ಬೆಂಗಳೂರು :ವಿಧಾನಪರಿಷತ್ ಚುನಾವಣೆಗೆ(legislative council election) ನಿನ್ನೆಯಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದರೂ ಮೂರು ರಾಜಕೀಯ ಪಕ್ಷಗಳು ಮಾತ್ರ ಇನ್ನೂ ತಮ್ಮ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೆ ಮೀನಾಮೇಷ ಎಣಿಸುತ್ತಿರುವುದು ಕುತೂಹಲ ಮೂಡಿಸಿದೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ನ 25 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಅಭ್ಯರ್ಥಿಗಳ ಆಯ್ಕೆಯ ಕಸರತ್ತಿನಲ್ಲಿ ಕಾಂಗ್ರೆಸ್(congress), ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಾಯಕರು ತೊಡಗಿದ್ದಾರೆ.
ಆಡಳಿತಾರೂಢ ಬಿಜೆಪಿಯಲ್ಲಿ(BJP) ಹಾಲಿ ಆರು ಸದಸ್ಯರ ಪೈಕಿ ಐವರಿಗೆ ಟಿಕೆಟ್ ಖಚಿತವಾಗಿದೆ. ಉಳಿದಂತೆ ಪ್ರತಿ ಕ್ಷೇತ್ರಕ್ಕೂ ಮೂವರು ಅಭ್ಯರ್ಥಿಗಳನ್ನು ಕೇಂದ್ರ ಸಮಿತಿಗೆ ಶಿಫಾರಸು ಮಾಡಲು ರಾಜ್ಯ ಘಟಕ ತೀರ್ಮಾನಿಸಿ, ಶಾಸಕರು, ಮುಖಂಡರ ಅಭಿಪ್ರಾಯ ಸಂಗ್ರಹಿಸಿ ವರದಿ ಸಲ್ಲಿಸಲು ಕೋರ್ ಕಮಿಟಿ ಸಭೆಯಲ್ಲೂ ತೀರ್ಮಾನಿಸಗಿತ್ತು.
ಅದರಂತೆ ಜಿಲ್ಲಾ ಮಟ್ಟದಲ್ಲಿ ಸಭೆ ನಡೆದು ಪಟ್ಟಿ ಸಿದ್ಧಪಡಿಸಲಾಗಿದೆ. ಕೇಂದ್ರ ಸಮಿತಿಗೆ ಪಟ್ಟಿ ಕಳುಹಿಸಿಕೊಡಲಾಗಿದೆ. ಯಾವುದೇ ಕ್ಷಣದಲ್ಲಿ ತನ್ನ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರದ ಸಿ.ಆರ್. ಮನೋಹರ್( C R Manohar) ಹಾಗೂ ಮೈಸೂರು-ಚಾಮರಾಜನಗರ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ಸಂದೇಶ್ ನಾಗರಾಜ್ ಅವರು ಬಿಜೆಪಿಗೆ ಬರಲು ಉತ್ಸುಕರಾಗಿದ್ದಾರೆ. ಅವರ ಸೇರ್ಪಡೆಗೆ ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆ.
ಮೂರು ಪಕ್ಷಗಳ ನಾಯಕರು, ಸಭೆಗಳನ್ನು ನಡೆಸುವ ಮೂಲಕ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ನವೆಂಬರ್ 23ರವರೆಗೂ ನಾಮಪತ್ರ ಸಲ್ಲಿಸಲು ಕಾಲಾವಕಾಶ ಇರುವುದರಿಂದ ಎರಡು ದಿನಗಳಲ್ಲಿ ಒಂದೊಂದು ರಾಜಕೀಯ ಪಕ್ಷವೂ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿವೆ.
ನಾಳೆ ಜೆಡಿಎಸ್(JDS) ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಸಭೆ ನಡೆಸಿದ್ದಾರೆ. ಶಾಸಕರು, ಜಿಲ್ಲಾಧ್ಯಕ್ಷರು ಮತ್ತು ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದು, ಒಮ್ಮತದ ಅಭ್ಯರ್ಥಿ ಆಯ್ಕೆ ಈವರೆಗೂ ಕಗ್ಗಂಟಾಗಿದೆ.
ಟಿಕೆಟ್‌ಗಾಗಿ ಪೈಪೋಟಿ :25 ಕ್ಷೇತ್ರಗಳಲ್ಲಿಯೂ ಟಿಕೆಟ್‌ಗಾಗಿ ಪೈಪೋಟಿ ಹೆಚ್ಚಾಗಿದೆ. ದ್ವಿಸದಸ್ಯ ಕ್ಷೇತ್ರಗಳಲ್ಲಿ ಒಬ್ಬ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಈ ಮಧ್ಯೆ ಮಾಜಿ ಸಚಿವ, ಬಿಜೆಪಿ ಮುಖಂಡ ಎ. ಮಂಜು ಇತ್ತೀಚೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಅವರನ್ನು ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿದ್ದಾರೆ. ಅವರ ಪುತ್ರ ಮಂತರ್‌ಗೌಡ ಸಹ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ. ತುಮಕೂರು ಜಿಲ್ಲೆಯಿಂದ ಜೆಡಿಎಸ್‌ನಿಂದ ಗೆದ್ದಿದ್ದ ಕಾಂತರಾಜ್ ಅವರು ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟಿದ್ದು, ಅವರ ಬಗ್ಗೆಯೂ ಚರ್ಚೆ ನಡೆದಿದೆ.
ಜೆಡಿಎಸ್ನಲ್ಲೂ ಕಸರತ್ತು :ಜೆಡಿಎಸ್ ಕೂಡ ಅಭ್ಯರ್ಥಿಗಳ ಆಯ್ಕೆಯಲ್ಲಿ ಕಸರತ್ತು ನಡೆಸುತ್ತಿದೆ. ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇನ್ನೂ ಬಿಡುಗಡೆ ಮಾಡದಿರುವುದರಿಂದ ಜೆಡಿಎಸ್ ಕಾದು ನೋಡುವ ತಂತ್ರಕ್ಕೆ ಬಂದಿದೆ ಎನ್ನಲಾಗುತ್ತಿದೆ.
ಹಾಸನ ಕ್ಷೇತ್ರಕ್ಕೆ ಭವಾನಿ ರೇವಣ್ಣ ಸ್ಪರ್ಧೆ ಮಾಡಲು ಉತ್ಸುಕತೆ ತೋರಿದ್ದರೂ, ಅಂತಿಮವಾಗಿ ಡಾ. ಸೂರಜ್ ರೇವಣ್ಣ ಅವರಿಗೆ ಟಿಕೆಟ್ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಕೋಲಾರ-ಚಿಕ್ಕಬಳ್ಳಾಪುರ, ತುಮಕೂರು, ಬೆಂ. ಗ್ರಾಮಾಂತರ, ಮೈಸೂರು-ಚಾಮರಾಜನಗರ ಕ್ಷೇತ್ರಗಳಿಗೆ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ.
ಗೆಲ್ಲುವ ಮಾನದಂಡ ಇರಿಸಿಕೊಂಡು ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಮೊನ್ನೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ವಿಧಾನಪರಿಷತ್ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಇನ್ನು ಅಂತಿಮಗೊಳಿಸಿಲ್ಲ. ಪಕ್ಷ ಗೆಲ್ಲುವ ಕ್ಷೇತ್ರಗಳಲ್ಲಿ ಹೆಚ್ಚು ಗಮನಹರಿಸಲಾಗುತ್ತಿದೆ. ಆರರಿಂದ ಎಂಟು ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪರಿಷತ್ ಮತದಾರರೆಷ್ಟು?:ರಾಜ್ಯದ ಸ್ಥಳೀಯ ಸಂಸ್ಥೆಗಳ 20 ಕ್ಷೇತ್ರಗಳಿಂದ ವಿಧಾನಪರಿಷತ್ನ 25 ಸ್ಥಾನಗಳಿಗೆ ಡಿ.10ರಂದು ಮತದಾನ ನಡೆಯಲಿದೆ. ಒಟ್ಟು 98,846 ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 47,368 ಪುರುಷರು ಹಾಗೂ 51,474 ಮಹಿಳಾ ಮತದಾರರು ಮತ್ತು ಮೂವರು ತೃತೀಯ ಲಿಂಗಿ ಮತದಾರರಿದ್ದಾರೆ.
ಇದನ್ನೂ ಓದಿ:ರಾಮನಗರದಲ್ಲಿ ಧಾರಾಕಾರ ಮಳೆ: ಕಣ್ವ ಜಲಾಶಯದಲ್ಲಿ ತೇಲಿಬಂದವು ಮೃತದೇಹಗಳು