ಬೆಂಗಳೂರು:ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯ ಎಚ್.ಡಿ ರೇವಣ್ಣ ತಾವು ಮಾಡಿದ ಮತದಾನವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ಗೆ ತೋರಿಸಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ರೇವಣ್ಣ ಮತದಾನ ಮಾಡುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ಮತ ಪತ್ರವನ್ನು ತೋರಿಸಿದ್ದಕ್ಕೆ ಬಿಜೆಪಿ ಆಕ್ಷೇಪ ತೆಗೆದಿದೆ. ರೇವಣ್ಣ ಮತವನ್ನು ಅಸಿಂಧುಗೊಳಿಸಬೇಕು ಎಂದು ಒತ್ತಾಯಿಸಿದೆ. ಈ ಸಂಬಂಧ ಚುನಾವಣಾ ಆಯೋಗಕ್ಕೂ ದೂರು ನೀಡಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಇದೆ.
ಮತದಾನದ ಸಂದರ್ಭದಲ್ಲಿ ರೇವಣ್ಣ ಮತಪತ್ರವನ್ನು ವ್ಯಂಗ್ಯವಾಗಿ ಡಿಕೆಶಿಗೆ ತೋರಿಸಿದ್ದಾರೆ ಎನ್ನಲಾಗಿದೆ. ಆದರೆ, ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗಿದೆ ಎಂಬುವುದು ಬಿಜೆಪಿ ಆಕ್ಷೇಪ. ಪ್ರತಿ ಮತವೂ ಮಹತ್ವದ್ದಾಗಿರುವ ಹಿನ್ನೆಲೆ ಈ ಬೆಳವಣಿಗೆ ಕುತೂಹಲ ಮೂಡಿಸಿದೆ.
ಗೆಲ್ಲುವ ವಿಶ್ವಾಸವಿದೆ:ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ನಮ್ಮ ಎಲ್ಲ ಶಾಸಕರು ಮತದಾನ ಮಾಡ್ತಿದ್ದೇವೆ. ನಮ್ಮ ಮೂರು ಅಭ್ಯರ್ಥಿಗಳಾದ ನಿರ್ಮಲಾ, ಜಗ್ಗೇಶ್, ಲೆಹರ್ ಸಿಂಗ್ ಗೆಲ್ತಾರೆ. ನಮ್ಮಲ್ಲಿ ಕ್ರಾಸ್ ವೋಟಿಂಗ್ ನಡೆಯಲ್ಲ ಎಂದರು. ಸಿದ್ದರಾಮಯ್ಯ ಬಿಜೆಪಿಗೆ ಸಹಕಾರ ನೀಡುತ್ತಿದ್ದಾರೆ ಎಂಬ ಎಚ್ಡಿಕೆ ಹೇಳಿಕೆಗೆ, ಸೆಕ್ಯೂಲರ್ ಪದದ ಅರ್ಥವೇ ಉಳಿದಿಲ್ಲ. ನಿನ್ನೆಯೆಲ್ಲ ಅವರು ಸೆಕ್ಯೂಲರ್ ಮಾತನಾಡ್ತಿದ್ರು. ಈಗ ಅವರೇ ಹೇಳಬೇಕು ಎಂದರು.
ರಮೇಶ್ ಜಾರಕಿಹೊಳಿ ಆಗಮನ: ರಾಜ್ಯಸಭೆ ಚುನಾವಣೆಗೆ ರಮೇಶ್ ಜಾರಕಿಹೊಳಿ ಆಗಮಿಸಿ ಮತದಾನ ಮಾಡಿದರು. ಸಿಡಿ ವಿವಾದದ ಬಳಿಕ ರಮೇಶ್ ಜಾರಕಿಹೊಳಿ ವಿಧಾನಸೌಧದಕ್ಕೆ ಆಗಮಿಸಿರಲಿಲ್ಲ. ಆದರೆ, ಶುಕ್ರವಾರ ಬಂದು ಮತದಾನ ಮಾಡಿದರು.
ಅಡ್ಡಮತದಾನ ಭೀತಿ ಇಲ್ಲ: ನಮಗೆ ಅಡ್ಡಮತದಾನದ ಭೀತಿ ಇಲ್ಲ. ನಾವು ಯಾರನ್ನು ಪುಸಲಾಯಿಸಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. ನಾನು ಚುನಾವಣಾ ಚಾಣಕ್ಯ ಅಲ್ಲ. ನಾವು ನಮ್ಮ ಕರ್ತವ್ಯ ಮಾಡಿದ್ದೇವೆ. ಕಾಂಗ್ರೆಸ್ಗೆ ಒಬ್ಬ ಅಭ್ಯರ್ಥಿ ಗೆಲ್ಲಿಸುವ ಶಕ್ತಿ ಇದೆ ಅಷ್ಟೇ. ಎರಡನೇ ಅಭ್ಯರ್ಥಿ ಗೆಲ್ಲಿಸಲು ಸಾಧ್ಯವಿಲ್ಲ. ನಮಗೂ 32 ಮತಗಳು ಇವೆ. ಎರಡನೇ ಪ್ರಾಶಸ್ತ್ಯದ 90 ಮತಗಳು ಇವೆ. ಗೆಲುವು ನಮ್ಮದೇ. ಇಬ್ಬರಿಗೂ ಆತ್ಮನೂ ಇಲ್ಲ ಸಾಕ್ಷಿನೂ ಇಲ್ಲ. ನಮ್ಮ ಮೂರನೇ ಅಭ್ಯರ್ಥಿ ಗೆಲ್ಲುತ್ತಾರೆ. ಅದಕ್ಕೆ ಬೇಕಾದ ತಂತ್ರ ಮಾಡಿದ್ದೇವೆ. ನಾವು ಹೇಳುವುದು ರಿಯಲ್ ಎಂದು ಹೇಳಿದರು.