ಬೆಂಗಳೂರು: ಬೆಳಗಾವಿಯಲ್ಲಿ ರೂಂ ಕೊಡಿಸಿ ಎಂದು ಉಮೇಶ್ ಕತ್ತಿ ಅವರನ್ನು ಕೇಳಿದಾಗ, ನನಗೆ ಹತ್ತು ರೂ. ಕೊಟ್ಟು ವಿರೋಧ ಪಕ್ಷದಲ್ಲಿರಲು ಲಾಯಕ್ಕು ಎಂದಿದ್ದರು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಸ್ಮರಿಸಿದ್ದಾರೆ. ವಿಧಾನಸಭೆಯಲ್ಲಿ ಇಂದು ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಅವರು, ಉಮೇಶ್ ಕತ್ತಿ ಅವರು ನೇರ ನುಡಿ, ಸ್ನೇಹ ಜೀವಿಯಾಗಿದ್ದರು ಎಂದು ಹೇಳಿದರು. ಇನ್ನು ನೈಸ್ ವಿಚಾರದ ಹೋರಾಟದಲ್ಲಿ ಶ್ರೀರಾಮರೆಡ್ಡಿ ಜೊತೆಯಾಗಿ ನಾವು ಹೋರಾಟ ನಡೆಸಿದ್ದೆವು ಎಂದು ಸ್ಮರಿಸಿದರು.
ಉಮೇಶ್ ಕತ್ತಿ ಜನಪ್ರಿಯತೆಯಿಂದ ಗೆಲ್ಲುತ್ತಿದ್ದರು : ಬಳಿಕ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಚುನಾವಣೆ ಗೆಲ್ಲುವುದು ಒಂದು ಕಲೆ. ಕೆಲವು ಕಡೆ ಜನಪ್ರಿಯತೆ ಮತ್ತು ಕಲೆ ಒಂದುಗೂಡಿ ಜಯ ದೊರೆಯುತ್ತದೆ. ಇತ್ತೀಚೆಗೆ ನಿಧನರಾದ ಸಚಿವ ಉಮೇಶ್ ಕತ್ತಿಯವರು ಪಕ್ಷ ಬದಲಿಸಿದರೂ ತಮ್ಮ ಜನಪ್ರಿಯತೆಯಿಂದ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಿದ್ದರು ಎಂದು ಹೇಳಿದರು.
ಚುನಾವಣೆಯನ್ನು ಯಾವ ರಾಜಕಾರಣಿಯೂ ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳುವುದಿಲ್ಲ. ಅವಕಾಶಕ್ಕಾಗಿ ಕಾಯುತ್ತಾರೆ. ಎಷ್ಟೇ ಪ್ರಚೋದನೆ ಇದ್ದರೂ ಬಳಸುವ ಪದದ ಮೇಲೆ ಹಿಡಿತ ಇರಬೇಕು. ಯಾರು ಶಾಶ್ವತರಲ್ಲ. ಯಾರು ಸನ್ಯಾಸಿಗಳಲ್ಲ ಎಂಬುದನ್ನು ಮರೆಯಬಾರದು. ಇದರಿಂದ ವೈಯಕ್ತಿಕ ಸಂಬಂಧ ಚೆನ್ನಾಗಿರುತ್ತದೆ ಎಂದು ಇದೇ ವೇಳೆ ಹೇಳಿದರು.
ಉಮೇಶ್ ಕತ್ತಿ ಅವರ ತಂದೆ ಇದೇ ಅಧಿವೇಶನದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟರು. ಅವರು ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಉಮೇಶ್ ಕತ್ತಿ ಅವರ ನಿಧನದಿಂದ ನಮಗೆ ತುಂಬಾ ನಷ್ಟವಾಗಿದೆ ಎಂದು ಹೇಳಿದರು. ಮಾಜಿ ಸಚಿವ ರಘುಪತಿ ಹಾಗೂ ನನ್ನ ನಡುವೆ 50 ವಷ೯ದ ಒಡನಾಟವಿತ್ತು. ಮಾಜಿ ಶಾಸಕ ಶ್ರೀರಾಮರೆಡ್ಡಿ ಅವರು ಕೊನೆ ಘಳಿಗೆವರೆಗೂ ಕಮ್ಯುನಿಸ್ಟ್ ಹಾದಿ ಬಿಟ್ಟಿರಲಿಲ್ಲ ಎಂದು ಗುಣಗಾನ ಮಾಡಿದರು.
ಸದಾ ಹೋರಾಟಕ್ಕೆ ಬೆಂಬಲಿಸುತ್ತಿದ್ದ ವ್ಯಕ್ತಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಹೋರಾಟಕ್ಕೆ ಬೆಂಬಲವಾಗಿ ಉಮೇಶ್ ಕತ್ತಿ ನಿಂತಿದ್ದರು. ಒಳ್ಳೆಯ ವ್ಯಕ್ತಿಯಾಗಿ ತಾವು ಹೇಳಿದ ಕೆಲಸವನ್ನು ಮಾಡುತ್ತಿದ್ದರು. ಇಂತಹ ನಾಯಕ ಅಗಲಿರುವುದು ತುಂಬಾ ದುಃಖ ತಂದಿದೆ ಎಂದರು.
ಉಮೇಶ್ ಕತ್ತಿಯವರದ್ದು ಮನೋರಂಜಿತ ವ್ಯಕ್ತಿತ್ವ : ಜೆಡಿಎಸ್ ಶಾಸಕ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ಉಮೇಶ್ ಕತ್ತಿ ಮನೋರಂಜಿತ ವ್ಯಕ್ತಿಯಾಗಿದ್ದರು. ಯಾವ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ ಎಂದು ಹೇಳಿದರು. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು, ಕಾಂಗ್ರೆಸ್ ಶಾಸಕ ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್ ಮತ್ತಿತರು ಸಂತಾಪ ಸೂಚಕ ನಿರ್ಣಯ ಬೆಂಬಲಿಸಿ ಮಾತನಾಡಿದರು.
ಇದನ್ನೂ ಓದಿ :ಉಮೇಶ್ ಕತ್ತಿ ವರ್ಣರಂಜಿತ ರಾಜಕಾರಣಿ: ಸಿಎಂ ಬಸವರಾಜ ಬೊಮ್ಮಾಯಿ ಬಣ್ಣನೆ