ಕರ್ನಾಟಕ

karnataka

By

Published : Oct 23, 2022, 10:23 AM IST

Updated : Oct 23, 2022, 11:09 AM IST

ETV Bharat / state

ಮಾಮನಿ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲಿರುವ ಸಿಎಂ, ಮಾಜಿ ಸಿಎಂ

ಕಳೆದ ರಾತ್ರಿ ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ನಿಧನರಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಹೆಚ್​ಡಿಕೆ ಸೇರಿದಂತೆ ಸಚಿವರು, ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ.

Anand Mamani passes away
ಪಾರ್ಥಿವ ಶರೀರ ದರ್ಶನ ಮಾಡಿದ ಸಿಎಂ

ಬೆಂಗಳೂರು: ರಾಜ್ಯ ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ್ ಮಾಮನಿ ಅವರ ಇಂದು ಅಂತ್ಯಸಂಸ್ಕಾರ ಸವದತ್ತಿಯಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಗೋವಿಂದ ಕಾರಜೋಳ ಸೇರಿ ಹಲವು ಬಿಜೆಪಿ ನಾಯಕರು ಭಾಗಿಯಾಗಲಿದ್ದಾರೆ.

ಪಾರ್ಥಿವ ಶರೀರವನ್ನು ಸವದತ್ತಿಗೆ ರಸ್ತೆ ಮಾರ್ಗದ ಮೂಲಕ ಕೊಂಡೊಯ್ಯಲಾಗುತ್ತಿದೆ. ಸವದತ್ತಿ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ಮಾಮನಿ ಅವರ ತೋಟದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.

ಇಂದು ನಡೆಯಬೇಕಿದ್ದ ಜನಸಂಕಲ್ಪ ಯಾತ್ರೆ ಸೇರಿದಂತೆ ಎಲ್ಲ ಪಕ್ಷದ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಮಧ್ಯಾಹ್ನ ಬೆಂಗಳೂರಿನಿಂದ ಸವದತ್ತಿಗೆ ಸಿಎಂ ಬೊಮ್ಮಾಯಿ‌, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಇತರ ಬಿಜೆಪಿ ನಾಯಕರು ತೆರಳಲಿದ್ದಾರೆ.

ನಿರಾಣಿ ಕಂಬನಿ:ಆನಂದ್ ಚಂದ್ರಶೇಖರ್ ಮಾಮನಿ ಅವರ ಹಠಾತ್ ನಿಧನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಕಂಬನಿ ಮಿಡಿದಿದ್ದಾರೆ. ಉಪಸಭಾಪತಿಯಾಗಿದ್ದಾಗ ಅವರು ಕಲಾಪದಲ್ಲಿ ಸದನವನ್ನು ನಿರ್ವಹಿಸುತ್ತಿದ್ದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅವರ ದಿಢೀರ್ ಸಾವು ಕರ್ನಾಟಕದ ಸಂಸದೀಯ ವ್ಯವಸ್ಥೆಗೆ ತುಂಬಾಲಾರದ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಸವದತ್ತಿ ಯಲ್ಲಮ್ಮ ಶಾಸಕ, ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ‌ ಮಾಮನಿ ವಿಧಿವಶ

ಸಚಿವ ಸಿ.ಸಿ ಪಾಟೀಲ್ ಸಂತಾಪ: ಮಾಮನಿ ಅವರು ಅಕಾಲಿಕವಾಗಿ ನಿಧನರಾಗಿರುವುದು ತುಂಬಾ ಬೇಸರದ ಸಂಗತಿ ಎಂದು ಸಚಿವ ಸಿ.ಸಿ ಪಾಟೀಲ್ ಸಂತಾಪ ಸೂಚಿಸಿದ್ದಾರೆ. ಉತ್ತರ ಕರ್ನಾಟಕದ ಹಿತಾಸಕ್ತಿಯ ಬಗ್ಗೆ ಪ್ರಶ್ನೆ ಬಂದಾಗ ಅವರು ಸ್ಪಂದಿಸುತ್ತಿದ್ದ ರೀತಿ ಅವರಿಗೆ ಆ ಭಾಗದ ಮೇಲಿರುವ ಅತೀವ ಅಭಿಮಾನಕ್ಕೆ ದ್ಯೋತಕವಾಗಿ ಎಂದಿದ್ದಾರೆ.

ಪಾರ್ಥಿವ ಶರೀರ ದರ್ಶನ ಪಡೆದ ಸಿಎಂ:ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮಣಿಪಾಲ್ ಆಸ್ಪತ್ರೆಗೆ ದೌಡಾಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಪಾರ್ಥಿವ ಶರೀರ ದರ್ಶನ ಮಾಡಿ ನಮನ ಸಲ್ಲಿಸಿದರು. ನಂತರ ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿದರು. ಇಂದಿನ ಎಲ್ಲ ಕಾರ್ಯಕ್ರಮ ರದ್ದುಪಡಿಸಿ ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.

ಯಡಿಯೂರಪ್ಪ ಸಂತಾಪ: ಜನಪ್ರಿಯ ಶಾಸಕರು, ವಿಧಾ‌ನಸಭೆಯ ಉಪಸಭಾಧ್ಯಕ್ಷರಾಗಿದ್ದ ಆನಂದ್​ ಮಾಮನಿ ಅವರು ವಿಧಿವಶರಾದ ಸುದ್ದಿ ಅತ್ಯಂತ ಆಘಾತವನ್ನುಂಟು ಮಾಡಿದೆ. ಅವರ ನಿಧನದಿಂದ ಈ ನಾಡು ಒಬ್ಬ ಉತ್ತಮ ನಾಯಕನನ್ನು ಕಳೆದುಕೊಂಡಿದೆ. ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ‌. ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.

ಟ್ವೀಟ್ ಮಾಡಿ ಸಿ.ಟಿ ರವಿ ಸಂತಾಪ:ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಮಾಮನಿ ಅವರ ಅಕಾಲಿಕ ನಿಧನ ಆಘಾತವನ್ನುಂಟು ಮಾಡಿದೆ. ಶ್ರೀ ಗುರು ದತ್ತಾತ್ರೇಯರು ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಕರುಣಿಸಲಿ. ಅಗಲಿದ ಅವರ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಲಿ ಎಂದು ನಾವೆಲ್ಲರು ಪ್ರಾರ್ಥಿಸೋಣ ಎಂದಿದ್ದಾರೆ.

ಕುಮಾರಸ್ವಾಮಿ ಸಂತಾಪದ ಟ್ವೀಟ್:ಸ್ನೇಹಶೀಲತೆ, ಸರಳತೆ, ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದ ವಿಧಾ‌ನಸಭೆ ಉಪ ಸಭಾಧ್ಯಕ್ಷರಾದ ಆನಂದ್​​ ಮಾಮನಿ ಅವರು ನಿಧನರಾದರೆಂಬ ವಾರ್ತೆ ಕೇಳಿ ತೀವ್ರ ಆಘಾತವಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚೇತರಿಸಿಕೊಳ್ಳುತ್ತಾರೆಂಬ ವಿಶ್ವಾಸವಿತ್ತು. ಆದರೆ, ಅವರು ಎಲ್ಲರನ್ನೂ ಬಿಟ್ಟು ಅಗಲಿದ್ದು ನೋವು ತಂದಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ‌ ಎಂದಿದ್ದಾರೆ.

ಅನಿತಾ ಕುಮಾರಸ್ವಾಮಿ ಸಂತಾಪ:ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿಯವರು ಮಾಮನಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ವಿಧಾ‌ನಸಭೆ ಉಪ ಸಭಾಧ್ಯಕ್ಷ ಆನಂದ ಚಂದ್ರಶೇಖರ ಮಾಮನಿ ಅವರು ನಿಧನರಾಗಿರುವ ಸುದ್ದಿ ಕೇಳಿ ದುಃಖವಾಯಿತು. ಅವರ ಆತ್ಮಕ್ಕೆ ಆ ಭಗವಂತ ಸದ್ಗತಿ ಕರುಣಿಸಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಸಂತಾಪ ಸೂಚಿಸಿದ ಕಟೀಲ್:ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದವರಲ್ಲಿ ಮುಂಚೂಣಿಯಲ್ಲಿದ್ದ ಮುಖಂಡ ಹಾಗೂ ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ ಅವರ ಅಕಾಲಿಕ ನಿಧನ ತೀವ್ರ ಆಘಾತವನ್ನುಂಟು ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್ ಅವರು ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಮಾಮನಿ ನಿಧನಕ್ಕೆ ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಅವರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ತಂದೆ ಏರಿದ್ದ ಹುದ್ದೆಯನ್ನೇ ಅಲಂಕರಿಸಿದ್ದ ಆನಂದ ಮಾಮನಿ ಹ್ಯಾಟ್ರಿಕ್​ ಸಾಧಕ​

Last Updated : Oct 23, 2022, 11:09 AM IST

ABOUT THE AUTHOR

...view details