ಒಂದೊಂದು ಪಕ್ಷಕ್ಕೆ ಒಂದೊಂದು ರೀತಿಯ ಸಂದೇಶ ಸಿಕ್ಕಂತಾಗಿದೆ. ಬೆಳಗಾವಿ ಅಧಿವೇಶನದ ನಂತರ ಸಂಕ್ರಾಂತಿ ವೇಳೆಗೆ ಹಾಲಿ ಶಾಸಕರೂ ರಾಜೀನಾಮೆ ನೀಡುವ ಮೂಲಕ ಪಕ್ಷಾಂತರ ಪರ್ವ ಆರಂಭವಾಗುವ ಸಾಧ್ಯತೆಯೂ ಹೆಚ್ಚಾಗಿದೆ ಎಂದು ಆಂತರಿಕೆ ಬೆಳವಣಿಗೆಗಳು ಹೇಳುತ್ತಿವೆ.

ಇದನ್ನೂಓದಿ:ಚುನಾವಣಾ ಅಸ್ತ್ರವಾಗುವತ್ತ ಶಿರಸಿ ಪ್ರತ್ಯೇಕ ಜಿಲ್ಲೆ ಕೂಗು: ಪರ ವಿರೋಧದ ಚರ್ಚೆ!

ABOUT THE AUTHOR

...view details